ವಿಶ್ವದ ಟಾಪ್-5 ಶ್ರೀಮಂತರಲ್ಲಿ ಗೌತಮ್ ಅದಾನಿ, ಈ ಬಿಲಿಯನೇರ್ ಕೂಡಾ ರೇಸ್‌ನಲ್ಲಿ ಹಿಂದೆ!
* ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಇಬವ್ಬರು ಭಾರತೀಯರು
* ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು ಏರುತ್ತಲೇ ಇದೆ
* ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ ಅದಾನಿ
ನವದೆಹಲಿ(ಏ.25): ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು ಏರುತ್ತಲೇ ಇದೆ. ಅವರು ಸಂಪತ್ತಿನ ವಿಷಯದಲ್ಲಿ ವಿಶ್ವದ ಲೆಜೆಂಡರಿ ಬಿಲಿಯನೇರ್ ಮತ್ತು ಹೂಡಿಕೆದಾರರಾದ ವಾರೆನ್ ಬಫೆಟ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅದಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅದಾನಿ ಮತ್ತು ಕುಟುಂಬದ ನಿವ್ವಳ ಮೌಲ್ಯ 123.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಈಗ ಜಗತ್ತಿನಲ್ಲಿ ಅದಾನಿಗಿಂತ ಶ್ರೀಮಂತರು ಉಳಿದಿರುವುದು ನಾಲ್ಕು ಜನ ಮಾತ್ರ. ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ $ 269.7 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅಮೆಜಾನ್‌ನ ಜೆಫ್ ಬೆಜೋಸ್ $170.2 ಶತಕೋಟಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. LVMH ನ ಬರ್ನಾರ್ಡ್ ಅರ್ನಾಲ್ಟ್ & ಫ್ಯಾಮಿಲಿ $166.8 ಶತಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದೇ ವೇಳೆ ಸಮಯದಲ್ಲಿ, ಮೈಕ್ರೋಸಾಫ್ಟ್ನ ಬಿಲ್ ಗೇಟ್ಸ್ $ 130.2 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಎಂಟನೇ ಸ್ಥಾನದಲ್ಲಿ ಅಂಬಾನಿ
ಈ ಹಿಂದೆ, ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಏಕೈಕ ಭಾರತೀಯ ವ್ಯಕ್ತಿ ಮುಖೇಶ್ ಅಂಬಾನಿ ಹೆಸರಿತ್ತು. ಆದರೆ ಇದೀಗ ಗೌತಮ್ ಅದಾನಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಟಾಪ್-5ರಲ್ಲಿ ಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಪ್ರಸ್ತುತ ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್‌ನ ಈ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿ ಅವರ ಸಂಪತ್ತು 104.2 ಬಿಲಿಯನ್ ಡಾಲರ್ ಆಗಿದೆ.
ಈ ವರ್ಷ ಶೇರುಗಳು ಶೇ 195 ರಷ್ಟು ಏರಿಕೆ
ಈ ತಿಂಗಳ ಆರಂಭದಲ್ಲಿ ಅದಾನಿ ಏಷ್ಯಾದ ಶ್ರೀಮಂತ ಬಿಲಿಯನೇರ್ ಆಗಿದ್ದರು. 59 ವರ್ಷದ ಅದಾನಿ ಕಂಪನಿಗಳ ಷೇರುಗಳು ಈ ವರ್ಷ ಶೇ.19ರಿಂದ ಶೇ.195ಕ್ಕೆ ಜಿಗಿದಿವೆ. ನವೀಕರಿಸಬಹುದಾದ ಇಂಧನ, ಮಾಧ್ಯಮ, ವಿಮಾನ ನಿಲ್ದಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗೌತಮ್ ಅದಾನಿ ವೇಗವಾಗಿ ವಿಸ್ತರಿಸಿದ್ದು, ಕಂಪನಿಗಳ ಷೇರುಗಳು ಉತ್ತಮ ಏರಿಕೆ ಕಂಡಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕ್ರೌನ್ ಪ್ರಿನ್ಸ್‌ನ ಸಹೋದರ ನಡೆಸುತ್ತಿರುವ ಅಬುಧಾಬಿ ಮೂಲದ ಇಂಟರ್‌ನ್ಯಾಶನಲ್ ಹೋಲ್ಡಿಂಗ್ ಕಂಪನಿಯು ಅದಾನಿಯ ಮೂರು ಹಸಿರು ಶಕ್ತಿ ಕೇಂದ್ರಿತ ಸಂಸ್ಥೆಗಳಲ್ಲಿ $2 ಬಿಲಿಯನ್ ಹೂಡಿಕೆ ಮಾಡಿದೆ.
8.9 ಬಿಲಿಯನ್ ಡಾಲರ್‌ನಿಂದ 123.2 ಬಿಲಿಯನ್ ಡಾಲರ್‌ಗೆ ಪ್ರಯಾಣ
ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಅಭೂತಪೂರ್ವ ಜಿಗಿತ ಕಂಡುಬಂದಿದೆ. ಎರಡು ವರ್ಷಗಳ ಹಿಂದೆ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ ಕೇವಲ 8.9 ಬಿಲಿಯನ್ ಡಾಲರ್ ಆಗಿತ್ತು. ಇದರ ನಂತರ, ಮಾರ್ಚ್ 2021 ರಲ್ಲಿ, ಅದಾನಿ ಅವರ ಸಂಪತ್ತು ಸುಮಾರು $ 50.5 ಬಿಲಿಯನ್ ತಲುಪಿತು. ಷೇರಿನ ಬೆಲೆಗಳಲ್ಲಿ ಆಶ್ಚರ್ಯಕರ ಜಿಗಿತದಿಂದಾಗಿ ಇದು ಸಂಭವಿಸಿತು. ಇದರ ನಂತರ, ಮಾರ್ಚ್ 2022 ರ ಹೊತ್ತಿಗೆ, ಅದಾನಿ ಸಂಪತ್ತು ಸುಮಾರು ದ್ವಿಗುಣಗೊಂಡು $ 90 ಶತಕೋಟಿಗೆ ಏರಿತು. ಇದೀಗ ಅದಾನಿ ಸಂಪತ್ತು ದೇಶದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯನ್ನು 19 ಬಿಲಿಯನ್ ಡಾಲರ್‌ಗಳಷ್ಟು ಮೀರಿಸಿದೆ.