ನವದೆಹಲಿ(ಡಿ.20): ಕೊರೋನಾದಿಂದ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿರುವ ಹಂತದಲ್ಲೇ ತಾವು ಈ ಬಾರಿ ಮಂಡಿಸಲಿರುವ ಬಜೆಟ್‌, ಹಿಂದೆಂದೂ ಕಂಡುಕೇಳರಿಯದ ರೀತಿಯ ಬಜೆಟ್‌ ಆಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ.

ಸಿಐಐ ಸಹಭಾಗಿತ್ವ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್‌, ‘ಕೊರೋನಾ ಬಳಿಕ ಮಂಡನೆ ಆಗುತ್ತಿರುವ ಬಜೆಟ್‌ ಇದಾಗಿರುವ ಕಾರಣ, ಕಳೆದ 100 ವರ್ಷದಲ್ಲೇ ಯಾರೂ ಮಂಡಿಸಿರದ ರೀತಿಯ ಬಜೆಟ್‌ ಅನ್ನು ಸಾದರಪಡಿಸಲು ಬಯಸಿದ್ದೇನೆ. ಅದಕ್ಕಾಗಿ ನಿಮ್ಮೆಲ್ಲರಿಂದ ಸಲಹೆಯನ್ನು ನಿರೀಕ್ಷಿಸುತ್ತಿದ್ದೇನೆ. ಕೊರೋನಾ ಬಳಿಕದ ಭಾರತದ ಸನ್ನಿವೇಶ ಭಿನ್ನವಾಗಿ ಇರಲಿದೆ. ನಾವು ಜಾಗತಿಕ ಪ್ರಗತಿಯ ಜೊತೆಗೆ ಹೆಜ್ಜೆ ಹಾಕಬೇಕಿದೆ. ಅದೇ ರೀತಿ ಭಾರತದ ಮೇಲೆ ಹಲವು ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಬಜೆಟ್‌ ಮಂಡಿಸಬೇಕಿರುವ ಸವಾಲು ನಮ್ಮ ಮುಂದಿದೆ’ ಎಂದು ಹೇಳಿದ್ದಾರೆ.

ಅವರ ಈ ಭರವಸೆಯಿಂದಾಗಿ ಉದ್ಯಮ, ಕೃಷಿ, ಕೈಗಾರಿಕಾ, ಸೇವಾ ವಲಯಗಳ ಜೊತೆಗೆ ಜನ ಸಾಮಾನ್ಯರು ಕೂಡಾ ಬಜೆಟ್‌ ಮೇಲಿನ ಹೆಚ್ಚಿನ ನಿರೀಕ್ಷೆ ಇಡುವಂತಾಗಿದೆ.