ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ಸರ್ಕಾರ, ಈ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಯಾವೆಲ್ಲ ಬದಲಾವಣೆ ಮಾಡಿದೆ ಎಂಬ ಮಾಹಿತಿ ಇಲ್ಲಿದೆ. 

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿರುವ ಜನರಿಗೆ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸ್ಥಿರವಾಗಿರಿಸಿದೆ. ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಮುಂತಾದ ಯೋಜನೆಗಳು ಇದ್ರಲ್ಲಿ ಸೇರಿವೆ. ಹೊಸ ಬಡ್ಡಿ ದರ 2025-26 ರ ಹಣಕಾಸು ವರ್ಷದ ಜುಲೈ ಮತ್ತು ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗಲಿದೆ.

ಅನೇಕ ಜನರು ಉತ್ತಮ ಭವಿಷ್ಯಕ್ಕಾಗಿ ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ಬಡ್ಡಿ ಇಳಿಕೆಯಂತ ನಿರ್ಧಾರದಿಂದ ಹಿಂದೆ ಸರಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಶೇಡಕಾ 1 ರಷ್ಟು ಕಡಿತಗೊಳಿಸಿದ್ದು, ಬಡ್ಡಿ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದ್ರೆ ಸರ್ಕಾರ ಬಡ್ಡಿ ಇಳಿಕೆಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಅನೇಕ ತಿಂಗಳಿಂದ ಸ್ಥಿರವಾಗಿದೆ. ಈ ಹಿಂದೆ ಬಡ್ಡಿದರಗಳನ್ನು ಜನವರಿ ಮತ್ತು ಮಾರ್ಚ್ 2024 ರಲ್ಲಿ ಬದಲಾಯಿಸಲಾಗಿತ್ತು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಜೂನ್ 30 ರಂದು ಸುತ್ತೋಲೆ ಹೊರಡಿಸಿದೆ. ಜುಲೈ 1, 2025 ರಿಂದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಹಿಂದಿನಂತೆ ಮುಂದುವರೆಯಲಿವೆ. ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆ ಬಡ್ಡಿ ದರ ಶೇಕಡಾ 7.10ರಷ್ಟಿರಲಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)ದ ಬಡ್ಡಿ ದರ ಶೇಕಡಾ 7.7ರಷ್ಟಿರಲಿದೆ. ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಬಡ್ಡಿ ದರ ಶೇಕಡಾ 8.2ರಷ್ಟಿರಲಿದೆ. ಸುಕನ್ಯಾ ಸಮೃದ್ಧಿ ಯೋಜನೆ (SSY)ಗೆ ಶೇಕಡಾ 8.20ರಷ್ಟು ಬಡ್ಡಿ ಸಿಗಲಿದೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತವಾಗದಿರಲು ಕಾರಣ ಏನು? : ಆರ್ಬಿಐ ರೆಪೊ ದರದಲ್ಲಿ ಬದಲಾವಣೆಯಾದಂತೆ ಸರ್ಕಾರಿ ಯೋಜನೆಗಳ ಬಡ್ಡಿ ದರ ಹಾಗೂ ಬ್ಯಾಂಕ್ ಬಡ್ಡಿ ದರಗಳಲ್ಲಿ ಬದಲಾವಣೆಯಾಗುತ್ತದೆ. ಆರ್ ಬಿಐ ರೆಪೋ ದರವನ್ನು ಶೇಕಡಾ 1 ರಷ್ಟು ಕಡಿತಗೊಳಿಸಿದೆ. ಬ್ಯಾಂಕುಗಳು ಈಗಾಗಲೇ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಆದ್ರೆ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕಡಿಮೆ ಮಾಡದೆ ಜನರಿಗೆ ನೆಮ್ಮದಿ ನೀಡಿದೆ. ಆರ್ಬಿಐ ಹಲವಾರು ಸುತ್ತುಗಳಲ್ಲಿ ರೆಪೊ ದರವನ್ನು ಒಟ್ಟು ಶೇಕಡಾ 1 ರಷ್ಟು ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ ಇದನ್ನು ಶೇಕಡಾ 0.25 ರಷ್ಟು, ಏಪ್ರಿಲ್ನಲ್ಲಿ ಶೇಕಡಾ 0.25 ರಷ್ಟು ಮತ್ತು ಜೂನ್ನಲ್ಲಿ ಶೇಡಕಾ 0.50 ರಷ್ಟು ಕಡಿತಗೊಳಿಸಲಾಯಿತು.

ನಿನ್ನೆ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ, ಜುಲೈ 1, 2025 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 30, 2025 ಕ್ಕೆ ಕೊನೆಗೊಳ್ಳುವ 2025-26 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಬದಲಾಗುವುದಿಲ್ಲ. 2025-26 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅಂದ್ರೆ ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ಸೂಚಿಸಲಾದ ದರಗಳೇ ಮುಂದುವರೆಯಲಿವೆ ಎನ್ನಲಾಗಿದೆ. ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಕೂಡ ಯಾವುದೇ ಬದಲಾವಣೆ ಇರೋದಿಲ್ಲ. ಉಳಿತಾಯ ಠೇವಣಿ ಯೋಜನೆಯಲ್ಲಿ ಶೇಕಡಾ 4 ಬಡ್ಡಿ, ಹಿರಿಯ ನಾಗರಿಕ ಉಳಿತಾಯ ಯೋಜನೆಯಲ್ಲಿ ಶೇಕಡಾ 8.2 ಬಡ್ಡಿ, ಮಾಸಿಕ ಆದಾಯ ಖಾತೆ ಯೋಜನೆಗೆ ಶೇಕಡಾ 7.4 ಬಡ್ಡಿ ಹಾಗೂ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಗೆ ಶೇಕಡಾ 7.7 ಬಡ್ಡಿ ಲಭ್ಯವಾಗಲಿದೆ.