ನವದೆಹಲಿ(ಮೇ.02): ಏಪ್ರಿಲ್‌ನಲ್ಲಿ ದಾಖಲೆಯ 1.41 ಲಕ್ಷ ಕೋಟಿ ರು. ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಕೊರೋನಾ ಎರಡನೇ ಅಲೆ ಎದ್ದಿರುವ ನಡುವೆಯೂ ಇಷ್ಟೊಂದು ದಾಖಲೆ ಮೊತ್ತದ ತೆರಿಗೆ ಸಂಗ್ರಹ ಆಗಿರುವುದು ಗಮನಾರ್ಹವಾಗಿದ್ದು, ಆರ್ಥಿಕತೆ ಸದೃಢಗೊಳ್ಳುತ್ತಿರುವ ಸೂಚನೆಯಾಗಿದೆ.

ಕೊರೋನಾ ನಿಯಂತ್ರಣಕ್ಕೆ ದೇಶವ್ಯಾಪಿ ಲಾಕ್‌ಡೌನ್‌ ಹೇರಿದ್ದರಿಂದ ಕಳೆದ ವರ್ಷ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ ಸಾರ್ವಕಾಲಿಕ ಕನಿಷ್ಠ 32,172 ಕೋಟಿಗೆ ಕುಸಿದಿತ್ತು. ಆದರೆ ಲಾಕ್‌ಡೌನ್‌ ಅಂತ್ಯದ ನಂತರ ಅಕ್ಟೋಬರ್‌ನಲ್ಲಿ 1 ಲಕ್ಷ ಕೋಟಿ ರು. ಮೇಲ್ಪಟ್ಟು ಸಂಗ್ರಹ ಆರಂಭವಾಗಿತ್ತು. ಈ ವರ್ಷ ಮಾಚ್‌ರ್‍ನಲ್ಲಿ 1.23 ಲಕ್ಷ ಕೋಟಿ ರು. ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆ ಒಂದೇ ತಿಂಗಳಲ್ಲಿ ಅಳಿದು ಹೋಗಿದೆ. ಒಂದು ತಿಂಗಳ ಅವಧಿಯಲ್ಲಿ ಶೇ.14ರಷ್ಟುಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ದೇಶದಲ್ಲಿನ ವಹಿವಾಟು ಶೇ.21ರಷ್ಟುವೃದ್ಧಿಸಿದ್ದು,ಇದೇ ದಾಖಲೆ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ. ಜಿಎಸ್‌ಟಿ ಸತತ 7 ತಿಂಗಳಿಂದ 1 ಲಕ್ಷ ಕೋಟಿ ರು.ಗಿಂತ ಅಧಿಕ ಮೊತ್ತದಷ್ಟುಸಂಗ್ರಹವಾಗುತ್ತಿದೆ.

1,41,384 ಲಕ್ಷ ಕೋಟಿ ರು. ಒಟ್ಟು ಸಂಗ್ರಹದಲ್ಲಿ ಸಿಜಿಎಸ್‌ಟಿ ಪಾಲು 27,837 ಕೋಟಿ ರು., ಎಸ್‌ಜಿಎಸ್‌ಟಿ 35,621 ಕೋಟಿ ರು., ಐಜಿಎಸ್‌ಟಿ 68,481 ಕೋಟಿ ರು. ಹಾಗೂ ಸೆಸ್‌ ಪಾಲು 9,445 ಕೋಟಿ ರುಪಾಯಿ.

ಮುಂದಿನ ತಿಂಗಳು ಹೊಡೆತ- ತಜ್ಞರು:

‘ಏಪ್ರಿಲ್‌ ತಿಂಗಳ ಜಿಎಸ್‌ಟಿ ಅಂಶಗಳು ಹೆಚ್ಚಾಗಿ ಮಾಚ್‌ರ್‍ನ ಆರ್ಥಿಕ ಚಟುವಟಿಕೆಗೆ ಸಂಬಂಧಿಸಿರುತ್ತವೆ. ಆದರೆ ಈಗ ಕೊರೋನಾ ನಿಯಂತ್ರಣಕ್ಕೆ ದೇಶದ ಅನೇಕ ಕಡೆ ಲಾಕ್‌ಡೌನ್‌ ಹೇರಲಾಗಿದ್ದು, ಮುಂದಿನ ತಿಂಗಳ ಜಿಎಸ್‌ಟಿ ಸಂಗ್ರಹದ ಅಂಕಿ-ಅಂಶದ ಮೇಲೆ ಪರಿಣಾಮ ಬೀರಬಹುದು’ ಎಂದು ತಜ್ಞರು ಹೇಳಿದ್ದಾರೆ.

ಹೆಚ್ಚಳಕ್ಕೆ ಕಾರಣವೇನು?

- ಕೊರೋನಾ ಮೊದಲನೇ ಅಲೆ ಮುಗಿದ ನಂತರ ಆರ್ಥಿಕತೆ ಚೇತರಿಕೆ

- ನಕಲಿ ಬಿಲ್‌ ಸೃಷ್ಟಿ, ಒಂದೇ ಬಿಲ್‌ ಬಳಸಿ ವಹಿವಾಟು ಮೇಲೆ ನಿಗಾ ಇಟ್ಟಪರಿಣಾಮ

- ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ವ್ಯಾಪಾರಿಗಳಿಂದ ಜಿಎಸ್‌ಟಿ ಪಾವತಿ

- ಹೀಗಾಗಿ ದಾಖಲೆ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹ: ವಿತ್ತ ಸಚಿವಾಲಯ