ಸಿಮ್ ಗೆ ಕಾಗದರಹಿತ ಕೆವೈಸಿಯಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿ ಸ್ಥಗಿತದ ತನಕ ಜ.1ರಿಂದ ಈ 6 ಹೊಸ ನಿಯಮ ಜಾರಿ
ಪ್ರತಿ ಹೊಸ ತಿಂಗಳ ಪ್ರಾರಂಭದಲ್ಲಿ ಒಂದಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಅದರಂತೆ ಜನವರಿ 1ರಿಂದ ಕೂಡ ಕೆಲವು ಹೊಸ ನಿಯಮಗಳು ಜಾರಿಗೆ ಬರಲಿವೆ.
Business Desk: ಪ್ರತಿ ಹೊಸ ತಿಂಗಳ ಪ್ರಾರಂಭದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಹಾಗೆಯೇ ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತವೆ ಕೂಡ. ಈ ನಿಯಮಗಳು ಜನಸಾಮಾನ್ಯರ ಜೀವನದ ಮೇಲೆ ನೇರ ಪರಿಣಾಮ ಬೀರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಸಿಮ್ ಕಾರ್ಡ್ ಗೆ ಕಾಗದರಹಿತ ಕೆವೈಸಿಯಿಂದ ಹಿಡಿದು ಬ್ಯಾಂಕ್ ಲಾಕರ್ ಒಪ್ಪಂದದ ತನಕ ಅನೇಕ ನಿಯಮಗಳು 2024ರ ಜನವರಿ 1ರಿಂದ ಬದಲಾಗಲಿವೆ. ಹಾಗಾದ್ರೆ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಅವುಗಳಿಂದ ಜನಸಾಮಾನ್ಯರ ಜೀವನದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ.
1.ಸಿಮ್ ಕಾರ್ಡ್ ಪಡೆಯಲು ಕಾಗದರಹಿತ ಕೆವೈಸಿ: ಹೊಸ ವರ್ಷದ ಮೊದಲ ದಿನದಿಂದ ಈ ತನಕ ಜಾರಿಯಲ್ಲಿದ್ದ ಕಾಗದ ಆಧಾರಿತ ನೋ ಯುವರ್ ಕಸ್ಟಮರ್ (ಕೆವೈಸಿ) ಪ್ರಕ್ರಿಯೆ ಕಾಗದರಹಿತ ಕೆವೈಸಿಯಾಗಿ ಬದಲಾಗಲಿದೆ. ಹೀಗಾಗಿ ಮೊಬೈಲ್ ಸಿಮ್ ಪಡೆಯಲು ಕಾಗದರಹಿತ ಕೆವೈಸಿ ಮಾಡಬೇಕು. ಇನ್ನು ಹೊಸ ಮೊಬೈಲ್ ಸಂಪರ್ಕಕ್ಕೆ ಸಂಬಂಧಿಸಿದ ನಿಯಮಗಳು ಕೂಡ ಬದಲಾಗದೆ ಹಾಗೆಯೇ ಇರಲಿವೆ.
ಮ್ಯೂಚುವಲ್ ಫಂಡ್, ಡಿಮ್ಯಾಟ್ ಖಾತೆಗೆ ನಾಮಿನಿ ಸೇರ್ಪಡೆ ಅಂತಿಮ ಗಡುವು ಮತ್ತೆ ಮುಂದೂಡಿಕೆ; ಜೂ.30ರ ತನಕ ಕಾಲಾವಕಾಶ
2.ನಿಷ್ಕ್ರಿಯ ಯುಪಿಐ ಖಾತೆ ಸ್ಥಗಿತ: ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸದ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸುವಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಪಾವತಿ ಅಪ್ಲಿಕೇಷನ್ ಗಳಿಗೆ ರಾಷ್ಟ್ರೀಯ ಪಾವತಿಗಳ ನಿಗಮ ನಿರ್ದೇಶನ ನೀಡಿದೆ. ಈ ನಿಯಮ ಅನುಷ್ಠಾನಕ್ಕೆ ಥರ್ಡ್ ಪಾರ್ಟಿ ಆಪ್ ಪ್ರಾವೈಡರ್ಸ್ (ಟಿಪಿಎಪಿ) ಹಾಗೂ ಪಾವತಿ ಸೇವೆ ಪೂರೈಕೆದಾರರಿಗೆ (PSP) ಎನ್ ಪಿಸಿಐ ಡಿಸೆಂಬರ್ 31ರ ಗಡುವು ನೀಡಿದೆ. ಹೀಗಾಗಿ ಇಂಥ ಯುಪಿಐ ಐಡಿಗಳು ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ.
3.ಎಲ್ ಪಿಜಿ ಸಿಲಿಂಡರ್ ಬೆಲೆ ವ್ಯತ್ಯಾಸ: ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಹೆಚ್ಚಾಗಿ ಬದಲಾವಣೆಗಳಾಗುತ್ತವೆ. ಅದರಂತೆ ಈ ಬಾರಿ ಕೂಡ ಜನವರಿ 1ರಂದು ಅಡುಗೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.
4.ಆದಾಯ ತೆರಿಗೆ ರಿಟರ್ನ್ಸ್ : 2023-24ನೇ ಮೌಲ್ಯಮಾಪನ ವರ್ಷದ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಇನ್ನು ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿ ಕೆಲವು ತಪ್ಪುಗಳಿದ್ರೆ ಅದನ್ನು ಸರಿಪಡಿಸಿ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡಲು ನೀವು ವಿಫಲರಾದ್ರೆ ವಿಳಂಬ (Belated)ಐಟಿಅರ್ ಸಲ್ಲಿಕೆಗೆ ದಂಡ ಶುಲ್ಕ ಕಟ್ಟಬೇಕು. ಒಂದು ವೇಳೆ ಈ ಗಡುವಿಗೂ ಮುನ್ನ ಐಟಿಆರ್ ಸಲ್ಲಿಕೆ ಮಾಡದಿದ್ರೆ ಜನವರಿ 1ರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ.
mAadhaar ಅಪ್ಲಿಕೇಷನ್ ನಲ್ಲಿ ಈಗ ಕಾಗದರಹಿತ ಆಪ್ ಲೈನ್ ಇ-ಕೆವೈಸಿ ಸೌಲಭ್ಯ; ಬಳಸಲು ಹೀಗೆ ಮಾಡಿ
5.ಬ್ಯಾಂಕ್ ಲಾಕರ್ ಒಪ್ಪಂದ: ಪರಿಷ್ಕೃತ ಹೊಸ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಎಲ್ಲ ಗ್ರಾಹಕರು ಸಹಿ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೂಚಿಸಿದ್ದು, ಇದಕ್ಕೆ 2023ರ ಡಿಸೆಂಬರ್ 31ರ ಗಡುವು ನೀಡಿದೆ. ಒಂದು ವೇಳೆ ನೀವು ಇನ್ನೂ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದ ಸಲ್ಲಿಕೆ ಮಾಡದಿದ್ದರೆ ಅಪ್ಡೇಟ್ ಆಗಿರುವ ಒಪ್ಪಂದಕ್ಕೆ ಸಹಿ ಮಾಡಿ ಡಿ.31ರೊಳಗೆ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಜನವರಿ 1ರಿಂದ ನಿಮ್ಮ ಲಾಕರ್ ನಿಷ್ಕ್ರಿಯಗೊಳ್ಳಲಿದೆ.
6.ಅಗ್ಗದ ಸಿಲಿಂಡರ್: ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂವೈ) ಅಡಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 450ರೂ. ಇರಲಿದೆ. ಇದು ಈಗಿನ ದರ 500ರೂ.ಗಿಂತ ಕಡಿಮೆ.