*ಕೇಂದ್ರ ಸರ್ಕಾರದಿಂದ ಹೊಸ ಕರಡು ನೀತಿ ಸಂಹಿತೆ ಬಿಡುಗಡೆ*ಸ್ವಯಂ ಸಂಹಿತೆ ಪಾಲಿಸದಿದ್ದರೆ ಮುಂದೆ ಕಡ್ಡಾಯದ ಎಚ್ಚರಿಕೆ

ನವದೆಹಲಿ (ಮಾ. 18): ತಮ್ಮ ಉತ್ಪನ್ನಗಳ ಮಾರಾಟ ಹೆಚ್ಚಿಸಲು ವೈದ್ಯಕೀಯ ಚಿಕಿತ್ಸಾ ಉಪಕರಣಗಳ ತಯಾರಕರು, ವೈದ್ಯರಿಗೆ ಯಾವುದೇ ರೀತಿಯ ಉಡುಗೊರೆ ನೀಡುವುದನ್ನು ನಿಷೇಧಿಸುವ ಹೊಸ ಕರಡು ನೀತಿ ಸಂಹಿತೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸದ್ಯಕ್ಕೆ ಈ ನೀತಿ ಸಂಹಿತೆಯನ್ನು ಕಂಪನಿಗಳು ಸ್ವಯಂ ಪಾಲಿಸಬೇಕು. ಒಂದು ವೇಳೆ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸದೆ ಹೋದಲ್ಲಿ ಮುಂದೆ ಅದನ್ನು ಶಾಸನಾತ್ಮಕ ಕಾಯ್ದೆ ರೂಪದಲ್ಲಿ ಜಾರಿಗೆ ತಂದು ಶಿಕ್ಷೆಯ ಅವಕಾಶ ಕಲ್ಪಿಸುವುದಾಗಿ ಎಚ್ಚರಿಸಿದೆ.

ದೇಶದ ಔಷಧ ಉದ್ಯಮ ವಲಯ ಇಂಥದ್ದೇ ನೀತಿ ಹೊಂದಿದೆಯಾದರೂ, ಇದೀಗ ಚಿಕಿತ್ಸಾ ಉಪಕರಣಗಳ ತಯಾರಕರಿಗೆ ಪ್ರತ್ಯೇಕ ನಿಯಮ ರೂಪಿಸಲಾಗಿದೆ. ಸರ್ಕಾರ ರೂಪಿಸಿರುವ ಹೊಸ ಸಂಹಿತೆ ಅನ್ವಯ, ಉಪಕರಣ ತಯಾರಕರು, ವೈದ್ಯರಿಗೆ ಯಾವುದೇ ರೀತಿ ಉಡುಗೊರೆ ಅಥವಾ ಥಿಯೇಟರ್‌, ಸ್ಪಾ, ಕ್ರೀಡಾ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು, ಪ್ರವಾಸಕ್ಕೆ ತೆರಳುವ ವೆಚ್ಚ ಭರಿಸುವ ಆಫರ್‌ ನೀಡುವಂತಿಲ್ಲ. ಆದರೆ ಸೀಮಿತ ಪ್ರಮಾಣದಲ್ಲಿ ವೈದ್ಯರಿಗೆ ಶೈಕ್ಷಣಿಕ ವಸ್ತುಗಳನ್ನು ನೀಡಬಹುದಾಗಿದೆ.

ಆದರೆ ಇಂಥ ಕಂಪನಿಗಳು ವೈದ್ಯಕೀಯ ಶಾಲೆಗಳು, ಬೋಧನಾ ಆಸ್ಪತ್ರೆಗಳು, ಆಸ್ಪತ್ರೆಗಳು ಮತ್ತು ಇತರೆ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಿಗೆ ಅನುದಾನ ನೀಡಬಹುದು ಎಂದು ವರದಿ ಹೇಳಿದೆ. ಈ ಕರಡು ವರದಿಗೆ ಉದ್ಯಮ ವಲಯದಿಂದ ಏ.15ರವರೆಗೂ ಅಭಿಪ್ರಾಯ ಆಹ್ವಾನಿಸಲಾಗಿದೆ.

ಇದನ್ನೂ ಓದಿ:Spam Box Mail ಸ್ಪಾಮ್ ಬಾಕ್ಸ್ ಸೇರಿದ ಮೇಲ್‌ನಿಂದ ಕೈತಪ್ಪಿದ ಎಂಬಿಬಿಎಸ್ ಸೀಟ್, ನೆರವಿಗೆ ಬಂದ ಹೈಕೋರ್ಟ್!

ಕೋವಿಡ್‌ ಮತ್ತಷ್ಟುಇಳಿಕೆ: 2539 ಕೇಸು, 60 ಸಾವು: ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 2,539 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 60 ಸೋಂಕಿತರು ಸಾವಿಗೀಡಾಗಿದ್ದಾರೆ.

ದೈನಂದಿನ ಪಾಸಿಟಿವಿಟಿ ದರವು ಶೇ. 0.35ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.42ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯು 30,799ಕ್ಕೆ ಕುಸಿದಿದೆ. ಕೋವಿಡ್‌ ಚೇತರಿಕೆ ದರವು ಶೇ. 98.73ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 180.80 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

ಕೋವಿಡ್‌ ಬಗ್ಗೆ ಎಚ್ಚರ ವಹಿಸಿ: ಡಬ್ಲ್ಯುಎಚ್‌ಓ: ಜಾಗತಿಕ ಮಟ್ಟದಲ್ಲಿ ಮತ್ತೆ ಕೋವಿಡ್‌ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಯಾವುದೇ ದೇಶಗಳು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದೇ ಎಚ್ಚರವಾಗಿರಬೇಕು. ಈಗಿನ ಪ್ರಕರಣಗಳು ಸುಳಿವು ಮಾತ್ರ. ಮುಂದೆ ಇನ್ನಷ್ಟುಸೋಂಕು ಹೆಚ್ಚಬಹುದು ಎಂದಿದೆ.

ಇದನ್ನೂ ಓದಿವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ಡಾ.ಕೆ.ಸುಧಾಕರ್

ಮತ್ತೆ 6 ಲಕ್ಷ ಕೇಸ್‌: ಕೊರಿಯಾ ದಾಖಲೆ: ಮಂಗಳವಾರವಷ್ಟೇ ದಾಖಲೆಯ 4 ಲಕ್ಷ ಕೋವಿಡ್‌ ಕೇಸು ಪತ್ತೆಯಾಗಿದ್ದ ದಕ್ಷಿಣ ಕೊರಿಯಾದಲ್ಲಿ ಒಮಿಕ್ರೋನ್‌ ತಳಿಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಾರ್ವಕಾಲಿಕ ಗರಿಷ್ಠ 6 ಲಕ್ಷ ಪ್ರಕರಣ ದಾಖಲಾಗಿದೆ. ಏತನ್ಮಧ್ಯೆ, ಚೀನಾದಲ್ಲಿ ಸತತ 2 ದಿನದಿಂದ ಕೋವಿಡ್‌ ಕೇಸು ಇಳಿಯುತ್ತಿದ್ದು, ಬುಧವಾರ 1226 ಹೊಸ ಕೇಸು ದೃಢಪಟ್ಟಿದೆ.