ಖರೀದಿ ಬಳಿಕ ಬಿಲ್ ಕೇಳುವ ಅಭ್ಯಾಸವನ್ನು ಗ್ರಾಹಕರಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ್' ಎಂಬ ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಇಂದಿನಿಂದ ಪ್ರಾರಂಭಿಸಿದೆ. ಪ್ರಾರಂಭಿಕ ಹಂತದಲ್ಲಿ ಈ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ.
ನವದೆಹಲಿ (ಸೆ.1): ಜಿಎಸ್ ಟಿ ಲಕ್ಕಿ ಡ್ರಾ 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆಯನ್ನು ಇಂದು (ಶುಕ್ರವಾರ) 6 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಗಾಗಿ ಈ ಹಣಕಾಸು ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 30 ಕೋಟಿ ರೂ. ನಿಧಿಯನ್ನು ಕೂಡ ಮೀಸಲಿಟ್ಟಿವೆ. ಅಸ್ಸಾಂ, ಗುಜರಾತ್, ಹರಿಯಾಣ ರಾಜ್ಯಗಳಲ್ಲಿ ಹಾಗೂ ಪಾಂಡಿಚೇರಿ, ದಮನ್ ಹಾಗೂ ದಿಯು, ದಾದ್ರ ಹಾಗೂ ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೈಲಟ್ ಯೋಜನೆಯಾಗಿ 'ಮೇರಾ ಬಿಲ್ ಮೇರಾ ಅಧಿಕಾರ್' ಅನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯ ಮೊಬೈಲ್ ಆ್ಯಪ್ ಅನ್ನು ಈ ತನಕ 50 ಸಾವಿರಕ್ಕೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಲಾ ಮಾಹಿತಿ ನೀಡಿದ್ದಾರೆ. ಇನ್ನು 6 ರಾಜ್ಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗಿರುವ ಈ ಯೋಜನೆಯಡಿಯಲ್ಲಿ ಬಹುಮಾನದ ಹಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮ ಪ್ರಮಾಣದಲ್ಲಿ ಕೊಡುಗೆ ನೀಡಲಿವೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.
ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆ ಜಾರಿ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 2017ರಲ್ಲಿ ಪರಿಚಯಿಸಲ್ಪಟ್ಟ ಜಿಎಸ್ ಟಿ ಭಾರತದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ನಿರ್ಣಾಯಕ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಬಿಲ್ ಕೇಳುವಂತೆ ಗ್ರಾಹಕರನ್ನು ಉತ್ತೇಜಿಸಲು ಹಾಗೂ B2C ಅನುಸರಣೆಯನ್ನು ಸುಧಾರಿಸಲು ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಜಿಎಸ್ ಟಿ ಜಾರಿಯಿಂದ ಈ ತನಕದ ಬೆಳವಣಿಗೆಗಳನ್ನು ವಿವರಿಸುವ ವಿಡಿಯೋವೊಂದನ್ನು ಕೂಡ ಶೇರ್ ಮಾಡಿದ್ದಾರೆ. ಈ ಯೋಜನೆಯ ಜಾರಿ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಇಂದು ಗುರ್ಗಾಂವ್ ಮಾರುಕಟ್ಟೆಗೆ ಸ್ವತಃ ಭೇಟಿ ನೀಡಲಿದ್ದಾರೆ.
ಪ್ರತಿ ತಿಂಗಳು 810 ಲಕ್ಕಿ ಡ್ರಾ
ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 810 ಲಕ್ಕಿ ಡ್ರಾಗಳನ್ನು ಮಾಡಲಾಗುವುದು. ಹಾಗೆಯೇ ಪ್ರತಿ ತ್ರೈಮಾಸಿಕದಲ್ಲಿ 2 ಬಂಪರ್ ಲಕ್ಕಿ ಡ್ರಾಗಳನ್ನು ಮಾಡಲಾಗುವುದು. ತಿಂಗಳ ವಿತ್ ಡ್ರಾಗಳಲ್ಲಿ 800 ಜಿಎಸ್ ಟಿ ಇನ್ ವಾಯ್ಸ್ ಗಳ ಲಕ್ಕಿ ಡ್ರಾಗಳನ್ನು ಮಾಡಲಾಗುವುದು. ಪ್ರತಿ ವಿಜೇತರಿಗೆ ತಲಾ 10 ಸಾವಿರ ರೂ. ಮೌಲ್ಯದ ಬಹುಮಾನ ಸಿಗಲಿದೆ. ಹಾಗೆಯೇ ತಲಾ 10ಲಕ್ಷ ರೂ. ಬಹುಮಾನ ಹೊಂದಿರುವ 10 ಡ್ರಾಗಳನ್ನು ಮಾಡಲಾಗುವುದು. ಪ್ರತಿ ತ್ರೈಮಾಸಿಕದಲ್ಲಿ ಮಾಡುವ ಎರಡು ಡ್ರಾಗಳಿಗೆ ತಲಾ 1 ಕೋಟಿ ರೂ. ಬಹುಮಾನ ಸಿಗಲಿದೆ.
ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ 90 ಕೋಟಿ ವಂಚನೆ..!
ಈ ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಏನು?
ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ನೋಂದಣಿಗೊಂಡಿರುವ ವ್ಯಾಪಾರಿಗಳು ಗ್ರಾಹಕರಿಗೆ ವಿತರಿಸಿರುವ ಎಲ್ಲ ಇನ್ ವಾಯ್ಸ್ ಗಳು 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಹೊಂದಿವೆ.ಇ ನ್ನು ಲಕ್ಕಿ ಡ್ರಾಗೆ ಕನಿಷ್ಠ ಖರೀದಿ ಮೌಲ್ಯ 200ರೂ. ಆಗಿದ್ದು, ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ ಗರಿಷ್ಠ 25 ಇನ್ ವಾಯ್ಸ್ ಅನ್ನು ಇಂದಿನಿಂದ (ಸೆಪ್ಟೆಂಬರ್ 1ರಿಂದ) ಅಪ್ಲೋಡ್ ಮಾಡಬಹುದು. ಇನ್ನು 'ಮೇರಾ ಬಿಲ್ ಮೇರಾ ಅಧಿಕಾರ್' ಮೊಬೈಲ್ ಅಪ್ಲಿಕೇಷನ್ ಅನ್ನು ಐಒಸ್ ಹಾಗೂ ಆಂಡ್ರಾಯ್ಡ್ ಪ್ಲಾರ್ಟ್ ಫಾರ್ಮ್ಸ್ ಎರಡರಲ್ಲೂ ಸಿಗುವಂತೆ ಮಾಡಬಹುದು. ಇನ್ನು ಆಪ್ ನಲ್ಲಿ ಅಪ್ಲೋಡ್ ಮಾಡಿದ ಇನ್ ವಾಯ್ಸ್ ಮಾರಾಟಗಾರರ ಜಿಎಸ್ ಟಿನ್, ಇನ್ ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಹಾಗೂ ತೆರಿಗೆ ಮೊತ್ತವನ್ನು ಕೂಡ ಹೊಂದಿರಬೇಕು.
