ನವದೆಹಲಿ(ಅ.25): ಲಾಕ್‌ಡೌನ್‌ ವೇಳೆ ಸಾಲದ ಕಂತು (ಇಎಂಐ) ಪಾವತಿಸುವುದರಿಂದ ವಿನಾಯ್ತಿ ಪಡೆದವರು ಹಾಗೂ ವಿನಾಯ್ತಿ ಪಡೆಯದೆ ಕಂತು ಪಾವತಿಸಿದವರಿಬ್ಬರಿಗೂ ಕೇಂದ್ರ ಸರ್ಕಾರ ಚಕ್ರಬಡ್ಡಿಯಿಂದ ವಿನಾಯ್ತಿ ಪ್ರಕಟಿಸುವ ಮೂಲಕ ದಸರಾ ಹಬ್ಬದ ಉಡುಗೊರೆ ನೀಡಿದೆ.

2 ಕೋಟಿ ರು.ಗಿಂತ ಕಡಿಮೆ ಮೊತ್ತದ ಸಾಲ ಪಡೆದ ವ್ಯಕ್ತಿಗಳು ಅಥವಾ ಸಣ್ಣ ಉದ್ದಿಮೆಗಳು ಮಾ.1ರಿಂದ ಆ.31ರವರೆಗಿನ ಆರು ತಿಂಗಳ ಅವಧಿಗೆ ಪೂರ್ಣಾವಧಿಗೆ ಅಥವಾ ಭಾಗಶಃ ಅವಧಿಗೆ ಇಎಂಐ ಪಾವತಿ ಮುಂದೂಡಿಕೆ ಸೌಲಭ್ಯ ಪಡೆದಿದ್ದರೆ ಅವರಿಗೆ ಈ ಅವಧಿಗೆ ಚಕ್ರಬಡ್ಡಿ (ಸಾಲದ ಅಸಲಿನ ಬಡ್ಡಿ ಮೇಲೆ ವಿಧಿಸುವ ಬಡ್ಡಿ) ವಿಧಿಸುವುದಿಲ್ಲ. ಒಂದು ವೇಳೆ, ಈ ಅವಧಿಯಲ್ಲಿ ಇಎಂಐ ಪಾವತಿಸಿದ್ದರೆ ಅವರಿಗೆ ಸಾಲದ ಅಸಲಿನ ಮೇಲೆ ವಿಧಿಸುವ ಬಡ್ಡಿಗೆ ವಿಧಿಸುತ್ತಿದ್ದ ಬಡ್ಡಿ (ಚಕ್ರಬಡ್ಡಿ)ಯಷ್ಟುಹಣವನ್ನು ಕ್ಯಾಶ್‌ಬ್ಯಾಕ್‌ ಅಥವಾ ಪ್ರೋತ್ಸಾಹಧನದ ರೂಪದಲ್ಲಿ ಬ್ಯಾಂಕ್‌ ಖಾತೆಗೆ ಮರುಪಾವತಿ ಮಾಡಲಾಗುತ್ತದೆ. ಇದೇ ಅವಧಿಯಲ್ಲಿ ಸಾಲವನ್ನು ಸಂಪೂರ್ಣ ತೀರಿಸಿದವರಿಗೆ ಅವರ ಸಾಲ ಇದ್ದಷ್ಟುಅವಧಿಗೆ ವಿಧಿಸಲಾದ ಬಡ್ಡಿಯ ಚಕ್ರಬಡ್ಡಿ ಮೊತ್ತವನ್ನು ಮರಳಿಸಲಾಗುತ್ತದೆ.

ಶುಕ್ರವಾರ ರಾತ್ರಿ ಈ ಕುರಿತು ಹಣಕಾಸು ಸೇವೆಗಳ ಇಲಾಖೆ ಆರ್‌ಬಿಐನಲ್ಲಿ ನೋಂದಾಯಿಸಲ್ಪಟ್ಟಎಲ್ಲಾ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಗೆ ಆದೇಶ ಹೊರಡಿಸಿದ್ದು, ಫೆ.29ಕ್ಕೆ ಬಾಕಿಯಿದ್ದ ಸಾಲದ ಅಸಲಿನ ಆಧಾರದ ಮೇಲೆ ಚಕ್ರಬಡ್ಡಿ ವಿನಾಯ್ತಿ ಅಥವಾ ಕ್ಯಾಶ್‌ಬ್ಯಾಕ್‌ ನೀಡುವಂತೆ ಸೂಚಿಸಿದೆ. ಸುಸ್ತಿಸಾಲಗಾರರಿಗೆ (ಎನ್‌ಪಿಎ) ಈ ಸೌಲಭ್ಯ ಅನ್ವಯಿಸುವುದಿಲ್ಲ.

ಲಾಕ್‌ಡೌನ್‌ ವೇಳೆಯಲ್ಲಿ ಸಾಲದ ಕಂತು ಪಾವತಿ ಮುಂದೂಡುವ ಸೌಲಭ್ಯ ನೀಡಿದ್ದ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಆ ಅವಧಿಯಲ್ಲೂ ಸಾಲಗಾರರಿಗೆ ಬಡ್ಡಿ ಹಾಗೂ ಚಕ್ರಬಡ್ಡಿ ವಿಧಿಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಚಕ್ರಬಡ್ಡಿ ಪಾವತಿಯಿಂದ ವಿನಾಯ್ತಿ ನೀಡಿ ಹಾಗೂ ಇಎಂಐ ಪಾವತಿಸಿದವರಿಗೆ ಕ್ಯಾಶ್‌ಬ್ಯಾಕ್‌ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಯಾರಾರ‍ಯರಿಗೆ ಈ ಸೌಲಭ್ಯ ಲಭ್ಯ?:

ಈ ಸೌಲಭ್ಯ 2 ಕೋಟಿ ರು.ಗಿಂತ ಕಡಿಮೆ ಮೊತ್ತದ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಕ್ರೆಡಿಟ್‌ ಕಾರ್ಡ್‌ ಬಿಲ್‌ ಪಾವತಿ ಬಾಕಿ, ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ (ಎಂಎಸ್‌ಎಂಇ) ಸಾಲಕ್ಕೆ ಅನ್ವಯಿಸುತ್ತದೆ. ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಚಕ್ರಬಡ್ಡಿ ವಿನಾಯ್ತಿ ನೀಡಿದ ನಂತರ ಆ ಹಣವನ್ನು ಸರ್ಕಾರವು ಹಣಕಾಸು ಸಂಸ್ಥೆಗಳಿಗೆ ಮರುಪಾವತಿ ಮಾಡಲಿದೆ. ಇದರಿಂದ ಸರ್ಕಾರಕ್ಕೆ ಸುಮಾರು 6500 ಕೋಟಿ ರು. ಹೊರೆಯಾಗಲಿದೆ ಎಂದು ಹೇಳಲಾಗಿದೆ.

ನಿಮಗೆ ಎಷ್ಟುಹಣ ಉಳಿತಾಯ? ಎಷ್ಟು ಕ್ಯಾಶ್‌ಬ್ಯಾಕ್‌ ಸಿಗಲಿದೆ?

ಬ್ಯಾಂಕುಗಳ ಅಂದಾಜು ಲೆಕ್ಕಾಚಾರದ ಪ್ರಕಾರ, ಶೇ.8ರ ಬಡ್ಡಿ ದರದಲ್ಲಿ 1 ಕೋಟಿ ರು. ಗೃಹ ಸಾಲ ಪಡೆದ ವ್ಯಕ್ತಿಗೆ ಸುಮಾರು 16,000 ರು. ಚಕ್ರಬಡ್ಡಿ ಪಾವತಿಯಿಂದ ವಿನಾಯ್ತಿ ಸಿಗಲಿದೆ ಅಥವಾ ಅಷ್ಟೇ ಮೊತ್ತದ ಕ್ಯಾಶ್‌ಬ್ಯಾಕ್‌ ಸಿಗಲಿದೆ. ಬಾಕಿಯಿರುವ ಅಸಲು, ಸಾಲದ ಒಟ್ಟು ಮೊತ್ತ ಹಾಗೂ ಬಡ್ಡಿ ದರಕ್ಕೆ ತಕ್ಕಂತೆ ಈ ಮೊತ್ತ ವ್ಯತ್ಯಾಸವಾಗಬಹುದು.