ನವದೆಹಲಿ(ಜ.11): ಕಪ್ಪು ಹಣದ ವಿರುದ್ಧದ ಹೋರಾಟವನ್ನು ಇನ್ನಷ್ಟುತೀವ್ರಗೊಳಿಸಿರುವ ಕೇಂದ್ರ ಸರ್ಕಾರ ವಿದೇಶದಲ್ಲಿ ಭಾರತೀಯರು ಹೊಂದಿರುವ ಅಘೋಷಿತ ಆಸ್ತಿ ಹಾಗೂ ಕಪ್ಪು ಹಣದ ಕುರಿತು ನಿರ್ದಿಷ್ಟವಾಗಿ ತನಿಖೆ ನಡೆಸಲು ಆದಾಯ ತೆರಿಗೆಯ ತನಿಖಾ ವಿಭಾಗಗಳಲ್ಲಿ ವಿಶೇಷ ವಿಭಾಗವೊಂದನ್ನು ಸ್ಥಾಪನೆ ಮಾಡಿದೆ.

ದಾಳಿ, ವಶ, ತೆರಿಗೆ ವಂಚನೆ ಪತ್ತೆಗೆ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ 14 ತನಿಖಾ ಮಹಾನಿರ್ದೇಶನಾಲಯಗಳನ್ನು ಹೊಂದಿದೆ. ಅದರಡಿ ಕೇಂದ್ರ ಸರ್ಕಾರ ವಿದೇಶಿ ಆಸ್ತಿ ತನಿಖಾ ವಿಭಾಗವೊಂದನ್ನು ಇತ್ತೀಚೆಗೆ ಸ್ಥಾಪನೆ ಮಾಡಿದೆ. ಆದಾಯ ತೆರಿಗೆ ಇಲಾಖೆಯಲ್ಲಿದ್ದ 69 ಹುದ್ದೆಗಳನ್ನು ಹೊಸ ವಿಭಾಗಕ್ಕೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಳೆದ ನವೆಂಬರ್‌ನಲ್ಲಿ ವರ್ಗಾವಣೆ ಮಾಡಿದೆ. ಇದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಪ್ಪು ಹಣ ನಿಗ್ರಹಕ್ಕಾಗಿ ಕೇಂದ್ರ ಸರ್ಕಾರ ಹಲವು ದೇಶಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ ಈ ಹಿಂದೆಯೇ ಒಪ್ಪಂದ ಹೊಂದಿರುವ ದೇಶಗಳ ಜತೆ ಮರು ಮಾತುಕತೆ ನಡೆಸುತ್ತಿದೆ. ಇದರ ಫಲವಾಗಿ ಸಾಕಷ್ಟುಪ್ರಮಾಣದ ಅಂಕಿ-ಅಂಶಗಳು ಭಾರತಕ್ಕೆ ಲಭಿಸುತ್ತಿವೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ಮಟ್ಟದ ಈ ದಾಖಲೆಗಳನ್ನು ಇಟ್ಟುಕೊಂಡು ಭಾರತೀಯರು ವಿದೇಶದಲ್ಲಿ ಹೊಂದಿರಬಹುದಾದ ಅಕ್ರಮ ಆಸ್ತಿ ಪತ್ತೆ ಹಚ್ಚುವುದು ಕೇಂದ್ರದ ಉದ್ದೇಶ. ಅಗಾಧ ಪ್ರಮಾಣದಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿಯೇ ಹೊಸ ವಿಭಾಗವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಪನಾಮಾ ಪೇಪ​ರ್‍ಸ್ನಂತಹ ಜಾಗತಿಕ ತೆರಿಗೆ ಮಾಹಿತಿ ಸೋರಿಕೆ ಪ್ರಕರಣಗಳ ಕುರಿತಂತೆಯೂ ಹೊಸ ವಿಭಾಗದ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.