ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ಬೆಲೆ; 60,000 ರೂ. ಗಡಿ ದಾಟಿದ ಬಂಗಾರದ ದರ ಇನ್ನಷ್ಟು ಹೆಚ್ಚುತ್ತಾ?
ಅಮೆರಿಕದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರ 60,000 ರೂ. ಗಡಿ ದಾಟುವ ಮೂಲಕ ಸಾರ್ವಕಾಲಿಕ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ನವದೆಹಲಿ (ಮಾ.20):ಅಮೆರಿಕದ ಬ್ಯಾಂಕಿಂಗ್ ವಲಯ 2008-09ನೇ ಸಾಲಿನ ಜಾಗತಿಕ ಆರ್ಥಿಕ ಹಿಂಜರಿತದ ನಂತರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕೆಟ್ಟ ಸಮಯವನ್ನು ಎದುರಿಸುತ್ತಿದೆ. ಪ್ರಸ್ತುತ ಆರ್ಥಿಕ ಹಿಂಜರಿತದ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ ಹೂಡಿಕೆಗೆ ಅತ್ಯಂತ ಸುರಕ್ಷಿತ ಸಾಧನವಾಗಿರುವ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಭಾರತದಲ್ಲಿ 10ಗ್ರಾಂ ಚಿನ್ನದ ಬೆಲೆ 60,000ರೂ. ಗಡಿ ದಾಟಿದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್ ನಲ್ಲಿ (ಎಂಸಿಎಕ್ಸ್ ) ಸೋಮವಾರ ಚಿನ್ನದ ಬೆಲೆ 60,000ರೂ. ಗಡಿ ದಾಟಿದೆ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ ಶೇ.1.5ರಷ್ಟು ಅಧಿಕ ಮಟ್ಟದಲ್ಲಿ ಇಂದು ಟ್ರೇಡಿಂಗ್ ಆಗುತ್ತಿದ್ದು, 10 ಗ್ರಾಂ ಬೆಲೆ 60,274ರೂ.ಗೆ ಹೆಚ್ಚಳವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಶೇ.0.57 ರಷ್ಟು ಏರಿಕೆ ಕಂಡಿದ್ದು, 2,000 ಡಾಲರ್ ಮಾರ್ಕ್ ಗಡಿ ದಾಟಿ ಪ್ರತಿ ಔನ್ಸ್ ಗೆ 2,001.6 ಡಾಲರ್ ದರದಲ್ಲಿ ಟ್ರೇಡ್ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ನ್ಯೂಯಾರ್ಕ್ ಕಮೋಡಿಟಿ ಎಕ್ಸ್ ಚೇಂಜ್ ಕೊಮೆಕ್ಸ್ ನಲ್ಲಿ ಬೆಳ್ಳಿ ದರ ಶೇ.0.73ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್ ಗೆ 22.54 ಡಾಲರ್ ಇದೆ.
'ಅಮೆರಿಕದ ಬ್ಯಾಂಕಿಂಗ್ ವಲಯದ ಬಿಕ್ಕಟ್ಟಿನ ಬಳಿಕ ಚಿನ್ನದ ಮಾರುಕಟ್ಟೆ ಸಾರ್ವಕಾಲಿಕ ಏರಿಕೆ ಕಂಡಿದೆ. ಎಸ್ ವಿಸಿ ಬ್ಯಾಂಕ್ ಹಾಗೂ ಇತರ ಬ್ಯಾಂಕ್ ಗಳ ದಿಢೀರ್ ಪತನದ ಬಳಿಕ ಚಿನ್ನದ ಗಟ್ಟಿಗಳನ್ನು ಅತ್ಯಂತ ಸುರಕ್ಷಿತ ಆಯ್ಕೆ ಎಂದು ಖರೀದಿಸಲಾಗುತ್ತಿದೆ. ಅಮೆರಿಕದ ಬಾಂಡ್ ದರಗಳು ಭಾರೀ ಕುಸಿತ ಕಂಡಿದ್ದು, ಡಾಲರ್ ಸೂಚ್ಯಂಕ ಕೂಡ ಇಳಿಕೆಯಾಗಿದೆ. ಇದೇ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಬ್ಯಾಂಕಿಂಗ್ ಸಂದಿಗ್ಧತೆ ಹಾಗೂ ಅಮೆರಿಕದ ಆರ್ಥಿಕ ಸ್ಟ್ಯಾಟಿಸ್ಟಿಕ್ಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಮಾ.22ರಂದು ಸಭೆ ನಡೆಸುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ಕೈಗೊಳ್ಳುವ ನೀತಿಗಳುಚಿನ್ನದ ಮಾರುಕಟ್ಟೆ ಮೇಲೆ ಮತ್ತಷ್ಟು ಪ್ರಭಾವ ಬೀರುವ ಸಾಧ್ಯತೆಯಿದೆ' ಎಂದು ಮೆಹ್ತಾ ಈಕ್ವಿಟೀಸ್ ಉಪಾಧ್ಯಕ್ಷ ರಾಹುಲ್ ಕಲಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಷ್ಟದಲ್ಲಿರುವ ಕ್ರೆಡಿಟ್ ಸೂಸಿ ಬ್ಯಾಂಕ್ ಖರೀದಿಗೆ ಯುಬಿಎಸ್ ಸಜ್ಜು
ಅಮೆರಿಕದ ಎರಡು ಬ್ಯಾಂಕ್ ಗಳಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್ ಪತನಗೊಂಡಿವೆ. ಇನ್ನೊಂದೆಡೆ ಸ್ವಿಜರ್ಲೆಂಡ್ ಮೂಲದ ಕ್ರೆಡಿಸ್ ಸೂಸಿ ಬ್ಯಾಂಕ್ ಹಾಗೂ ಅಮೆರಿಕ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡ ಸಂಕಷ್ಟದಲ್ಲಿದ್ದು, ಉಳಿವಿಗಾಗಿ ಹೆಣಗಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಚಿನ್ನ ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿದೆ.
ಇನ್ನಷ್ಟು ಏರಿಕೆ ಸಾಧ್ಯತೆ?
ಕಳೆದ ಸಾಲಿನ ಅಕ್ಟೋಬರ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ ಅಂದರೆ 28 ಗ್ರಾಂಗೆ 1636 ಡಾಲರ್ ಗೆ ಕುಸಿದಿತ್ತು. ಆದರೆ, ಪ್ರಸ್ತುತ 1880 ಡಾಲರ್ ಗೆ ಜಿಗಿದಿದೆ. ಮುಂದಿನ ದಿನಗಳಲ್ಲಿ ಇದು 2,000 ಡಾಲರ್ ಗೆ ಏರಿಕೆಯಾದ್ರೂ ಅಚ್ಚರಿಯಿಲ್ಲ ಎಂದು ವರದಿಗಳು ಹೇಳಿವೆ. ಇನ್ನು ಕೆಲವು ವರದಿಗಳು ಚಿನ್ನದ ಬೆಲೆ 2,078 ಡಾಲರ್ ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿವೆ. ಒಂದು ವೇಳೆ ಹೀಗೇನಾದ್ರೂ ಆದರೆ ಭಾರತದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 62,000ರೂ.ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Gold Investment: ಬರೀ ಚಿನ್ನ ಕೊಳ್ಳೋದಲ್ಲ, ಹೀಗೂ ಮಾಡಬಹುದು ಹೂಡಿಕೆ
1973ರ ಬಳಿಕ 5 ಆರ್ಥಿಕ ಹಿಂಜರಿಗಳ ಸಂದರ್ಭದಲ್ಲಿ ಚಿನ್ನದ ದರ ಐದು ಸಲ ಜಿಗಿತ ಕಂಡಿತ್ತು. ಇನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ವಾರ್ಷಿಕ ಚಿನ್ನದ ಬೇಡಿಕೆ 2022ರಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ. ಇದು 2011ರ ಬಳಿಕದ ಗರಿಷ್ಠ ಮಟ್ಟದ ಏರಿಕೆಯಾಗಿದೆ.