2019ರಲ್ಲಿ 3 ಲಕ್ಷ ಕೋಟಿಗಾಗಿ ಸರ್ಕಾರ ಆರ್‌ಬಿಐ ಮಧ್ಯೆ ಜಟಾಪಟಿ ನಡೆದಿತ್ತು: RBI ಮಾಜಿ ಉಪ ಗವರ್ನರ್
2019ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನಿಂದ 2ರಿಂದ 3 ಲಕ್ಷ ಕೋಟಿ ರು. ಹಣ ಕೇಳಿತ್ತು. ಅದನ್ನು ಕೊಡಲು ಆರ್‌ಬಿಐ ನಿರಾಕರಿಸಿದ್ದರಿಂದ ತಿಕ್ಕಾಟ ಏರ್ಪಟ್ಟಿತ್ತು ಎಂದು ಕೇಂದ್ರೀಯ ಬ್ಯಾಂಕ್‌ನ ಮಾಜಿ ಉಪಗವರ್ನರ್ ವಿರಳ್ ಆಚಾರ್ಯ ಅವರು ಹೇಳಿದ್ದಾರೆ.

ನವದೆಹಲಿ: 2019ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರವೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ನಿಂದ 2ರಿಂದ 3 ಲಕ್ಷ ಕೋಟಿ ರು. ಹಣ ಕೇಳಿತ್ತು. ಅದನ್ನು ಕೊಡಲು ಆರ್‌ಬಿಐ ನಿರಾಕರಿಸಿದ್ದರಿಂದ ತಿಕ್ಕಾಟ ಏರ್ಪಟ್ಟಿತ್ತು ಎಂದು ಕೇಂದ್ರೀಯ ಬ್ಯಾಂಕ್‌ನ ಮಾಜಿ ಉಪಗವರ್ನರ್ ವಿರಳ್ ಆಚಾರ್ಯ ಅವರು ಹೇಳಿದ್ದಾರೆ. ಕ್ವೆಸ್ಟ್ ಫಾರ್ ರೆಸ್ಟೋರಿಂಗ್ ಫೈನಾನ್ಷಿಯಲ್ ಸ್ಟೆಬಿಲಿಟಿ ಇನ್ ಇಂಡಿಯಾ ಎಂಬ ಹೆಸರಿನ ಪುಸ್ತಕವನ್ನು 2020ರಲ್ಲಿ ಹೊರ ತಂದಿದ್ದ ವಿರಳ್ ಅವರು, ಇದೀಗ ಆ ಪುಸ್ತಕದ ಮುನ್ನುಡಿಗೆ ತಿದ್ದುಪಡಿ ತಂದಿದ್ದಾರೆ. ಅದರಲ್ಲಿ ಆರ್‌ಬಿಐ- ಸರ್ಕಾರದ ಸಂಘರ್ಷ ವಿಚಾರದ ಪ್ರಸ್ತಾಪವಿದೆ. ಗಮನಾರ್ಹ ಎಂದರೆ, 2018ರಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲೂ ಇದೇ ವಿಷಯವನ್ನು ಅವರು ಹೇಳಿದ್ದರು.
ಪುಸ್ತಕದಲ್ಲೇನಿದೆ?:
ಕೇಂದ್ರ ಸರ್ಕಾರಕ್ಕೆ ಲಾಭಾಂಶ ನೀಡಿದ ಬಳಿಕವೂ ಆರ್‌ಬಿಐ (RBI) ಒಂದಷ್ಟು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುತ್ತದೆ. ಅಪನಗದೀಕರಣಕ್ಕೆ ಮೂರು ವರ್ಷ ಮುನ್ನ ಆರ್‌ಬಿಐ ದಾಖಲೆ ಮಟ್ಟದ ಲಾಭ ಗಳಿಸಿ ಕೇಂದ್ರ ಸರ್ಕಾರಕ್ಕೆ (Union Govt) ಹಣ ವರ್ಗಾವಣೆ ಮಾಡಿತ್ತು. ಅಪನಗದೀಕರಣ ವರ್ಷದಲ್ಲಿ ನೋಟು ಮುದ್ರಣದಿಂದಾಗಿ ಕೇಂದ್ರ ಸರ್ಕಾರಕ್ಕೆ (Central Govt) ನೀಡಬೇಕಿದ್ದ ಹಣದ ಪ್ರಮಾಣ ಕಡಿಮೆಯಾಗಿತ್ತು. ಕೇಂದ್ರ ಸರ್ಕಾರ ಷೇರು ವಿಕ್ರಯದಿಂದ ಹಣ ಹೊಂದಿಸಲು ವಿಫಲವಾಗಿತ್ತು. ಹೀಗಾಗಿ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳಲು ಹಣ ನೀಡುವಂತೆ ಆರ್‌ಬಿಐ ಮೇಲೆ ಒತ್ತಡ ಹೇರಿತ್ತು ಎಂದು ಮುನ್ನುಡಿಯಲ್ಲಿ ವಿರಳ್ ವಿವರಿಸಿದ್ದಾರೆ.
ಆರ್‌ಬಿಐ ಹಣ ಕೊಡಲು ನಿರಾಕರಿಸಿದಾಗ ರಿಸರ್ವ್ ಬ್ಯಾಂಕ್ (Reserve Bank) ಕಾಯ್ದೆಯ ಸೆಕ್ಷನ್ 7 ಅನ್ನು ಜಾರಿಗೊಳಿಸಿ ಹಣ ಪಡೆಯುವ ಬಗ್ಗೆ ಚರ್ಚೆಯಾಗಿತ್ತು. ಆ ಸೆಕ್ಷನ್ ಜಾರಿಗೊಳಿಸುವುದು ಆರ್‌ಬಿಐನ 80 ವರ್ಷಗಳ ಇತಿಹಾಸದಲ್ಲಿ ಅದೇ ಮೊದಲಾಗಿತ್ತು. ಅದೇ ಸಂದರ್ಭದಲ್ಲಿ ಆರ್‌ಬಿಐ ಗವರ್ನರ್ (RBI Governor)ಆಗಿದ್ದ ಊರ್ಜಿತ್ ಪಟೇಲ್ (Urjith Patel) ಅವರು ತಮ್ಮ ಮೂರು ವರ್ಷಗಳ ಅವಧಿಗೆ ಇನ್ನೂ 9 ತಿಂಗಳು ಇರುವಾಗಲೇ ರಾಜೀನಾಮೆ ನೀಡಿದರು. ಕೊನೆಗೆ 2019ರಲ್ಲಿ ಕೇಂದ್ರ ಸರ್ಕಾರಕ್ಕೆ 1.76 ಲಕ್ಷ ಕೋಟಿ ರು. ಹಣ ವರ್ಗಾವಣೆಯಾಯಿತು ಎಂದು ತಿಳಿಸಿದ್ದಾರೆ.
ವಿರಳ್ ಆಚಾರ್ಯ ಅವರು ತಮ್ಮ ಅವಧಿ ಮುಕ್ತಾಯಗೊಳ್ಳಲು ಆರು ತಿಂಗಳು ಇರುವಾಗಲೇ ಉಪ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು.