ನವದೆಹಲಿ(ಫೆ.03): ಇತ್ತೀಚೆಗೆ ಅಡುಗೆ ಅನಿಲದ ಸಿಲಿಂಡರ್‌ (ಎಲ್‌ಪಿಜಿ) ಸಬ್ಸಿಡಿಯನ್ನು ಯಾವುದೇ ಅಧಿಕೃತ ಘೋಷಣೆ ಇಲ್ಲದೇ ನಿಲ್ಲಿಸಿದ್ದ ಕೇಂದ್ರ ಸರ್ಕಾರ, ಇದೀಗ ಬಡವರ ಇಂಧನ ಎಂದೇ ಖ್ಯಾತಿ ಪಡೆದ ಸೀಮೆಎಣ್ಣೆ ಸಬ್ಸಿಡಿಯನ್ನೂ ಸದ್ದಿಲ್ಲದೇ ನಿಲ್ಲಿಸಿದೆ. ಪರಿಣಾಮ ಇದೀಗ ರೇಶನ್‌ ಅಂಗಡಿಗಳಲ್ಲಿ ಸೀಮೆಎಣ್ಣೆ ಯನ್ನು ಮಾರುಕಟ್ಟೆದರದಲ್ಲಿ ಮಾರಲಾಗುತ್ತಿದೆ.

ಕಳೆದ ವರ್ಷ ಫೆಬ್ರವರಿಯಲ್ಲೇ ಸಬ್ಸಿಡಿ ಸೀಮೆಎಣ್ಣೆ ದರ ಹಾಗೂ ಮಾರುಕಟ್ಟೆದರವು ಸರಿ-ಸಮ ಸ್ಥಿತಿ ಬಂದಿತ್ತು. 2021-22ನೇ ಸಾಲಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಸೀಮೆಎಣ್ಣೆ ಸಬ್ಸಿಡಿಗೆ ಯಾವುದೇ ಹಣ ನೀಡಿಲ್ಲ. ಇದರಿಂದಾಗಿ ಸೀಮೆಎಣ್ಣೆ ಸಬ್ಸಿಡಿಯನ್ನು ಸರ್ಕಾರ ಪೂರ್ತಿ ನಿಲ್ಲಿಸಿದೆ ಎಂದು ತಿಳಿದುಬರುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಭರ್ಜರಿ ಏರಿಕೆ: 2016ರಲ್ಲೇ ಸರ್ಕಾರವು ತೈಲ ಕಂಪನಿಗಳಿಗೆ ಪ್ರತಿ 15 ದಿನಕ್ಕೊಮ್ಮೆ 25 ಪೈಸೆ ದರ ಹೆಚ್ಚಿಸಲು ಅನುಮತಿ ನೀಡಿತ್ತು. ಸಬ್ಸಿಡಿ ಭಾರವನ್ನು ತಗ್ಗಿಸಲು ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು. ಪರಿಣಾಮ ಕಳೆದ 4 ವರ್ಷದ ಅವಧಿಯಲ್ಲಿ ಪ್ರತಿ ಲೀ.ಸೀಮೆಎಣ್ಣೆ ಬೆಲೆ 21 ರು.ನಷ್ಟುದರ ಏರಿದೆ. ಅಂದರೆ ಮುಂಬೈನಲ್ಲಿ 4 ವರ್ಷ ಹಿಂದೆ 15 ರು.ಗೆ 1 ಲೀಟರ್‌ ಸಿಗುತ್ತಿದ್ದ ಸೀಮೆಎಣ್ಣೆ ದರ ಈಗ 36 ರು.ಗೆ ಬಂದಿದೆ. ಆದರೆ ಸೀಮೆಎಣ್ಣೆ ಮೇಲಿನ ಅವಲಂಬನೆ ತಪ್ಪಿಸಲು ಕೇಂದ್ರ ಸರ್ಕಾರವು, ಎಲ್‌ಪಿಜಿ ನೀಡುವ ‘ಉಜ್ವಲಾ ಯೋಜನೆ’ ಜಾರಿಗೊಳಿಸಿತ್ತು.

ಸಬ್ಸಿಡಿ ಹೊರೆ: 2019ರಲ್ಲಿ 4,058 ಕೋಟಿ ರು. ಸಬ್ಸಿಡಿ ನೀಡಲಾಗಿತ್ತು. ಕಳೆದ ವರ್ಷ ಇದನ್ನು 2,677 ಕೋಟಿ ರು.ಗೆ ಇಳಿಸಲಾಗಿತ್ತು. ಆದರೆ ಈ ವರ್ಷದ ಬಜೆಟ್‌ನಲ್ಲಿ ಸೀಮೆಎಣ್ಣೆಗೆ ಯಾವುದೇ ಸಬ್ಸಿಡಿ ನಿಗದಿ ಮಾಡಿಲ್ಲ.