ಬೆಂಗಳೂರು[ಫೆ.25]: ಚಿನ್ನದ ದರ ಗಗನಮುಖಿಯಾಗಿದ್ದು, ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಮ್‌ಗೆ 4,388 ರು. ತಲುಪಿದೆ!

ಭಾನುವಾರ 4,359 ರು. ಇದ್ದ 1 ಗ್ರಾಂ ಬಂಗಾರ, ಸೋಮವಾರ 4,388 ರು. ತಲುಪಿದೆ. ಅಂದರೆ, ಒಂದೇ ದಿನ ಗ್ರಾಮ್‌ಗೆ 29 ರು.ನಂತೆ 10 ಗ್ರಾಮ್‌ ಗೆ 290 ರು. ಹೆಚ್ಚಳವಾಗಿದೆ. ಫೆ.21ರಂದು 42,550 ರು. ಇದ್ದ 10 ಗ್ರಾಂ ಬಂಗಾರ, ಫೆ.22ರಂದು 43,580 ರು. ತಲುಪಿ ಒಂದೇ ದಿನ 1030 ರು. ಭಾರೀ ಏರಿಕೆಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಖರೀದಿ ಹೆಚ್ಚಾಗಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾದಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡಿರುವುದರಿಂದ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿವೆ. ಉದ್ಯಮಿಗಳು ಷೇರುಗಳನ್ನು ಹಿಂಪಡೆದು ಬಂಗಾರದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಬಂಗಾರದ ದರ ಏರುಮುಖವಾಗಿದೆ. ಇನ್ನು ಕೆಲ ದಿನ ಬಂಗಾರದ ದರ ಮತ್ತಷ್ಟುಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಗೋಲ್ಡ್‌ ಮರ್ಚೆಂಟ್‌ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ರಾಮಚಾರಿ ಹೇಳಿದ್ದಾರೆ.

"