ನವದೆಹಲಿ(ಫೆ.25): ಆತ್ಮನಿರ್ಭರ ಭಾರತದ ಕನಸು ನನಸು ಮಾಡುವಲ್ಲಿ ಖಾಸಗಿ ವಲಯ ಭಾಗಿದಾರಿಕೆ ಅತ್ಯಂತ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ, ಸರ್ಕಾರದ ಯೋಜನೆಗಳಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳು ಭಾಗಿಯಾಗಲು ಇದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವು ಮಾಡಿದೆ. ಹೀಗಾಗಿ ಇನ್ನು ಮುಂದೆ ಸರ್ಕಾರದ ಯೋಜನೆಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಸಿಗುವಷ್ಟೇ ಆದ್ಯತೆ ಖಾಸಗಿ ವಲಯದ ಬ್ಯಾಂಕ್‌ಗಳಿಗೂ ಸಿಗಲಿದೆ.

ಈ ಕುರಿತು ಬುಧವಾರ ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ‘ಖಾಸಗಿ ಬ್ಯಾಂಕ್‌ಗಳು ಇನ್ನು ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಸಮಾನ ಪಾಲುದಾರರು. ಸಾಮಾಜಿಕ ಕಲ್ಯಾಣದ ಯೋಜನೆಗಳ ಮತ್ತಷ್ಟುವಿಸ್ತರಣೆ ಮತ್ತು ಗ್ರಾಹಕ ಸ್ನೇಹಿ ಕ್ರಮಗಳನ್ನು ಮತ್ತಷ್ಟುಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ’ ಎಂದಿದ್ದಾರೆ.

ಬ್ಯಾಂಕ್‌ಗಳಿಗೆ ಏನು ಲಾಭ?:

ಇದುವರೆಗೆ ಸರ್ಕಾರದ ಸಂಬಂಧಿತ ಬ್ಯಾಂಕಿಂಗ್‌ ಸೇವೆಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮಾತ್ರವೇ ಪಡೆದುಕೊಳ್ಳಬಹುದಿತ್ತು. ಅಂದರೆ ತೆರಿಗೆ ಸಂಗ್ರಹ, ಪಿಂಚಣಿ ಪಾವತಿ, ಸಣ್ಣ ಉಳಿತಾಯ ಯೋಜನೆಗಳನ್ನು ಇನ್ನು ಖಾಸಗಿ ಬ್ಯಾಂಕ್‌ಗಳು ಆರಂಭಿಸಬಹುದು. ಇದಲ್ಲದೆ ಮುಂದಿನ ದಿನಗಳಲ್ಲಿ ಖಾಸಗಿ ಬ್ಯಾಂಕ್‌ಗಳಿಗೆ ಸರ್ಕಾರಕ್ಕೆ ಸಂಬಂಧಿಸಿದ ಇತರೆ ವ್ಯವಹಾರ ನಡೆಸಲೂ ಆರ್‌ಬಿಐ ಅನುಮತಿ ನೀಡಬಹುದು. ಕೆಲ ಖಾಸಗಿ ಬ್ಯಾಂಕ್‌ಗಳಿಗೂ ಈವರೆಗೆ ಇಂಥ ಅವಕಾಶ ಇತ್ತಾದರೂ ಅಂಥ ಬ್ಯಾಂಕ್‌ಗಳ ಪ್ರಮಾಣ ತೀರಾ ಕಡಿಮೆ ಇತ್ತು.

ಗ್ರಾಹಕರಿಗೆ ಏನು ಲಾಭ?:

ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ನಡುವೆ ಸ್ಪರ್ಧೆಯ ಪರಿಣಾಮ, ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಸಿಗುವ ಸಾಧ್ಯತೆ. ಗ್ರಾಹಕ ಸೇವೆಯಲ್ಲಿ ಇನ್ನಷ್ಟುಸುಧಾರಣೆ. ಹೊಸ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಖಾಸಗಿ ಬ್ಯಾಂಕ್‌ಗಳಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ.