ಅಮೆರಿಕದ ವಸ್ತುಗಳ ಮೇಲೆ ಭಾರತ ಸರ್ಕಾರ ತೆರಿಗೆ ಕಡಿತ ಮಾಡಲು ಮುಂದಾಗಿದೆ. ಪ್ರತಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಮತ್ತು ವ್ಯಾಪಾರವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ನವದೆಹಲಿ: ಅಮೆರಿಕಕ್ಕೆ ಆಮದಾಗುವ ಭಾರತೀಯ ವಸ್ತುಗಳ ಮೇಲೆ ಪ್ರತಿತೆರಿಗೆ ಹೇರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಎಚ್ಚರಿಕೆ ಬೆನ್ನಲ್ಲೇ ಭಾರತ ಸರ್ಕಾರವು ಅಮೆರಿಕದ ವಸ್ತುಗಳ ಮೇಲೆ ಮತ್ತೊಂದು ಸುತ್ತಿನ ತೆರಿಗೆ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಪ್ರತಿ ತೆರಿಗೆ ಹೊಡೆತದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಫೆ.1ರ ಕೇಂದ್ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಐಷಾರಾಮಿ ಕಾರುಗಳು ಮತ್ತು ಬೋರ್ಬೋರ್ನ್‌ ವಿಸ್ಕಿ ಮೇಲಿನ ತೆರಿಗೆ ಕಡಿತ ಘೋಷಿಸಿದ್ದ ಕೇಂದ್ರ ಈಗ ಮತ್ತೊಂದಷ್ಟು ವಸ್ತುಗಳ ಮೇಲೆ ತೆರಿಗೆ ಇಳಿಸಲು ಮುಂದಾಗಿದೆ. ಅದರನ್ವಯ ಕಾರುಗಳು, ರಾಸಾಯನಿಕ, ಆಟೋಮೊಬೈಲ್‌, ಕೃಷಿ ಉತ್ಪನ್ನಗಳು, ಅಗತ್ಯ ಔಷಧಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲು ಕೇಂದ್ರ ದಾಪುಗಾಲು ಇರಿಸಿದೆ. ಇದು ಸಾಧ್ಯವಾದರೆ ಅಮೆರಿಕದ ವಸ್ತುಗಳ ಬೆಲೆ ಇಳಿಕೆಯಾಗಲಿದೆ’ ಎಂದು ಮೂಲಗಳು ಹೇಳಿವೆ.

ಈ ಮೂಲಕ 2030ರ ವೇಳೆಗೆ ಅಮೆರಿಕದೊಂದಿಗಿನ ವ್ಯಾಪಾರವನ್ನು 300 ಬಿಲಿಯನ್‌ ಡಾಲರ್‌ಗೆ ಏರಿಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರತಿ ತೆರಿಗೆ?

ಒಂದು ದೇಶದಿಂದ ರಫ್ತಾಗುವ ವಸ್ತುವಿಗೆ ಮತ್ತೊಂದು ದೇಶ ಎಷ್ಟು ಆಮದು ಸುಂಕ ವಿಧಿಸುತ್ತದೆಯೋ, ಅದೇ ಪ್ರಮಾಣದ ಸುಂಕವನ್ನು ಆ ದೇಶದಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ಹೇರುವುದೇ ಪರಸ್ಪರ ಸುಂಕ.

ಗೋವಾ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಇಡ್ಲಿ, ಸಾಂಬಾರ್‌ ಕಾರಣ : ಬಿಜೆಪಿ ಶಾಸಕ ಮೈಕೆಲ್ ಲೋಬೊ

ಪಣಜಿ: ಗೋವಾ ಬೀಚ್‌ಗಳಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಗುರುವಾರ ಹೇಳಿದ್ದಾರೆ.

ಉತ್ತರ ಗೋವಾದ ಕ್ಯಾಲಂಗೂಟ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾದರೆ ಅದಕ್ಕೆ ಸರ್ಕಾರ ಮಾತ್ರ ಕಾರಣವಲ್ಲ, ವ್ಯಾಪಾರಸ್ಥರೂ ಹೌದು. ಬೆಂಗಳೂರಿನ ಕೆಲವರು ವಡಾ ಪಾವ್, ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. ಇದು ವಿದೇಶಿಗರಿಗೆ ಇಷ್ವಿಲ್ಲ. ಅದಕ್ಕಾಗಿಯೇ ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕುಸಿಯುತ್ತಿದೆ’ ಎಂದರು.

‘ವಿದೇಶಗಳ ಯುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಪಾಲುದಾರರು ಜಂಟಿ ಸಭೆ ನಡೆಸಿ ವಿದೇಶಿ ಪ್ರವಾಸಿಗರು ಗೋವಾದಿಂದ ವಿಮುಖರಾಗುತ್ತಿರಲು ಕಾರಣಗಳನ್ನು ಅಧ್ಯಯನ ಮಾಡಬೇಕು’ಎಂದರು.