ಬೆಂಗಳೂರು(ಜು.29): ಜಾಗತಿಕ ವಿದ್ಯಮಾನ, ಹಣದುಬ್ಬರ, ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ, ಮಾರುಕಟ್ಟೆಯಲ್ಲಿನ ಏರಿಳಿತದ ಪರಿಣಾಮ ಬೇಡಿಕೆ ಹೆಚ್ಚಾಗಿ ಚಿನ್ನ ಸಾರ್ವಕಾಲಿಕ ಬೆಲೆ ದಾಖಲಿಸಿದೆ. ರಾಜ್ಯದಲ್ಲಿ 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 54 ಸಾವಿರಕ್ಕೂ ಹೆಚ್ಚು, ಹಾಗೂ 1 ಕೆ.ಜಿ. ಬೆಳ್ಳಿ ಬೆಲೆ 65000 ರು.ನಷ್ಟಾಗಿದೆ.

ಕಳೆದ ಕೆಲವು ದಿನಗಳಿಂದ ಚಿನ್ನ-ಬೆಳ್ಳಿ ಬೆಲೆ ಏರಿಕೆಯಾಗುತ್ತಿದೆ. ಕೊರೋನಾ ಸೋಂಕಿನ ನಡುವೆಯೂ ಬೇಡಿಕೆ ಹೆಚ್ಚಾಗಿದೆ. ರಾಜ್ಯದಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 49,650 ರು., 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 54,350 ರು., ಒಂದು ಗ್ರಾಂ ಬೆಳ್ಳಿ 65 ರು. 50 ಪೈಸೆ ನಿಗದಿಯಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಇನ್ನಷ್ಟುಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರಣ ಏನು?:

ಮಾಚ್‌ರ್‍ ತಿಂಗಳ ಲಾಕ್‌ಡೌನ್‌ ನಂತರ ಬರೋಬ್ಬರಿ ಶೇ.60ರಷ್ಟುಬೆಲೆ ಹೆಚ್ಚಾಗಿದೆ. ಲಾಕ್‌ಡೌನ್‌ಗೂ ಮೊದಲು 22 ಕ್ಯಾರೆಟ್‌ 1 ಗ್ರಾಂ. ಚಿನ್ನ 3500 ರಿಂದ 3800 ರು. ಇತ್ತು. ಈಗ 22 ಕ್ಯಾರೆಟ್‌ 1 ಗ್ರಾಂ. 4,965 ರು. ಆಗಿದೆ. ಈ ಹಿಂದೆ ಬೆಳ್ಳಿ 1 ಗ್ರಾಂ. 40 ರು. ಇದ್ದದ್ದು, ಈಗ 65 ರು. ಆಗಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಬಿಕ್ಕಟ್ಟಿನಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ ಎಂದು ಕರ್ನಾಟಕ ಜ್ಯುವೆಲ​ರ್‍ಸ್ ಅಸೋಷಿಯೇಷನ್‌ ಅಧ್ಯಕ್ಷ ಟಿ.ಎ.ಶರವಣ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

‘ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ 65,000 ರು. ಮುಟ್ಟುವ ನಿರೀಕ್ಷೆ ಇದೆ. ಬೆಳ್ಳಿ 1 ಕೆ.ಜಿ. 75 ಸಾವಿರ ತಲುಪಬಹುದು. ಜನವರಿ ನಂತರ ಬೆಲೆ ಇಳಿಕೆಯಾಗುವ ಸೂಚನೆಗಳಿವೆ. ಜನರು ಅಗತ್ಯಕ್ಕೆ ತಕ್ಕಷ್ಟುಮಾತ್ರ ಖರೀದಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ನಮ್ಮ ಶಾಖೆಗಳಲ್ಲಿ 1 ಗ್ರಾಂ ಚಿನ್ನದ ಆಭರಣ ಖರೀದಿಸಿದರೆ, ಅಷ್ಟೇ ತೂಕದ ಬೆಳ್ಳಿ ನಾಣ್ಯ ಸಿಗಲಿದೆ. ವೇಸ್ಟೇಜ್‌ ಹಾಗೂ ಸ್ಟೋನ್‌ ಚಾರ್ಜಸ್‌ ಇರುವುದಿಲ್ಲ. ಹಬ್ಬಕ್ಕೆ ಲಕ್ಷ್ಮಿ ಮುಖವಾಡವಿರುವ ನೆಕ್ಲೆಸ್‌, ಡಾಬು-ಲಾಕ್‌ಚೈನ್‌, ಹಾರ, ಬಳೆಗಳು, ಆ್ಯಂಟಿಕ್‌ ಮತ್ತು ಟೆಂಪಲ್‌ ಜ್ಯುವೆಲರಿಗಳು ಖರೀದಿಯಾಗುತ್ತಿವೆ. ಕಾರ್ಮಿಕರ ಕೊರತೆಯಿಂದ ಬೇಡಿಕೆಗೆ ತಕ್ಕಷ್ಟುತಯಾರಿಕೆ ನಡೆಯುತ್ತಿಲ್ಲ’ ಎನ್ನುತ್ತಾರೆ ಟಿ.ಎ.ಶರವಣ.

ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಜೋರು!:

ಜು.31ರಂದು ಹಬ್ಬವಿದ್ದು, ಈಗಾಗಲೇ ಆಭರಣ ಅಂಗಡಿಗಳಲ್ಲಿ ಖರೀದಿ ಜೋರಾಗಿದೆ. ಚಿನ್ನ-ಬೆಳ್ಳಿಯ ಲಕ್ಷ್ಮಿ, ಸರಸ್ವತಿ, ಗಣೇಶ ಭಾವಚಿತ್ರವುಳ್ಳ 9 ಥರದ ನಾಣ್ಯಗಳನ್ನು ಜನರು ಖರೀದಿಸುತ್ತಿದ್ದಾರೆ. ಕಡಿಮೆ ತೂಕದ ಆಭರಣಗಳು (5, 10-15 ಗ್ರಾಂ)ಗಳ ಖರೀದಿ ನಡೆಯುತ್ತಿದೆ. ಕಳೆದ ಬಾರಿಗಿಂತ ಈ ವರ್ಷ ಶೇ.30-40ರಷ್ಟುಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಇದೆ. ಐಶಾರಾಮಿ ಹಾಗೂ ಫ್ಯಾಷನ್‌ಗಾಗಿ ಚಿನ್ನ-ಬೆಳ್ಳಿ ಆಭರಣ ಖರೀದಿಸುವವರು ಕಡಿಮೆಯಾಗಿದ್ದಾರೆ. ಬೆಲೆ ಏರಿಕೆಯಾಗಿದ್ದರೂ ಚಿನ್ನ ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಬೆಳ್ಳಿಯ ಮೇಲೂ ಶೇ.10-20ರಷ್ಟುಹೂಡಿಕೆ ಹೆಚ್ಚಾಗಿದೆ. ಜಾಗತಿಕವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ದರ ಏರುಗತಿಯಲ್ಲಿ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಚಿನ್ನ-ಬೆಳ್ಳಿ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ತಿಳಿಸಿದರು.