ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಪನಿ ದಿವಾಳಿಯಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್. ಆದರೆ ಗೌತಮ್ ಅದಾನಿ ಯಾವುದೇ ಷರತ್ತಿಲ್ಲದೆ ಬರೋಬ್ಬರಿ 12,500 ಕೋಟಿ ರೂಪಾಯಿ ನೀಡಿ ದಿವಾಳಿಯಾಗಿರುವ ಕಂಪನಿ ಖರೀದಿಗೆ ಅದಾನಿ ಮುಂದಾಗಿದ್ದಾರೆ.
ನವದೆಹಲಿ (ಜು.04) ಗೌತಮ್ ಅದಾನಿ ಉದ್ಯಮಗಳು ದೇಶ ವಿದೇಶಗಳಲ್ಲಿ ಹರಡಿಕೊಂಡಿದೆ. ಗ್ರೀನ್ ಎನರ್ಜಿ, ಇಂಧನ, ಪೋರ್ಟ್, ವಿಮಾನ ನಿಲ್ದಾಣ ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅದಾನಿ ತೊಡಗಿಸಿಕೊಂಡಿದ್ದಾರೆ. ಹಿಂಡನ್‌ಬರ್ಗ್ ವರದಿ ವಿವಾದ ಬಳಿಕ ಅದಾನಿ ಪ್ರತಿಯೊಂದು ಉದ್ಯಮದಲ್ಲೂ ಅತೀವ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಯಾವುದೇ ಹಿನ್ನಡೆ ಬರದಂತೆ ಮಾತ್ರವಲ್ಲ, ಇತರ ವಿವಾದಗಳನ್ನು ಮೈಮೇಲೆ ಏಳೆದುಕೊಳ್ಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಇದೀಗ ದಿವಾಳಿಯಾಗಿರುವ ಕಂಪನಿಯನ್ನು ಗೌತಮ್ ಅದಾನಿ ಬರೋಬ್ಬರಿ 12,500 ಕೋಟಿ ರೂಪಾಯಿ ನೀಡಿ ಖರೀದಿಸಲು ಮುಂದಾಗಿದ್ದಾರೆ.
ಜೈಪ್ರಕಾಶ್ ಆಸೋಸಿಯೇಟ್ಸ್ ಲಿಮಿಟೆಡ್ ಕಂಪನಿ ಖರೀದಿಗೆ ನಿರ್ಧಾರ
ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (ಜೆಎಎಲ್) ಕಂಪನಿ ಸದ್ಯ ದಿವಾಳಿಯಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೀವ್ರ ನಷ್ಟ ಅನುಭವಿಸಿದೆ. ಹಲವು ಕಂಪನಿಗಳು ಜೆಎಎಲ್ ಕಂಪನಿ ಖರೀದಿಗೆ ಮುಂದಾಗಿದೆ. ಹೀಗಾಗಿ ಗೌತಮ್ ಅದಾನಿ ಯಾವುದೇ ಷರತ್ತಿಲ್ಲದೆ ಬರೋಬ್ಬರಿ 12,500 ಕೋಟಿ ರೂಪಾಯಿ ನೀಡಿ ಜೆಎಎಲ್ ಕಂಪನಿ ಖರೀದಿಸಲು ಮುಂದಾಗಿದ್ದಾರೆ. ಈ ಪೈಕಿ 8000 ಕೋಟಿ ರೂಪಾಯಿ ಮೊತ್ತವನ್ನು ಅಡ್ವಾನ್ಸ್ ನೀಡುವುದಾಗಿ ಹೇಳಿದ್ದಾರೆ. ಯಾವುದೇ ಷರತ್ತಿಲ್ಲದೆ ಕಂಪನಿ ಖರೀದಿಸುವುದಾಗಿ ಅದಾನಿ ಹೇಳಿದ್ದಾರೆ ಎಂದು ಬ್ಯೂಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
ಜೆಎಎಲ್ ಕಂಪನಿ ಖರೀದಿಸಲು ಹಲವು ಕಂಪನಿಗಳ ಸಾಲು
ಜೈಪ್ರಕಾಶ್ ಅಸೋಸಿಯೇಟ್ಸ್ ಕಂಪನಿ ಖರೀದಿಸಲು ಅದಾನಿ ಗ್ರೂಪ್ ಮಾತ್ರವಲ್ಲ, ವೇದಾಂತ, ಜಿಂದಾಲ್ ಪವರ್, ಪಿಎನ್‌ಸಿ ಇನ್‌ಫ್ರಾಟೆಕ್, ಸುರಕ್ಷಾ ಗ್ರೂಪ್, ದಾಲ್ಮಿಯಾ ಭಾರತ್ ಸೇರಿದಂತೆ ಹಲವು ಕಂಪನಿಗಳು ದಿವಾಳಿಯಾಗಿರುವ ಜೆಎಎಲ್ ಕಂಪನಿ ಖರೀದಿಗೆ ಮುಂದಾಗಿದೆ. ಹೀಗಾಗಿ ತೀವ್ರ ಪೈಪೋಟಿ ಶುರುವಾಗಿದೆ. ಇದೇ ಕಾರಣದಿಂದ ಗೌತಮ್ ಅದಾನಿ ಯಾವುದೇ ಷರತ್ತಿಲ್ಲದೆ 12,500 ಕೋಟಿ ರೂಪಾಯಿ ನೀಡಿ ಖರೀದಿ ಮಾಡುವುದಾಗಿ ಆಫರ್ ನೀಡಿದ್ದಾರೆ.
ಜೈಪ್ರಕಾಶ್ ಅಸೋಸಿಯೇಟ್ಸ್ ಕಂಪನಿ ವ್ಯವಹಾರವೇನು?
ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ ಕಂಪನಿ ಭಾರತದ ಅತೀ ದೊಡ್ಡ ಇನ್‌ಫ್ರಾಸ್ಟಕ್ಚರ್ ಕಂಪನಿ. ರಿಯಲ್ ಎಸ್ಟೇಟ್, ಸಿಮೆಂಟ್, ಇಂಧನ, ಹೊಟೆಲ್-ರೆಸ್ಟೋರೆಂಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಕಂಪನಿ ಅಪಾರ ಆಸ್ತಿ ಹೊಂದಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಂಪನಿ ಇದೀಗ ದಿವಾಳಿಯಾಗಿದೆ. ಗ್ರೇಟರ್ ನೋಯ್ಡಾದಲ್ಲಿ ಜೈಪೀ ಗ್ರೀನ್ಸ್, ಜೈಪಿ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಸಿಟಿ ಸೇರಿದಂತೆ ಹಲವು ಆಸ್ತಿಗಳನ್ನು ಜೆಎಎಲ್ ಕಂಪನಿ ಹೊಂದಿದೆ.
ಬೆಸ್ಟ್ ಆಫರ್ ಚರ್ಚೆ
ಜೆಎಎಲ್ ಕಂಪನಿ ಇದೀಗ ಮಹತ್ವದ ಪ್ರಕಟಣೆ ಹೊರಡಿಸಿದೆ. ದಿವಾಳಿಯಾಗಿರುವ ಜೈಪ್ರಕಾಶ್ ಅಸೋಸಿಯೇಟ್ಸ್ ಈಗಾಗಲೇ ಬಂದಿರುವ ಆಫರ್ ಪರಿಶೀಲಿಸುತ್ತಿದೆ. ಈ ಆಫರ್‌ನಲ್ಲಿ ಯಾವುದು ಉತ್ತಮ ಎಂಬುದು ಪರಿಶೀಲಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ.