ನವದೆಹಲಿ(ಸೆ.3): ಒನ್ ನೇಶನ್ ಒನ್ ಟ್ಯಾಕ್ಸ್ ಹೆಸರಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ), ದೇಶದ ತೆರಿಗೆ ವ್ಯವಸ್ಥೆಯನ್ನು ಬದಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಆದರೆ ಜಿಎಸ್‌ಟಿ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ಖರ್ಚು ಮಾಡಿದ ಹಣ ಮಾತ್ರ ದಿಗಿಲು ಮೂಡಿಸುವಂತಿದೆ.

ಹೌದು, ಜಿಎಸ್‌ಟಿ ಜಾರಿಯಾದಾಗಿನಿಂದ ಇದರ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರ ಬರೋಬ್ಬರಿ 132.38 ಕೋಟಿ ರೂ. ಖರ್ಚು ಮಾಡಿದೆ. ಈ ಕುರಿತು ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಮುದ್ರಣ ಮಾಧ್ಯಮಗಳಲ್ಲಿ ಜಿಎಸ್‌ಟಿ ಕುರಿತು ಜಾಹೀರಾತು ನೀಡಲು 132.38 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ.

ಜಿಎಸ್‌ಟಿಗೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಪ್ರಮುಖ ಪ್ರಚಾರ ರಾಯಭಾರಿಯಾಗಿದ್ದು, ವಿವಿಧ ಕ್ಷೇತ್ರದ ದಿಗ್ಗಜರನ್ನೂ ಕೂಡ ಜಿಎಸ್‌ಟಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

ಇನ್ನೂ ಅಚ್ಚರಿಯ ವಿಷಯವೆಂದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಜಿಎಸ್‌ಟಿ ಕುರಿತು ಜಾಹೀರತು ನೀಡಿಯೇ ಇಲ್ಲ. ಹೀಗಾಗಿ ಈ ವಿಭಾಗದ ಜಾಹೀರಾತಿಗಾಗಿ ಹಣ ಖರ್ಚು ಮಾಡಲಾಗಿಲ್ಲ ಎಂಬ ಅಂಶ ಗೊತ್ತಾಗಿದೆ.