ನವದೆಹಲಿ(ಫೆ.19): ಆಧಾರ್ ಮಾಹಿತಿ ಸೋರಿಕೆಯ ಸುದ್ದಿಗಳು ನಮಗೇನು ಹೊಸದಲ್ಲ. ಗ್ರಾಹಕರ ಆಧಾರ್ ಮಾಹಿತಿ ಸೋರಿಕೆಯಾದ ಕುರಿತು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಎಲ್‌ಪಿಜಿಗಾಗಿ ನೀಡಿದ ಮಾಹಿತಿ ಸೋರಿಕೆಯಾಗಿದೆ ಎಂದರೆ ಭಯ ಉಂಟಾಗದಿರದು.

ಹೌದು, ಭಾರತೀಯ ತೈಲ ನಿಗಮದ ನಿಯಂತ್ರಣದಲ್ಲಿರುವ ಇಂಡೇನ್ ಎಲ್‌ಪಿಜಿಯ ಲಕ್ಷಾಂತರ ಗ್ರಾಹಕರು ಮತ್ತು ವಿತರಕರ ಆಧಾರ್ ಸಂಖ್ಯೆಗಳು ಬಹಿರಂಗವಾಗಿದೆ ಎಂದು ಫ್ರಾನ್ಸ್ ದೇಶದ ಸಂಶೋಧಕ ಎಲ್ಲಿಯಟ್ ಅಲ್ಡರ್ಸನ್ ಹೊಸ ಬಾಂಬ್ ಸಿಡಿಸಿದ್ದಾರೆ.

ಆನ್‌ಲೈನ್ ಮೂಲಕ ಇಂಡೇನ್ ಗ್ಯಾಸ್ ಸಿಲಿಂಡರ್ ವಿತರಕರು ಮತ್ತು ಗ್ರಾಹಕರ ಆಧಾರ್ ಸಂಖ್ಯೆ ಸೋರಿಕೆಯಾಗಿರುವ ಕುರಿತು ಎಲ್ಲಿಯಟ್ ಅಲ್ಡರ್ಸನ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ 67 ಲಕ್ಷ ಗ್ರಾಹಕರು ಮತ್ತು ವಿತರಕರ ಆಧಾರ್ ಸಂಖ್ಯೆ ಸೋರಿಕೆಯಾಗಿವೆ ಎಂದೂ ಎಲ್ಲಿಯಟ್ ಹೇಳಿದ್ದಾರೆ.

ಸ್ಥಳೀಯ ವಿತರಕರ ಪೋರ್ಟಲ್‌ನಲ್ಲಿ ನಿಖರತೆಯ ಕೊರತೆಯಿಂದಾಗಿ ಇಂಡೇನ್ ಗ್ರಾಹಕರ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆಗಳು ಬಹಿರಂಗವಾಗಿವೆ ಎಂದು ಎಲ್ಲಿಯಟ್ ಹೇಳಿದ್ದು, ಈ ಕುರಿತು  ಇಂಡೇನ್ ವಿತರಣಾ ಸಂಸ್ಥೆಯಾಗಲಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವಾಗಲಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.