ನವದೆಹಲಿ[ಡಿ.19]: ಆದಾಯ ಸಂಗ್ರಹದಲ್ಲಿನ ಕುಸಿತ ಭರಿಸಿಕೊಳ್ಳಲು ಕೇಂದ್ರ ಸರ್ಕಾರ ಜಿಎಸ್‌ಟಿ ದರ ಏರಿಕೆ ಮಾಡಲಿದೆ ಮತ್ತು ಕೆಲ ಜಿಎಸ್‌ಟಿ ಸ್ತರಗಳಲ್ಲಿ ಬದಲಾವಣೆ ಮಾಡಲಿದೆ ಎಂಬ ಆತಂಕದಲ್ಲಿದ್ದ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ರಿಲೀಫ್‌ ನೀಡಲಿದೆ. ಬುಧವಾರ ಇಲ್ಲಿ ನಡೆದ ಜಿಎಸ್‌ಟಿ ಮಂಡಳಿಯಲ್ಲಿ ಇಂಥ ಯಾವುದೇ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿಲ್ಲ. ಹೀಗಾಗಿ ಭಾರೀ ಶಾಕ್‌ನ ನಿರೀಕ್ಷೆಯಲ್ಲಿದ್ದ ಉದ್ಯಮಿಗಳು ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಬುಧವಾರ ಸಭೆಯಲ್ಲಿ ಮುಖ್ಯವಾಗಿ ಆದಾಯ ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಆದಾಯ ಸೋರಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯ್ತು ಎಂದು ಮೂಲಗಳು ತಿಳಿಸಿವೆ. ಇದರ ಹೊರತಾಗಿಯೂ ಜಿಎಸ್‌ಟಿ ಮಂಡಳಿ ಬುಧವಾರದ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅವುಗಳೆಂದರೆ

- ದೇಶಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಲಾಟರಿಗಳಿಗೆ ಶೇ.28ರಷ್ಟುಏಕರೂಪ ಜಿಎಸ್‌ಟಿ ಮಾಡಲು ನಿರ್ಧರಿಸಲಾಗಿದೆ. ಇದು 2020ರ ಮಾಚ್‌ರ್‍ನಿಂದ ಜಾರಿಗೆ ಬರಲಿದೆ. ಇನ್ನು ಜುಲೈ 2017ರಿಂದಲೂ ಜಿಎಸ್‌ಟಿಆರ್‌-1 ಸಲ್ಲಿಕೆ ಮಾಡದವರು ಅದನ್ನು 2020ರ ಜನವರಿ 10ರೊಳಗೆ ಪಾವತಿ ಮಾಡಿದಲ್ಲಿ ಅವರಿಗೆ ದಂಡದಿಂದ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ. ಜೊತೆಗೆ 2017-18ನೇ ಸಾಲಿನ ಜಿಎಸ್‌ಟಿಆರ್‌-9 ಸಲ್ಲಿಕೆಗೆ ಇದ್ದ ಗಡುವನ್ನು 2020ರ ಜ.31ರವರೆಗೆ ವಿಸ್ತರಿಸಿದೆ.