ನವದೆಹಲಿ[ಜೂ.14]: ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ)ದ ಆರೋಗ್ಯವಿಮಾ ಯೋಜನೆಗೆ ಉದ್ಯೋಗಿಗಳು ಮತ್ತು ಉದ್ಯೋಗದಾತರು ನೀಡಬೇಕಾದ ಕೊಡುಗೆಯನ್ನು ಶೇ.6.5ರಿಂದ ಶೇ.4ಕ್ಕೆ ಇಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಹೊಸ ನಿಯಮವು 2019ರ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸರ್ಕಾರದ ಈ ಹೊಸ ನಿಯಮದಿಂದಾಗಿ ಸುಮಾರ 3.6 ಕೋಟಿ ಕಾರ್ಮಿಕರು ಮತ್ತು 12.85 ಉದ್ಯೋಗದಾತರಿಗೆ ಲಾಭವಾಗಲಿದೆ. ಉದ್ಯೋಗದಾತರಿಗೆ ಇದರಿಂದಾಗಿ ವಾರ್ಷಿಕ 5000 ಕೋಟಿ ರು. ಹಣ ಉಳಿಯಲಿದೆ.

ಸರ್ಕಾರದ ಹೊಸ ನಿಯಮದ ಅನ್ವಯ ವಿಮಾ ಯೋಜನೆಗೆ ಉದ್ಯೋಗಿಗಳು ತಮ್ಮ ವೇತನದಲ್ಲಿ ನೀಡಬೇಕಾದ ಪ್ರಮಾಣವು ಶೇ.4.75ರಿಂದ ಶೇ.3.25ಕ್ಕೆ ಮತ್ತು ಉದ್ಯೋಗದಾತರು ನೀಡಬೇಕಾದ ಪ್ರಮಾಣವು ಶೇ.1.75ರಿಂದ ಶೇ.0.75ಕ್ಕೆ ಇಳಿಯಲಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಕಾರ್ಮಿಕ ಸಚಿವಾಲಯ ಬಣ್ಣಿಸಿದೆ.

2018-19ನೇ ಸಾಲಿನಲ್ಲಿ 12.85 ಲಕ್ಷ ಉದ್ಯೋಗದಾತರು ಮತ್ತು 3.6 ಕೋಟಿ ಕಾರ್ಮಿಕರು ಇಎಸ್‌ಐ ಯೋಜನೆಗೆ 22279 ಕೋಟಿ ರು. ಹಣ ನೀಡಿದ್ದರು. ಮಾಸಿಕ 21000 ರು. ವೇತನ ಹೊಂದಿದ್ದದವರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ.