ಸ್ಮಾಲ್ ಸೈಜ್‌ನ ಬಟ್ಟೆ ಕೊಂಡರೂ ಹಾಕಲಾಗದೆ ಸಣ್ಣ ಇರುವವರು ಹಾಗೂ ಲಾರ್ಜ್‌ ಸೈಜ್‌ನ ಬಟ್ಟೆ ಕೊಂಡರೂ ಹಾಕಲಾಗದೇ ದಪ್ಪ ಇರುವವರು ಪರದಾಡುವುದನ್ನು ಬೈದುಕೊಳ್ಳುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ? ಕಾರಣ ಇಲ್ಲಿದೆ ನೋಡಿ.

ನವದೆಹಲಿ: ಅಯ್ಯೋ ಸ್ಮಾಲ್ ಆಗಲ್ಲ, ಲಾರ್ಜ್ ತುಂಬಾ ದೊಡ್ಡದಾಯ್ತು ಮೀಡಿಯಂ ಉದ್ದ ಆಯ್ತು ಎಂದು ಶಾಪ್‌ಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಸ್ಮಾಲ್ ಸೈಜ್‌ನ ಬಟ್ಟೆ ಕೊಂಡರೂ ಹಾಕಲಾಗದೆ ಸಣ್ಣ ಇರುವವರು ಹಾಗೂ ಲಾರ್ಜ್‌ ಸೈಜ್‌ನ ಬಟ್ಟೆ ಕೊಂಡರೂ ಹಾಕಲಾಗದೇ ದಪ್ಪ ಇರುವವರು ಪರದಾಡುವುದನ್ನು ಬೈದುಕೊಳ್ಳುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ? ಕಾರಣ ಇಲ್ಲಿದೆ ನೋಡಿ.

ಈ ಹಿಂದೆ ಬಟ್ಟೆ ತಯಾರಿಕ ಸಂಸ್ಥೆಗಳು ಈ ಸಣ್ಣ, ಮಧ್ಯಮ ಹಾಗೂ ದೊಡ್ಡ ಅಳತೆಯ ಬಟ್ಟೆಯನ್ನು ಹೊಲಿಯುವುದಕ್ಕೆ ವಿದೇಶಿ ಅಥವಾ ಪಾಶ್ಚಿಮಾತ್ಯರ ದೇಹದ ಅಳತೆಯನ್ನೇ ಮಾನದಂಡವಾಗಿ ಬಳಸಿ ಒಂದೇ ಅಳತೆಯ ಸಣ್ಣ, ಒಂದೇ ಅಳತೆಯ ಮಧ್ಯಮ ಹಾಗೂ ಒಂದೇ ಅಳತೆಯ ದೊಡ್ಡ ಸೈಜ್‌ನ ಬಟ್ಟೆಗಳನ್ನು ರೆಡಿ ಮಾಡುತ್ತಿದ್ದರು. ಆದರೆ ಪಾಶ್ಚಿಮಾತ್ಯರ ದೇಹಕ್ಕೂ ಭಾರತೀಯರಿಗೂ ಅಜಗಜಾಂತರ ವ್ಯತ್ಯಾಸವಿದೆ. ಅವರ ಎತ್ತರ ಕೈ ಕಾಲುಗಳ ಉದ್ದಕ್ಕೂ ಭಾರತೀಯರ ದೇಹಕ್ಕೂ ತುಂಬಾ ವ್ಯತ್ಯಾಸವಿದೆ ಇದೇ ಕಾರಣಕ್ಕೆ ಆ ಸೈಜ್‌ಗಳಲ್ಲಿ ಬಂದ ಬಟ್ಟೆಗಳು ಕೆಲವರಿಗೆ ಮಾತ್ರ ಸರಿ ಹೊಂದುತ್ತಿದ್ದವು ಬಿಟ್ಟರೆ ಬಹುತೇಕರು ಇವುಗಳ ಗೋಳು ಬೇಡ ಎಂದು ಮೀಟರ್ ಲೆಕ್ಕದಲ್ಲಿ ಬಟ್ಟೆ ತೆಗೆದು ಟೈಲರ್ ಬಳಿ ನೀಡಿ ಹೊಲಿಸಿಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೆ ಈಗ ಭಾರತ ಸರ್ಕಾರ ಜವಳಿ ನೀತಿಯಲ್ಲಿ ಬದಲಾವಣೆ ತಂದಿದ್ದು, ಇನ್ಮುಂದೆ ಭಾರತೀಯರ ಸೈಜ್‌ನಲ್ಲೇ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಬಟ್ಟೆಗಳು ಶಾಪ್‌ಗಳಲ್ಲಿ ಮಾಲ್‌ಗಳಲ್ಲಿ ಲಭ್ಯವಾಗಲಿವೆ.

ಭಾರತೀಯರ ದೇಹದ ಆಕಾರ ಮತ್ತು ಗಾತ್ರಗಳಿಗೆ ಅನುಗುಣವಾದ ನೂತನ ಇಂಡಿಯಾ ಸೈಜ್‌ ಎಂಬ ನೂತನ ಅಳತೆಯ ಮಾನದಂಡವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಜವಳಿ ಖಾತೆಯ ಕಾರ್ಯದರ್ಶಿ ರಚನಾ ಶಾ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಬ್ರ್ಯಾಂಡ್‌ಗಳು ‘ಸಣ್ಣ (ಎಸ್‌), ಮಧ್ಯಮ (ಎಂ), ಮತ್ತು ದೊಡ್ಡ (ಲಾರ್ಜ್‌) ಗಾತ್ರದ ಉಡುಪುಗಳಿಗೆ ಅಮೆರಿಕ ಮತ್ತು ಇಂಗ್ಲೆಂಡ್‌ ನಾಗರಿಕರ ದೇಹದ ಅಳತೆಯನ್ನು ತೆಗೆದುಕೊಳ್ಳುತ್ತವೆ.

ಪಾಶ್ಚಿಮಾತ್ಯರಿಗಿಂತ ಭಾರತೀಯರ ಎತ್ತರ, ತೂಕ ಅಥವಾ ದೇಹದ ಭಾಗಗಳ ಗಾತ್ರಗಳಲ್ಲಿ ಭಿನ್ನತೆ ಇರುವುದರಿಂದ ಅಳತೆಗಳು ಸರಿಹೊಂದುವುದಿಲ್ಲ. ಹೀಗಾಗಿ ಇಂಡಿಯಾಸೈಜ್‌ ಎಂಬ ಮಾನದಂಡವನ್ನು ಪ್ರಾರಂಭಿಸಲಾಗುತ್ತಿದೆ. ಅಂದರೆ ಭಾರತದಲ್ಲಿ ಮಾರಾಟ ಮಾಡಲಾಗುವ ಬಟ್ಟೆಗಳನ್ನು ಭಾರತೀಯ ನಾಗರಿಕರ ಅಳತೆಯನ್ನೇ ಮಾಪನ ಮಾಡಿ ತಯಾರಿಸಲಾಗುತ್ತದೆ. ಶೀಘ್ರವೇ ಇಂಡಿಯಾಸೈಜ್‌ ಪ್ರಾರಂಭವಾಗುವುದು ಎಂದರು.

ಹೀಗಾಗಿ ಬಾರತೀಯರ ಬಟ್ಟೆ ಅಳತೆ ಸಮಸ್ಯೆ ಶೀಘ್ರದಲ್ಲೇ ನೀಗುವ ಸಾಧ್ಯತೆ ಇದ್ದು, ನಿಮ್ಮ ನಿಮ್ಮ ಸೈಜ್‌ಗಳಲ್ಲೇ ನಿಮಗೆ ಬ್ರಾಡೆಂಡ್ ಬಟ್ಟೆಗಳನ್ನು ಧರಿಸುವ ಅವಕಾಶ ಸಿಗಲಿದೆ.