ನವದೆಹಲಿ(ಜ. 01)  ಕೊರೋನಾ ಕಾರಣಕ್ಕೆ ಆತಂಕಕ್ಕೆ ಸಿಲುಕಿದ್ದ ದೇಶಧ ಆರ್ಥಿಕತೆಯನ್ನು ಬಲಪಡಿಸಲು ಎನ್ ಡಿ ಎ ಸರ್ಕಾರ ವಿವಿಧ   ಯೋಜನೆಗಳನ್ನು  ಜಾರಿ ಮಾಡಿದ್ದು ಅದರ  ಪರಿಣಾಮಗಳು ನಿಧಾನವಾಗಿ ಗೋಚರವಾಗುತ್ತಿದೆ.

ಡಿಸೆಂಬರ್‌ ತಿಂಗಳಲ್ಲಿ ದಾಖಲೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದ್ದು, ಸರ್ಕಾರಕ್ಕೆ 1.15 ಲಕ್ಷ ಕೋಟಿ ರೂ. ಆದಾಯ ಬಂದಿದೆ ಎಂದು  ಹಣಕಾಸು ಇಲಾಖೆ ಮಾಹಿತಿ ನೀಡಿದೆ.

2019  ರ ಡಿಸೆಂಬರ್ ಗೆ  ಹೋಲಿಕೆ ಮಾಡಿದರೆ ಶೇ.  12    ರಷ್ಟು ಏರಿಕೆ ದಾಖಲಿಸಿದೆ.  ಜಿಎಸ್‌ಟಿ ಸಂಗ್ರಹದಲ್ಲಿ ಅತಿ ಹೆಚ್ಚು ಜಿಗಿತ ಕಂಡಿದ್ದು, ದಾದ್ರಾ ಮತ್ತು ನಗರ ಹವೇಲಿಯಲ್ಲಿ ವರ್ಷಕ್ಕೆ ಶೇಕಡಾ 68 ರಷ್ಟು ಬೆಳವಣಿಗೆ ಕಂಡಿದೆ. 2019 ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹ 154 ಕೋಟಿ ರೂ. ಮತ್ತು 2020 ರಲ್ಲಿ ಅದು 259 ಕೋಟಿ ರೂ.ಗೆ ಏರಿದೆ.

ಮಾಸಿಕ ಐವತ್ತು ಲಕ್ಷಕ್ಕೂ ಅಧಿಕ ವಹಿವಾಟು ಮಾಡುತ್ತೀರಾ ಈ ಸುದ್ದಿ  ನೋಡಿ

ತ್ರಿಪುರವು ಶೇಕಡಾ 25 ರಷ್ಟು  ಏರಿಕೆ ಕಂಡಿದೆ. ಕೇಂದ್ರ ಜಿಎಸ್‌ಟಿ 21,365 ಕೋಟಿ ಮತ್ತು ರಾಜ್ಯ ಜಿಎಸ್‌ಟಿ 27,804 ಕೋಟಿ ರೂ. ಸಂಗ್ರಹವಾಗಿದೆ.

ಡಿಸೆಂಬರ್ ತಿಂಗಳ ಅಂತ್ಯಕ್ಕೆ ಒಟ್ಟು  ಜಿಎಸ್‌ಟಿ 57,426 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 27,050 ಕೋಟಿ ರೂ. ಸೇರಿದಂತೆ) ಮತ್ತು ಸೆಸ್ 8,579 ಕೋಟಿ ರೂ. (ಸರಕುಗಳ ಆಮದಿಗೆ ಸಂಗ್ರಹಿಸಿದ 971 ಕೋಟಿ ರೂ) ಸಂಗ್ರಹವಾಗಿದೆ. 

 ಇನ್ನು ನವೆಂಬರ್‌ ತಿಂಗಳಿಗೆ ಸಂಬಂಧಿಸಿದಂತೆ ಡಿಸೆಂಬರ್‌ 31ರವರೆಗೆ 87 ಲಕ್ಷ ಜಿಎಸ್‌ಟಿ 3ಬಿ ರಿಟರ್ನ್ಸ್‌ ಅರ್ಜಿ ಸಲ್ಲಿಕೆಯಾಗಿವೆ. ಜಿಎಸ್‌ಟಿ ಸಂಗ್ರಹದಲ್ಲಿ ಸರ್ಕಾರವು 23,276 ಕೇಂದ್ರ ಜಿಎಸ್‌ಟಿ ಹಾಗೂ 17,681 ರಾಜ್ಯ ಜಿಎಸ್‌ಟಿಗಳನ್ನು ಪಾವತಿ ಮಾಡಿದೆ. ಈ ಪಾವತಿಗಳ ನಂತರ ಕೇಂದ್ರ ಸರ್ಕಾರದ ಡಿಸೆಂಬರ್‌ನ ಆದಾಯ 44,641 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ಆದಾಯ 45,485 ಕೋಟಿ ರೂ. ಎಂದು ಹಣಕಾಸು ಇಲಾಖೆ ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಡಿಸೆಂಬರ್‌ನ ಜಿಎಸ್‌ಟಿ ಆದಾಯ ಶೇ. 15ರಷ್ಟು ಹೆಚ್ಚಾಗಿದೆ. ವಸ್ತುಗಳ ಆಮದಿನಿಂದ ಪಡೆಯುವ ಆದಾಯ ಶೇ.27 ರಷ್ಟು ಹೆಚ್ಚಾಗಿದ್ದರೆ, ದೇಶೀಯ ಸರಕು ಮತ್ತು ಸೇವೆಗಳ ವರ್ಗಾವಣೆಯಿಂದ ಶೇ. 8ರಷ್ಟು ಹೆಚ್ಚಿನ ಆದಾಯ ಸರ್ಕಾರಕ್ಕೆ ಹರಿದು ಬಂದಿದೆ.