ನವದೆಹಲಿ(ಡಿ.31): 2019​-20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ವಿವರ (ಐಟಿಆರ್‌) ಸಲ್ಲಿಕೆಗೆ ಇದ್ದ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 10 ದಿನಗಳ ಕಾಲ ವಿಸ್ತರಿಸಿದ್ದು, ಡಿ.31ರ ಬದಲು ಜ.10 ಕೊನೆಯ ದಿನವಾಗಿದೆ.

ಇದೇ ವೇಳೆ ಉದ್ಯಮಗಳು ಹಾಗೂ ಕಂಪನಿಗಳ ತೆರಿಗೆ ವಿವರ ಸಲ್ಲಿಕೆಗೆ ಇದ್ದ ಕೊನೆಯ ದಿನಾಂಕವನ್ನು ಫೆ.15ರವರೆಗೆ ವಿಸ್ತರಣೆ ಮಾಡಲಾಗಿದೆ. ಅದೇ ರೀತಿ 2019-20ನೇ ಸಾಲಿನ ವಾರ್ಷಿಕ ಜಿಎಸ್‌ಟಿ ಪಾವತಿ ವಿವರ ಸಲ್ಲಿಕೆಗೆ ಇದ್ದ ಗಡುವನ್ನು ಎರಡು ತಿಂಗಳು ವಿಸ್ತರಿಸಲಾಗಿದ್ದು, ಫೆ.28 ಕೊನೆಯ ದಿನವಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ವರ್ಷ ಐಟಿಆರ್‌ ಸಲ್ಲಿಕೆಯ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿದೆ. ಜು.31ಕ್ಕೆ ಇದ್ದ ಗಡುವನ್ನು ನ.30ಕ್ಕೆ ವಿಸ್ತರಿಸಲಾಗಿತ್ತು. ಬಳಿಕ ಅದನ್ನು ಡಿ.31ಕ್ಕೆ ನಿಗದಿ ಮಾಡಲಾಗಿತ್ತು.

ವಿವಾದ್ ಸೆ ವಿಶ್ವಾಸ್ ಯೋಜನೆ

ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆ ಸಲ್ಲಿಸಲು ಕೊನೆಯ ದಿನಾಂಕವನ್ನು 2020 ಡಿಸೆಂಬರ್ 31 ರಿಂದ 2021ರ ಜನವರಿ 31 ರವರೆಗೆ ವಿಸ್ತರಿಸಲಾಗಿದೆ. ವಿವಾದ್ ಸೆ ವಿಶ್ವಾಸ್ ಯೋಜನೆಯಡಿ 2021 ರ ಜನವರಿ 30 ರೊಳಗೆ ನೀಡಬೇಕಾದ ಆದೇಶಗಳನ್ನು ನೀಡುವ ದಿನಾಂಕವನ್ನು ಕೂಡ 2021 ಜನವರಿ 31 ರವರೆಗೆ ವಿಸ್ತರಿಸಲಾಗಿದೆ.