ಬೆಂಗಳೂರು[ಮಾ.18]: ಆರ್ಥಿಕ ಹಿಂಜರಿತ, ಷೇರುಗಳ ಮೌಲ್ಯ ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತದಿಂದ ದೇಶದ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

ಕೊರೋನಾ ವೈರಸ್‌ ಸೋಂಕು ಹರಡುತ್ತಿರುವುದರಿಂದ ಗ್ರಾಹಕರು ಚಿನ್ನ-ಬೆಳ್ಳಿ ಖರೀದಿಯಿಂದ ದೂರ ಉಳಿದಿದ್ದಾರೆ. ಜತೆಗೆ ಮದುವೆ-ಶುಭ ಸಮಾರಂಭಗಳಿಗೂ ಕಡಿವಾಣ ಬಿದ್ದಿರುವುದು ಚಿನ್ನ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಬೆಲೆ ಇಳಿಕೆಯಾಗಿದ್ದರೂ ಗ್ರಾಹಕರು ಮಾತ್ರ ತಟಸ್ಥ ಧೋರಣೆಗೆ ಅನುಸರಿಸಿದ್ದಾರೆ.

ಕರ್ನಾಟದ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನ 38790 ರು. ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ 42000 ರು. ನಿಗದಿಯಾಗಿದೆ. ಮಹಾ ನಗರಗಳಲ್ಲಿ ಹಳದಿ ಲೋಕದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಸಾಕಷ್ಟುವ್ಯತ್ಯಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಚೇತರಿಕೆಯ ಹಾದಿ ಕಾಣಬಹುದು. ಬೆಂಗಳೂರಿನಲ್ಲಿ 22 ಕ್ಯಾರೆಟ್‌ ಒಂದು ಗ್ರಾಂ ಚಿನ್ನ 3879, 24 ಕ್ಯಾರೆಟ್‌ ಚಿನ್ನ ಒಂದು ಗ್ರಾಂ. 4200 ರು., ಬೆಳ್ಳಿ ಒಂದು ಗ್ರಾಂ 42 ರು. ನಿಗದಿಯಾಗಿದೆ. ಕಳೆದ 15 ದಿನಗಳಲ್ಲಿ 46 ಸಾವಿರ ಗಡಿ ಮುಟ್ಟಿದ್ದ ಚಿನ್ನ, ಇದೀಗ 42 ಸಾವಿರಕ್ಕೆ ಬಂದು ನಿಂತಿದೆ. ಏ.25ರಂದು ಅಕ್ಷಯ ತೃತೀಯ ಇರುವುದರಿಂದ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಬಹುದು ಎಂದು ಕರ್ನಾಟಕ ಜ್ಯುವೆಲ​ರ್‍ಸ್ ಅಸೋಸಿಯೇಷನ್‌ ಅಧ್ಯಕ್ಷ ಟಿ.ಎ.ಶರವಣ ಮಾಹಿತಿ ನೀಡಿದರು.

ಮೈಕೊಡವಿಕೊಂಡ ಚಿನ್ನ! ಕದಲದೆ ನಿಂತಿದೆ ಬೆಳ್ಳಿ; ಇಂದಿನ ದರ ಇಲ್ಲಿದೆ ಕೇಳಿ

ಈ ಹಿಂದೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದರೆ, ಕೊರೋನಾ ಸೋಂಕು ಹರಡುವ ಹಿನ್ನೆಲೆ ಚಿನ್ನ ಕೊಳ್ಳುವವರ ಸಂಖ್ಯೆಯಲ್ಲಿ ಶೇ.40-50ರಷ್ಟುಇಳಿಮುಖವಾಗಿದೆ. ಕಳೆದ 25 ದಿನಗಳಿಂದ ವ್ಯಾಪಾರ ಇಳಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 150-200 ರು.ನಷ್ಟುವ್ಯತ್ಯಾಸವಾಗಿದೆ. ಆದರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ ಎಂದು ವ್ಯಾಪಾರಿಗಳು ಹೇಳಿದರು.