ನವದೆಹಲಿ(ಜ.22): ದೇಶದ ಆರ್ಥಿಕ ವರ್ಷವನ್ನು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸಕ್ತ ಏಪ್ರಿಲ್-ಮಾರ್ಚ್ ಆರ್ಥಿಕ ವರ್ಷದ ಬದಲಾಗಿ ಜನೆವರಿ-ಡಿಸೆಂಬರ್‌ ಆರ್ಥಿಕ ವರ್ಷವನ್ನಾಗಿ ಪರಿಗಣಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಕೃಷಿ ವಲಯದ ಉತ್ಪಾದನೆ ಮತ್ತು ಆದಾಯದ ಲೆಕ್ಕ ಪರಿಗಣನೆಗೆ ತೆಗೆದುಕೊಳ್ಳುವ ಸಲುವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಕೇಂದ್ರ ಬಜೆಟ್ ಮಂಡಿಸುವುದಕ್ಕೂ ಮೊದಲು ಕೃಷಿ ವಲಯದ ಉತ್ಪಾದನೆ ಮತ್ತು ಆದಾಯದ ಲೆಕ್ಕಾಚಾರ ಸಿಗುವಂತೆ ಮಾಡಲು ಆರ್ಥಿಕ ವರ್ಷವನ್ನು ಬದಲಾವಣೆ ಮಾಡುವ ಅವಶ್ಯಕತೆ ಇದೆ ಎಂಬುದು ಹಲವರ ವಾದವಾಗಿದೆ.

ಅದರಂತೆ ಕಳೆದ ವರ್ಷ ನಡೆದ ನೀತಿ ಆಯೋಗದ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಹಣಕಾಸು ವರ್ಷವನ್ನು ಬದಲಿಸುವ ಪರ ಮಾತನಾಡಿದ್ದರು.