ಶಿವಾನಂದ ಗೊಂಬಿ

ಹುಬ್ಬಳ್ಳಿ(ಡಿ.06): ಉತ್ತರ ಕರ್ನಾಟಕದ ಹೆಬ್ಬಾಗಿಲು ‘ಹುಬ್ಬಳ್ಳಿ-ಧಾರವಾಡ ಮಹಾನಗರ’ದತ್ತ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ (ಜಿಮ್‌) ಈ ಸಲ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಹಿಂದೆ ಹಲವು ಸಲ ಬೆಂಗಳೂರಲ್ಲೇ ಜಿಮ್‌ ನಡೆದಿದೆ. ಇದೇ ಮೊದಲ ಸಲ ಹುಬ್ಬಳ್ಳಿಯಲ್ಲಿ 2020ರ ಜನವರಿ 17ಕ್ಕೆ ಸಮಾವೇಶಗೊಳ್ಳಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆದಿವೆ.‘ಇನ್ವೆಸ್ಟ್‌ ಹುಬ್ಬಳ್ಳಿ-ಧಾರವಾಡ’ ಹೆಸರಿನಡಿ ಈ ಸಮಾವೇಶ ನಡೆಯಲಿದೆ. ಈ ಮೂಲಕ ಹುಬ್ಬಳ್ಳಿ- ಧಾರವಾಡವನ್ನು ಕೈಗಾರಿಕಾ ಹಬ್‌ ಮಾಡುವ ಪ್ರಯತ್ನ ನಡೆಯುತ್ತಿರುವುದು ಯುವ ಸಮೂಹದಲ್ಲಿ ಸಂತಸವನ್ನುಂಟು ಮಾಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೌದು! ಉತ್ತರ ಕರ್ನಾಟಕದಲ್ಲಿ ಯಾವೊಂದು ದೊಡ್ಡ ದೊಡ್ಡ ಕೈಗಾರಿಕೆಗಳೇ ಇಲ್ಲ. ಇಲ್ಲಿ ಇರುವುದು ಬರೀ ಸಣ್ಣ ಪುಟ್ಟ ಕೈಗಾರಿಕೆಗಳು ಮಾತ್ರ. ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳನ್ನು ಪ್ರತ್ಯೇಕವಾಗಿ ಮಾಡಿದರೂ ಕೈಗಾರಿಕೋದ್ಯಮಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಇದ್ದ ನಾಲ್ಕೈದು ಕೈಗಾರಿಕೆಗಳು ಇಲ್ಲಿಂದ ಎತ್ತಂಗಡಿಯಾಗಿವೆ. ಇಲ್ಲಿ ಎಷ್ಟೇ ಕಲಿತವರಿದ್ದರೂ ಅನಿವಾರ್ಯವಾಗಿ ಉದ್ಯೋಗ ಅರಸಿ ಪುಣೆ, ಮುಂಬೈ, ಬೆಂಗಳೂರಿನತ್ತ ಪ್ರಯಾಣ ಬೆಳೆಸಬೇಕಾದ ಅನಿವಾರ್ಯತೆ. ಈ ಹಿನ್ನೆಲೆಯಲ್ಲಿ ಇಲ್ಲೇ ಕೈಗಾರಿಕೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಹಳೆಯದು. ಇದಕ್ಕಾಗಿ ‘ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಫೋರಂ’ ಎಂಬುದು ಕೂಡ ಹುಟ್ಟುಕೊಂಡಿದೆ. ಪ್ರತಿಭಾ ಫಲಾಯನ ತಡೆಗಟ್ಟಲು ಇಲ್ಲಿಗೆ ಕೈಗಾರಿಕೆಗಳು ಬರುವಂತಾಗಬೇಕು. ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಹಬ್‌ ಆಗಿ ಅಭಿವೃದ್ಧಿ ಹೊಂದಬೇಕು ಎಂಬುದು ಬಹುವರ್ಷಗಳ ಬೇಡಿಕೆ.

ಇದೀಗ ಮೊದಲ ಹೆಜ್ಜೆ:

ಈ ನಿಟ್ಟಿನಲ್ಲಿ ಇದೀಗ ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಜಿಮ್‌ ನಡೆಸಲು ತಯಾರಿ ನಡೆಸಿದೆ. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಪ್ರಾಥಮಿಕ ಮಾಹಿತಿಯಂತೆ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ಸಾಧ್ಯತೆ ಇದೆ. ಅದರಲ್ಲಿ 20 ಕ್ಕೂ ಹೆಚ್ಚು ಬೃಹತ್‌ ಕೈಗಾರಿಕೆಗಳಾದರೆ, ಇನ್ನುಳಿದ 80 ಮಧ್ಯಮ ಕೈಗಾರಿಕೆಗಳು ಭಾಗವಹಿಸುವ ನಿರೀಕ್ಷೆಯಿದೆ.

ಇದಕ್ಕಾಗಿ ಇನ್ನೊಂದು ವಾರದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಅಲ್ಲಿ ಜಿಮ್‌ ಯಾವ ರೀತಿ ಇರಬೇಕೆಂಬುದರ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ. ಬಳಿಕವಷ್ಟೇ ಜಿಮ್‌ನ ಪೂರ್ಣ ರೂಪರೇಷೆ ಗೊತ್ತಾಗಲಿದೆ ಎಂಬುದು ಅಧಿಕಾರಿಗಳ ಅಂಬೋಣ.

ಎಷ್ಟಿದೆ ಜಾಗ:

ಇಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಏನೂ ಮಾಡಿಯೇ ಇಲ್ಲ ಅಂತೇನೂ ಇಲ್ಲ. ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದುಂಟು. ಧಾರವಾಡದ ಇಟಿಗಟ್ಟಿಯಲ್ಲಿ 500 ಎಕರೆಗೂ ಹೆಚ್ಚು ಜಾಗೆ ಇದೆ. ಇನ್ನೂ ಬೇಲೂರು- ಕೊಟೂರು ಬಳಿ 500 ಎಕರೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿನ ಜಾಗೆ ಸೇರಿದಂತೆ 1000 ಎಕರೆಗೂ ಹೆಚ್ಚಿನ ಪ್ರದೇಶ ಕೈಗಾರಿಕೆಗಳಿಗೆ ಮೀಸಲಾಗಿದೆ. ಆದರೆ, ಯಾವೊಂದು ಕೈಗಾರಿಕೆಗಳೇ ಬರುತ್ತಿಲ್ಲ. ಇದೀಗ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದ ಮೇಲೆ ಯಾವುದಾದರೂ ಕೈಗಾರಿಕಗಳು ಬಂದರೆ ಅವುಗಳಿಗೆ ನೀಡಲು ಜಾಗೆಯ ಕೊರತೆ ಇರಲ್ಲ. ಇದು ಇಲ್ಲಿನ ಪ್ಲಸ್‌ ಪಾಯಿಂಟ್‌.

ಸೌಲಭ್ಯಗಳುಂಟು

ಮೊದಲು ಇಲ್ಲಿಗೆ ಕೈಗಾರಿಕೆಗಳು ಬಂದರೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲ ಎಂಬ ಗೋಣಗಾಟ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ರಾಜ್ಯದ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿಯಲ್ಲೀಗ ಸಕಲ ಸೌಲಭ್ಯಗಳುಂಟು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. 

ಪ್ರತಿನಿತ್ಯ ಮುಂಬೈ, ಹೈದ್ರಾಬಾದ್‌, ಚೆನ್ನೈ ಹೀಗೆ ಬೇರೆ ಬೇರೆ ರಾಜ್ಯಗಳಿಂದ ಸುಮಾರು 15ಕ್ಕೂ ಹೆಚ್ಚು ವಿಮಾನಗಳ ಹಾರಾಟವಿದೆ. ಇತ್ತೀಚಿಗೆ ದೆಹಲಿಗೂ ಇಲ್ಲಿಂದ ವಿಮಾನಯಾನ ಶುರುವಾಗಿದೆ. ಇನ್ನೂ ನೈರುತ್ಯ ರೈಲ್ವೆ ವಲಯವಿದೆ. ದೇಶದ ವಿವಿಧ ಭಾಗಗಳಿಗೆ ನೇರ ರೈಲುಗಳ ಸಂಪರ್ಕವಿದೆ. ಅವಳಿ ನಗರದ ಮಧ್ಯೆ ಬಿಆರ್‌ಟಿಎಸ್‌ ಸಾರಿಗೆ ವ್ಯವಸ್ಥೆ ಅತ್ಯಂತ ಸುಗಮವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಸಾಕಷ್ಟುಅಭಿವೃದ್ಧಿ ಹೊಂದುತ್ತಿದೆ. ಇದು ಕೂಡ ಕೈಗಾರಿಕೆಗಳ ಆಗಮನಕ್ಕೆ ಅನುಕೂಲ. ಇದರೊಂದಿಗೆ ನೀರು, ವಿದ್ಯುತ್‌ ಸಮಸ್ಯೆ ಇರಲ್ಲ. ಹೀಗಾಗಿ ಕೈಗಾರಿಕೆಗಳ ಆಕರ್ಷಿಸಲು ಅನುಕೂಲವಾದ ವಾತಾವರಣ ಇಲ್ಲಿದೆ.

ಇಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಎಷ್ಟೇ ಕಲಿತರೂ ದೂರದೂರಿಗೆ ಹೋಗಬೇಕು. ಇದರಿಂದ ಪ್ರತಿಭಾ ಫಲಾಯನ ಆಗುತ್ತಿದೆ. ಅಲ್ಲಿ ಸಿಗುವ ಅಲ್ಪ ಸ್ವಲ್ಪ ಸಂಬಳಕ್ಕೆ ಅತ್ತ ಸರಿಯಾಗಿ ಬದುಕು ಸಾಗಿಸಲು ಆಗಲ್ಲ. ಇತ್ತ ಕುಟುಂಬಸ್ಥರಿಗೆ ನೆರವಾಗಲು ಸಾಧ್ಯವಾಗಲ್ಲ. ಇಲ್ಲೇ ಕೈಗಾರಿಕೆಗಳು ಪ್ರಾರಂಭವಾದರೆ ಅನುಕೂಲವಾಗುತ್ತೆ ಎಂದು ಯುವಕಪ್ರಸಾದ ಪಾಟೀಲ ಅವರು ಹೇಳಿದ್ದಾರೆ. 

ಜ. 17ಕ್ಕೆ ಬಂಡವಾಳ ಹೂಡಿಕೆದಾರರ ಇನ್ವೆಸ್ಟ್‌ ಹುಬ್ಬಳ್ಳಿ- ಧಾರವಾಡ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಪೂರ್ವಭಾವಿ ಸಭೆಯೂ ಸಚಿವರ ನೇತೃತ್ವದಲ್ಲಿ ನಡೆಯಲಿದೆ. ಅಲ್ಲಿ ಅಂತಿಮ ರೂಪರೇಷೆ ಹೊರಬೀಳಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರಿ ಜಂಟಿ ನಿರ್ದೇಶಕ ಕಿರಣ ಅಡವಿ ಅವರು ಹೇಳಿದ್ದಾರೆ.

ಇಷ್ಟು ದಿನ ಬರೀ ಜಿಮ್‌ ಬೆಂಗಳೂರಲ್ಲಿ ನಡೆಯುತ್ತಿತ್ತು. ಇದೀಗ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಕೇಂದ್ರವಾಗಿಟ್ಟುಕೊಂಡು ಜಿಮ್‌ ನಡೆಸುತ್ತಿರುವುದು ಸಂತಸಕರ. ಬಂಡವಾಳ ಹೂಡಿಕೆದಾರರು ಆಕರ್ಷಿತರಾಗಿ ಬಂದರೆ ಪ್ರತಿಭಾ ಪಲಾಯನವಾದ ತಪ್ಪುತ್ತೆ ಎಂದು ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಫೋರಂನ ಕಾರ್ಯದರ್ಶಿ ಜಗದೀಶ ಹಿರೇಮಠ ಅವರು ತಿಳಿಸಿದ್ದಾರೆ.