ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ: ಬ್ಯಾಂಕ್ ಸಿಬ್ಬಂದಿಗೆ ನಿರ್ಮಲಾ ಆದೇಶ!
ಸ್ಥಳೀಯ ಭಾಷೇಲಿ ಸಂವಾದ ಮಾಡದ ಬ್ಯಾಂಕರ್‌ಗಳು: ನಿರ್ಮಲಾ ಆಕ್ಷೇಪ| ಸರ್ಕಾರಿ ಬ್ಯಾಂಕ್‌ಗಳು ತಳಮಟ್ಟದ ಸಂಪರ್ಕವನ್ನೇ ಹೊಂದಿಲ್ಲ| ಸರ್ಕಾರಿ ಯೋಜನೆಗಳ ಬಗ್ಗೆ ಸ್ಥಳೀಯ ಭಾಷೆಯಲ್ಲೇ ಮಾಹಿತಿ ನೀಡಿ
ನವದೆಹಲಿ[ಫೆ.28]: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಅಧಿಕಾರಿಗಳು ತಮ್ಮ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ಗ್ರಾಹಕರ ಆರೋಪಗಳ ಬೆನ್ನಲ್ಲೇ, ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸರ್ಕಾರಿ ಬ್ಯಾಂಕ್‌ಗಳು ಜನರ ಜೊತೆ ಬೆರೆಯುತ್ತಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮುಂದಿನ ಹಂತದ ಸುಧಾರಣಾ ಕ್ರಮಗಳ ಅನಾವರಣ ಕುರಿತಾದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವೆ ನಿರ್ಮಲಾ ಮಾತನಾಡಿದರು. ಈ ವೇಳೆ, ‘ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜೊತೆ ಉತ್ತಮವಾಗಿ ವ್ಯವಹರಿಸುತ್ತಿಲ್ಲ. ಅಲ್ಲದೆ, ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ಜೊತೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿ, ಬ್ಯಾಂಕ್‌ಗಳ ಶಾಖೆಗಳ ಹಂತದಲ್ಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು.
ಸರ್ಕಾರಿ ಯೋಜನೆಗಳ ಬಗ್ಗೆ ಅರಿತುಕೊಳ್ಳಿ:
ದೇಶದ ಹಲವು ಬ್ಯಾಂಕ್‌ಗಳ ಸಿಬ್ಬಂದಿಗೆ ಗ್ರಾಹಕರಿಗಾಗಿ ಬ್ಯಾಂಕ್‌ಗಳ ಮೂಲಕ ಕೇಂದ್ರ ಸರ್ಕಾರ ಜಾರಿ ಮಾಡುವ ಹಲವು ಯೋಜನೆಗಳ ಬಗ್ಗೆಯೇ ಮಾಹಿತಿ ತಿಳಿದಿರುವುದಿಲ್ಲ. ಇದರಿಂದ ಸರ್ಕಾರದ ಯೋಜನೆಗಳು ಗ್ರಾಹಕರಿಗೆ ತಲುಪುವುದು ಹೇಗೆ ಸಾಧ್ಯ? ಹೀಗಾಗಿ, ಈ ಸಂಬಂಧ ಶಾಖೆಗಳ ಹಂತದ ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಅಲ್ಲದೆ, ಈ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಫೆಬ್ರವರಿ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: