Asianet Suvarna News Asianet Suvarna News

ಅಮೆರಿಕ,ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಜಿಡಿಪಿ ಬೆಳವಣಿಗೆ ಹೋಲಿಸಿ ಚಿತ್ರ ಹಂಚಿಕೊಂಡ ಸರ್ಕಾರ

ಕಳೆದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ವಿಶ್ವದಲ್ಲೇ ಅತ್ಯಧಿಕವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗ್ರಾಫ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಅಮೆರಿಕ, ಚೀನಾ ಸೇರಿದಂತೆ ಬಲಾಢ್ಯ ಆರ್ಥಿಕತೆಗಳ ಜೊತೆಗೆ ಭಾರತದ ಜಿಡಿಪಿ ದರವನ್ನು ಹೋಲಿಕೆ ಮಾಡಿದೆ. 

Government shares picture comparing India's GDP growth with US, China and other nations anu
Author
First Published Dec 2, 2023, 4:05 PM IST

ನವದೆಹಲಿ (ಡಿ.2): ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಭಾರತದ  ಶೇ.7.6ರಷ್ಟು ಆರ್ಥಿಕ ಪ್ರಗತಿ ದರವನ್ನು ಅಮೆರಿಕ, ಚೀನಾ ಸೇರಿದಂತೆ ವಿಶ್ವದ ಇತರ ರಾಷ್ಟ್ರಗಳೊಂದಿಗೆ ತುಲನೆ ಮಾಡಿರುವ ಚಿತ್ರವೊಂದನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅತ್ಯಧಿಕ ಜಿಡಿಪಿ ಬೆಳವಣಿಗೆ ದರವನ್ನು ದಾಖಲಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಯಾಗಿರುವ ಅಮೆರಿಕದ ಜಿಡಿಪಿ ದರ ಶೇ.5.2ರಷ್ಟಿದ್ದರೆ, ಚೀನಾದ ಜಿಡಿಪಿ ಬೆಳವಣಿಗೆ ಶೇ.4.9ರಷ್ಟಿದೆ. ಇನ್ನು ರಷ್ಯಾದ ಜಿಡಿಪಿ ಶೇ.5.5ರಷ್ಟಿದ್ದರೆ, ಫಿಲಿಪ್ಪಿನ್ಸ್ ಜಿಡಿಪಿ ಬೆಳವಣಿಗೆ ದರ ಶೇ.5.9ರಷ್ಟಿದೆ. ರಾಷ್ಟ್ರೀಯ ಸಾಂಖಿಕ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ವರದಿ ಅನ್ವಯ, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ.7.6ರಷ್ಟು ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆರ್ಥಿಕ ಪ್ರಗತಿ ದರ ಶೇ.6.2ರಷ್ಟು ದಾಖಲಾಗಿತ್ತು. ಇನ್ನು ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯ ಜಿಡಿಪಿ ಪ್ರಗತಿ ದರ ಶೇ.7.7ರಷ್ಟು ದಾಖಲಾಗಿದೆ. ಕಳೆದ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಈ ಪ್ರಮಾಣ ಶೇ.9.5ರಷ್ಟು ದಾಖಲಾಗಿತ್ತು.

ವಿಶ್ವದ ಇತರ ಆರ್ಥಿಕತೆಗಳೊಂದಿಗೆ ಭಾರತದ ಜಿಡಿಪಿ ಬೆಳವಣಿಗೆ ದರವನ್ನು ಹೋಲಿಕೆ ಮಾಡಿ ಬಿಡುಗಡೆಗೊಳಿಸಿರುವ ಗ್ರಾಫ್ ಅನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಪಿಯೂಷ್ ಗೋಯಲ್ ತಮ್ಮ 'ಎಕ್ಸ್'  (ಈ ಹಿಂದಿನ ಟ್ವಿಟ್ಟರ್)  ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಗ್ರಾಫ್ ಜೊತೆಗೆ ' Bharat is unstoppable'ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಜಿಡಿಪಿ ದರ ಇನ್ನೊಮ್ಮೆ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ' ಎಂದು ಕೂಡ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. 

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.8ರ ದರದಲ್ಲಿ ಪ್ರಗತಿ ಕಂಡಿತ್ತು. ಆದರೆ ಈ ತ್ರೈಮಾಸಿಕದಲ್ಲಿ ಕೃಷಿ ವಲಯ ಶೇ.1.2, ಉತ್ಪಾದಕ ವಲಯ ಶೇ.13.9ರಷ್ಟು ಪ್ರಗತಿ ಕಂಡಿದೆ. ಇದು ಕಳೆದ ತ್ರೈಮಾಸಿಕಕ್ಕೆ ಕಡಿಮೆಯಾಗಿದೆ. ಹೀಗಾಗಿ ಕಳೆದ ತ್ರೈಮಾಸಿಕಕ್ಕಿಂತ ಕಮ್ಮಿ ದರದಲ್ಲಿ ಈ ಸಲ ಪ್ರಗತಿ ದಾಖಲಾಗಿದೆ.

ಈ ವರ್ಷ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆಯು ಶೇಕಡಾ 4.9 ರಷ್ಟಿತ್ತು. ಹೀಗಾಗಿ ಭಾರತ ಚೀನಾವನ್ನೂ ಹಿಂದಿಕ್ಕಿದಂತಾಗಿದೆ.

ಅಕ್ಟೋಬರ್ ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ದೇಶದ ಆರ್ಥಿಕ ಬೆಳವಣಿಗೆಯ ವೇಗವು ಬಲವಾಗಿ ಮುಂದುವರೆದಿದೆ ಮತ್ತು ಎರಡನೇ ತ್ರೈಮಾಸಿಕದ ಜಿಡಿಪಿ ಸಂಖ್ಯೆಯು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದರು. ಅದು ಈಗ ನಿಜವಾಗಿದೆ. ಭಾರತದ ಆರ್ಥಿಕತೆ ಎಲ್ಲರ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಿದೆ. ಈ ಮೂಲಕ ವಿಶ್ವದ ಇತರ ಮುಂದುವರಿದ ಆರ್ಥಿಕತೆಗಳು ಕೂಡ ಭಾರತವನ್ನು ಅಚ್ಚರಿಯಿಂದ ನೋಡುವಂತೆ ಮಾಡಿದೆ. 

ಜಿಡಿಪಿ ಪ್ರಗತಿ ದರದಲ್ಲಿ ಚೀನಾ ಹಿಂದಿಕ್ಕಿದ ಭಾರತ: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ, ನಿಫ್ಟಿ ಹೊಸ ದಾಖಲೆ!

ಎರಡನೇ ತ್ರೈಮಾಸಿಕದಲ್ಲಿ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 6.5% ರ ಅಂದಾಜಿಗಿಂತ ಉತ್ತಮವಾಗಿರುತ್ತದೆ ಎಂದು  ಸೆಂಟ್ರಲ್ ಬ್ಯಾಂಕ್‌ನ ನವೆಂಬರ್ ಬುಲೆಟಿನ್‌ ಲೇಖನದಲ್ಲಿ ತಿಳಿಸಲಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಹೊಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ವಿಶ್ವದ ಬೆಳವಣಿಗೆಯ ಎಂಜಿನ್ ಆಗಲು ಸಜ್ಜಾಗಿದೆ ಎಂದು ಹೇಳಿದ್ದರು. 'ಶೀಘ್ರದಲ್ಲೇ, ಭಾರತವು USD 5 ಟ್ರಿಲಿಯನ್ ಆರ್ಥಿಕತೆಯಾಗಲಿದೆ. ಮುಂದಿನ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದ್ದರು.
 

Follow Us:
Download App:
  • android
  • ios