ಪಣಜಿ[ಡಿ.08]: ಈರುಳ್ಳಿ ಬೆಲೆ ಗಗನಕ್ಕೇರಿ ಕುಳಿತಿರುವುದು ದೇಶಾದ್ಯಂತ ಗ್ರಾಹಕರ ಕಣ್ಣಲ್ಲಿ ನೀರು ತರಿಸಿರುವುದು ಹಳೇ ಸುದ್ದಿ. ಹೊಸ ಸುದ್ದಿಯೆಂದರೆ ಈರುಳ್ಳಿ ಬೆಲೆ ಏರಿಕೆಯಾಗಿರುವುದು ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ನೀಡಿದೆಯಂತೆ. ಈ ವಿಷಯವನ್ನು ಸ್ವತಃ ರಾಜ್ಯದ ಬಂದರು ಖಾತೆ ಸಚಿವ ಮತ್ತು ರಾಜ್ಯದಲ್ಲಿ ಹಲವು ಹೋಟೆಲ್‌, ಬಾರ್‌ ಹೊಂದಿರುವ ಸಚಿವ ಮೈಕೆಲ್‌ ಲೋಬೋ ಬಹಿರಂಗಪಡಿಸಿದ್ದಾರೆ.

ಭಾರತೀಯ ಪ್ರವಾಸಿಗರು ಊಟದ ಜೊತೆಗೆ ಈರುಳ್ಳಿ ಮತ್ತು ಮೆಣಸಿನ ಕಾಯಿ ಬಯಸುತ್ತಾರೆ. ಆದರೆ ಬೆಲೆ ಏರಿಕೆ ಕಾರಣ, ಗೋವಾ ರೆಸ್ಟೋರೆಂಟ್‌ಗಳಲ್ಲಿ ಈರುಳ್ಳಿ ಬದಲು ಎಲೆ ಕೋಸು ನೀಡಲಾಗುತ್ತಿದೆ. ಇದು ಗ್ರಾಹಕರಿಗೆ ಬೇಸರ ತರಿಸಿದೆ. ಹೀಗಾಗಿ ಅವರು ಗೋವಾದತ್ತ ಮುಖಮಾಡುವುದನ್ನು ಬಿಟ್ಟಿದ್ದಾರೆ ಎಂದು ಲೋಬೋ ಹೇಳಿದ್ದಾರೆ.

ಗೋವಾ ಮಾರುಕಟ್ಟೆಯಲ್ಲಿ ಕೇಜಿ ಈರುಳ್ಳಿ ಬೆಲೆ 170 ರು. ಇದೆ.