ಬೆಂಗಳೂರು(ಮೇ.16): ರಾಜ್ಯದ ಕೈಗಾರಿಕಾ ವಲಯದ ಪ್ರಾತಿನಿಧಿಕ ಸಂಸ್ಥೆ ಎಫ್‌ಕೆಸಿಸಿಐ, ನಗರದಲ್ಲಿ 2019ರ ಸಾಲಿನ ಕಾನ್ಸೂಲರ್ ಸಭೆಯನ್ನು ಏರ್ಪಡಿಸಿತ್ತು. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಸಂಸ್ಥೆಯ ಭವಿಷ್ಯದ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಎಫ್‌ಕೆಸಿಸಿಐ ಮುಖ್ಯಸ್ಥ ಸುಧಾಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾನ್ಸೂಲರ್ ಸಭೆಯಲ್ಲಿ, ಸ್ವಿಡ್ಜರ್ ಲ್ಯಾಂಡ್, ಜಪಾನ್ ಮತ್ತು ಫ್ರಾನ್ಸ್ ರಾಯಭಾರಿಗಳು ಭಾಗವಹಿಸಿದ್ದರು. ಕರ್ನಾಟಕ ಮತ್ತು ವಿವಿಧ ದೇಶಗಳೊಂದಿಗಿನ ಹೂಡಿಕೆ ಸಂಬಂಧ ಮತ್ತು ವೃದ್ಧಿಯ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ, ಸಂಸ್ಥೆ ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು. ಕರ್ನಾಟಕ ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದಲ್ಲೇ 5ನೇ ಸ್ಥಾನದಲ್ಲಿದ್ದು, ನವದೆಹಲಿ ಮತ್ತು ಮುಂಬೈ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸುಧಾಕರ್ ಶೆಟ್ಟಿ ಹೇಳಿದರು.

1941ರಲ್ಲಿ ಬೇಂಗಳೂರಿನ ಜನಸಂಖ್ಯೆ ಕೇವಲ 4.10 ಲಕ್ಷದಷ್ಟಿದ್ದು, ಇದೀಗ 1.20 ಕೋಟಿಗೆ ತಲುಪಿದೆ. 2018-19ರಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ದರ ಶೇ.4.5ರಷ್ಟಿದ್ದು, ಕೋಲ್ಕತ್ತಾ ಮತ್ತು ಚೆನ್ನೈ ನಗರಗಳನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ಸುಧಾಕರ್ ತಿಳಿಸಿದರು.

ಕರ್ನಾಟಕ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದ್ದು, ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದ ದ್ವಿತೀಯ ದರ್ಜೆ ನಗರಗಳಲ್ಲೂ ಹೂಡಿಕೆಗೆ ವಿಫುಲ ಅವಕಾಶವಿದೆ ಎಂದು ಸುಧಾಕರ್ ಹೇಳಿದರು. ಮೈಸೂರು, ದಕ್ಷಿಣ ಕನ್ನಡ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಕೋಲಾರ ಮತ್ತು ಮಂಡ್ಯದಲ್ಲಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ ಫೆ.29ರಂದು ಎಫ್‌ಕೆಸಿಸಿಐ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆಸಿಯಾನ್ ಸಭೆ ಅತ್ಯಂತ ಯಶಸ್ವಿಯಾಗಿದ್ದು, ವಿವಿಧ ದೇಶಗಳ ಉದ್ಯಮಿಗಳು 18 ಯೋಜನೆಗಳಲ್ಲಿ ಒಟ್ಟು 98 ಸಾವಿರ ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಇದು ಎಫ್‌ಕೆಸಿಸಿಐ ಇತಿಹಾಸದಲ್ಲಿ ನಡೆದ ಅತ್ಯಂತ ಯಶಸ್ವಿ ಉದ್ಯಮ ಸಭೆ ಎಂದು ಸಭೆ ಹರ್ಷ ವ್ಯಕ್ತಪಡಿಸಿತು.  

ಇನ್ನು ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ವಿಸ್ ರಾಯಭಾರಿ ಹೆಚ್.ಇ. ಸೆಬಾಸ್ಟಿಯನ್ ಹಗ್, ಸ್ವಿಡ್ಜರ್ ಲ್ಯಾಂಡ್ ಮತಗ್ತು ಭಾರತ ನಡುವಿನ ವಾಣಿಜ್ಯ ಮತ್ತಷ್ಟು ಗಟ್ಟಿಗೊಳ್ಳುತ್ತಿದ್ದು ಪ್ರಮುಖವಾಗಿ ಕರ್ನಾಟಕದೊಂದಿಗೆ ಸ್ವಿಸ್ ವಾಣಿಜ್ಯ ಸಂಬಂಧ ವೃದ್ಧಿಗೆ ಒತ್ತು ನೀಡಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಫ್ರಾನ್ಸ್ ಕಾನ್ಸೂಲರ್, ಫ್ರಾನ್ಸ್ ವಿವಿಧ ವಿಶ್ವ ವಿದ್ಯಾಲಯಗಳಲ್ಲಿ ಭಾರತದ ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಮುಂದಿನ ಪೀಳಿಗೆ ಭಾರತ ಮತ್ತು ಫ್ರಾನ್ಸ್ ನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಇನ್ನು ಅಧ್ಯಕ್ಷೀಯ ಭಾಷಣ ಮಾಡಿದ ನಿವೃತ್ತ ವಿದೇಶಾಂಗ ಇಲಾಖೆ ಅಧಿಕಾರಿ, ದ.ಕೊರಿಯಾಗೆ ಭಾರತದ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಪಾರ್ಥಸಾರಥಿ, ಭಾರತ ವಿಶ್ವದ ಅತ್ಯಧಿಕ ಯುವಶಕ್ತಿ ಹೊಂದಿರುವ ರಾಷ್ಟ್ರವಾಗಿದ್ದು, ವಿವಿಧ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಸರ್ಕಾರಗಳು ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ದೇಶದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಎಫ್‌ಕೆಸಿಸಿಐ ಚುನಾಯಿತ ಅಧ್ಯಕ್ಷ ಸಿಆರ್ ಜನಾರ್ಧನ್ ಸ್ವಾಗತ ಭಾಷಣ ಮಾಡಿದರು. ರವಾಂಡಾ ಹೈಕಮಿಷನ್ ರಾಯಭಾರಿ ಹೆಚ್.ಇ ಮೋಹನ್ ಸುರೇಶ್ ವಂದನಾರ್ಪಣೆ ನೆರವೇರಿಸಿದರು. ಸಮಾರಂಭದಲ್ಲಿ ಎಫ್‌ಕೆಸಿಸಿಐ ಚುನಾಯಿತ ಉಪಾಧ್ಯಕ್ಷ ಪೆರಿಕಲ್ ಸುಂದರ್ ಸೇರಿದಂತೆ ಹಲವು ಗಣ್ಯರು ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು.