Asianet Suvarna News Asianet Suvarna News

ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌, ಮಾರ್ಕೆಟ್‌ನಲ್ಲಿ ಬೆಳ್ಳುಳ್ಳಿ ಕೆಜಿಗೆ ಫೈವ್‌ ಹಂಡ್ರೆಡ್‌!


ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಟ್ರೆಂಡ್‌ ಆಗುತ್ತಿರುವ ಹೊತ್ತಿನಲ್ಲಿ ಮಾರ್ಕೆಟ್‌ನಲ್ಲಿಯೂ ಬೆಳ್ಳುಳ್ಳಿ ಟ್ರೆಂಡ್‌ ಸೃಷ್ಟಿಸಿದೆ. ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಕೆಜಿಗೆ 500 ರೂಪಾಯಿ ದಾಟಿದೆ.
 

Garlic Price is increasing daily Rs 500 per kg in these cities know the reason san
Author
First Published Feb 6, 2024, 5:03 PM IST

ನವದೆಹಲಿ (ಜ.6): ಈರುಳ್ಳಿಗೂ ಒಂದು ಕಾಲ, ಬೆಳ್ಳುಳ್ಳಿಗೂ ಒಂದು ಕಾಲ. ಬೆಳ್ಳುಳ್ಳಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್‌ ಮೂಲಕ ಮಾತ್ರ ಟ್ರೆಂಡ್‌ ಆಗಿಲ್ಲ. ಮಾರುಕಟ್ಟೆಯಲ್ಲೂ ಬೆಳ್ಳುಳ್ಳಿ ಟ್ರೆಂಡಿಂಗ್‌ನಲ್ಲಿದೆ. ಅದಕ್ಕೆ ಕಾರಣ ಬೆಳ್ಳುಳ್ಳಿಯ ಬೆಲೆ. ಚಳಿಗಾಲದ ಟೈಮ್‌ನಲ್ಲಿ ಬೆಳ್ಳುಳ್ಳಿ ಇರುವ ಫುಡ್‌ ತಿನ್ನೋದಕ್ಕೆ ಬಹಳ ರುಚಿಕರವಾಗಿರುತ್ತದೆ. ಆದರೆ, ಬೆಳ್ಳುಳ್ಳಿ ಬೆಲೆ ಮಾತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದೇಶದಲ್ಲಿ ಈರುಳ್ಳಿ-ಆಲೂಗಡ್ಡೆಯಂತಹ ಇತರ ತರಕಾರಿಗಳ ಬೆಲೆ ಕಡಿಮೆಯಾದರೂ, ಒಟ್ಟಾರೆ ಮನೆಯ ತರಕಾರಿ ವೆಚ್ಚದಲ್ಲಿ ಮಾತ್ರ ಕಡಿಮೆಯಾಗಿಲ್ಲ. ಒಂದು ತರಕಾರಿಯ ಬೆಲೆ ಇಳಿಕೆಯಾದರೆ, ಇನ್ನೊಂದು ತರಕಾರಿಯ ಬೆಲೆ ಗಗನಕ್ಕೆ ಏರಿರುತ್ತದೆ. ಟೋಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆಯ ಬಳಿಕ ಈಗ ಬೆಳ್ಳುಳ್ಳಿಯ ಕಾಲ ಬಂದಿದೆ. ಕರ್ನಾಟಕದಿಂದ ಹಿಡಿದು ದೆಹಲಿಯವರೆಗೂ, ಕೋಲ್ಕತ್ತಾದಿಂದ ಹಿಡಿದು ಅಹಮದಾಬಾದ್‌ವರೆಗೂ ಒಂದು ಕೆಜಿ ಬೆಳ್ಳುಳ್ಳಿ ಬೆಲೆ 450 ರಿಂದ 500 ರೂಪಾಯಿಗೆ ತಲುಪಿದೆ.

ದೇಶದಲ್ಲಿ ಬೆಳ್ಳುಳ್ಳಿ ಬೆಲೆಯಲ್ಲಿ ಈ ಕ್ಷಿಪ್ರ ಏರಿಕೆ ಕೇವಲ 15 ದಿನಗಳಲ್ಲಿ ಕಂಡುಬಂದಿದೆ. ಈ ಅವಧಿಯಲ್ಲಿ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಬೆಲೆ 300ರಿಂದ 500 ರೂಪಾಯಿಗೆ ಏರಿಕೆಯಾಗಿದೆ. ವಾರದ ಹಿಂದೆಯಷ್ಟೇ ಕೆಜಿಗೆ 300 ರೂ.ಗೆ ಮಾರಾಟವಾಗುತ್ತಿತ್ತು. ವರದಿಗಳನ್ನು ನಂಬುವುದಾದರೆ ಕೋಲ್ಕತ್ತಾದಲ್ಲಿ 15 ದಿನಗಳ ಹಿಂದೆ 200-220 ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಈಗ 500 ರೂ.ಗೆ ಮಾರಾಟವಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮಾರಾಟಗಾರರ ಸಂಘ ತಿಳಿಸಿದೆ.

ಅಸೋಸಿಯೇಷನ್ ಅಧ್ಯಕ್ಷ ಕಮಲ್ ಡೇ ಈ ಬಗ್ಗೆ ಮಾತನಾಡಿದ್ದು, ಉತ್ಪಾದನೆಯಲ್ಲಿ ಇಳಿಕೆಯಿಂದಾಗಿ ಈ ವರ್ಷ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಬಂಗಾಳದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸರಬರಾಜುಗಳು ಹೊರಗಿನಿಂದ ಬರುತ್ತವೆ ಮತ್ತು ಅದರ ಮುಖ್ಯ ಮೂಲ ನಾಸಿಕ್ ಆಗಿದೆ. ಕೋಲ್ಕತ್ತಾ ಮಾತ್ರವಲ್ಲದೆ ಗುಜರಾತ್ ನ ಅಹಮದಾಬಾದ್ ನಲ್ಲೂ ಬೆಳ್ಳುಳ್ಳಿ ಕೆಜಿಗೆ 400-450 ರೂ.ಗೆ ಮಾರಾಟವಾಗುತ್ತಿದೆ. ಇದಲ್ಲದೆ, ದೆಹಲಿ, ಯುಪಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ.

ಇನ್ನೂ ಕರ್ನಾಟಕದಲ್ಲೂ ಬೆಳ್ಳುಳ್ಳಿ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ 1 ಕೆಜಿ ಬೆಳ್ಳುಳ್ಳಿಗೆ 400 ರಿಂದ 500 ರೂಪಾಯಿಯಂತೆ ಮಾರಾಟವಾಗುತ್ತದೆ. ಮಂಗಳೂರು ಹಾಗೂ ಹುಬ್ಬಳ್ಳಿ ಮಾರುಕಟ್ಟೆಗಳಲ್ಲೂ ದೊಡ್ಡ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ.

ಕೆಲ ಸಮಯದ ಹಿಂದೆ ಈರುಳ್ಳಿ ಜನರಿಗೆ ಕಣ್ಣೀರು ತರಿಸುತ್ತಿತ್ತು. ಕಳೆದೆರಡು ತಿಂಗಳಿಂದ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡು ಜನ ಸಾಮಾನ್ಯರಿಗೆ ನೆಮ್ಮದಿ ತಂದಿದೆ. ಈರುಳ್ಳಿ ಬೆಲೆಗಳು ಗಗನಕ್ಕೇರಿದಾಗ, ಸರ್ಕಾರವು ತಕ್ಷಣದ ಕ್ರಮಗಳನ್ನು ಕೈಗೊಂಡಿತು ಮತ್ತು 2023ರ ಡಿಸೆಂಬರ್ 7ರಂದು ಜಾರಿಗೆ ಬಂದ ರಫ್ತು ನಿಷೇಧದ ಕಾರಣದಿಂದಾಗಿ ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕೆ ತಂದಿತು. ಅದರ ಬೆಲೆ ಎರಡು ತಿಂಗಳಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ.

ಈರುಳ್ಳಿ,ಬೆಳ್ಳುಳ್ಳಿಆಯ್ತುಈಗ ತೊಗರಿಬೇಳೆ ಸರದಿ; ಜನಸಾಮಾನ್ಯರ ಜೇಬು ಸುಡುತ್ತಿದೆ ಬೆಲೆಯೇರಿಕೆ ಬಿಸಿ

ಈರುಳ್ಳಿ ಜತೆಗೆ ಅಡುಗೆಮನೆಯಲ್ಲಿ ಮತ್ತೊಂದು ಪ್ರಮುಖ ತರಕಾರಿ ಆಲೂಗೆಡ್ಡೆ ಬೆಲೆಯೂ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗಿದೆ. ಒಂದು ತಿಂಗಳಲ್ಲಿ ಇದರ ಬೆಲೆಯಲ್ಲಿ ಶೇ.30ರಷ್ಟು ಇಳಿಕೆಯಾಗಿದೆ. ಆದರೆ, ಆಲೂಗೆಡ್ಡೆ, ಈರುಳ್ಳಿ ಬೆಲೆ ಕುಸಿತದಿಂದ ಬೆನ್ನಲ್ಲಿಯೇ ಬೆಳ್ಳುಳ್ಳಿ ಸಮಸ್ಯೆ ಹೆಚ್ಚಾಗಿದ್ದು ಕ್ರಮೇಣ ಜನರ ಅಡುಗೆ ಮನೆಯಿಂದ ಮಾಯವಾಗುತ್ತಿದೆ. ತಜ್ಞರ ಪ್ರಕಾರ, ಅನಿಯಮಿತ ಹವಾಮಾನದಿಂದಾಗಿ ರಾಬಿ ಬೆಳೆ ಕಟಾವು ವಿಳಂಬವಾಗಿದೆ, ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಮತ್ತು ಮಾರುಕಟ್ಟೆಗೆ ಬೆಳ್ಳುಳ್ಳಿ ಬರುವ ಪ್ರಮಾಣ ಕಡಿಮೆ ಆಗಿರುವುದರಿಂದ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.

ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಹಲವೆಡೆ ಕೆಜಿಗೆ 400ರೂ.

Follow Us:
Download App:
  • android
  • ios