ಮಾನ್ಯತೆ ಇಲ್ಲದ ನಿಟ್ ಕಾಯಿನ್‌ಗಾಗಿ ಬೆಂಗಳೂರಲ್ಲಿ ಎಟಿಎಂ! ದೇಶದ ಮೊಟ್ಟ ಮೊದಲ ಬಿಟ್ ಕಾಯಿನ ಎಟಿಎಂ ತೆರೆಯುತ್ತಿರುವ ಯುನೊಕಾಯಿನ್! ಬಿಟ್ ಕಾಯಿನ್ ಮೇಲೆ ಹಣಕಾಸು ಪ್ರಾಧಿಕಾರದ ನಿಯಂತ್ರಣ ಇಲ್ಲ! ಎಟಿಎಂನಲ್ಲಿ ಕರೆನ್ಸಿಯನ್ನು ಠೇವಣಿ ಇರಿಸಿ ನಗದು ತೆಗೆದುಕೊಳ್ಳಬಹುದು

ಬೆಂಗಳೂರು(ಅ.20): ಬಿಟ್​ ಕಾಯಿನ್ ಒಳಗೊಂಡು ಎಲ್ಲ ರೀತಿಯ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲದಿದ್ದರೂ, ದೇಶದಲ್ಲಿ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಬಿಟ್​ ಕಾಯಿನ್ ಎಟಿಎಂ ತೆರೆಯುವುದಾಗಿ ಯುನೊಕಾಯಿನ್ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಕ್ರಿಪ್ಟೊ ಕರೆನ್ಸಿ ವಹಿವಾಟಿಗೆ ಕಾನೂನಿನ ಮಾನ್ಯತೆ ನೀಡದೆ ವಾಸ್ತವ ವ್ಯವಹಾರದ ಮೇಲೆ ನಿಷೇಧ ಹಾಕಿದೆ. ಈ ಮಧ್ಯೆ ದೇಶದಲ್ಲಿ ಮೊದಲ ಬಿಟ್​ ಕಾಯಿನ್ ಎಟಿಎಂ ತೆರೆಯಲಾಗುತ್ತಿದೆ. 

ಕರ್ನಾಟಕದ ಬೆಂಗಳೂರಿನಲ್ಲಿ ಮೊದಲ ಎಟಿಎಂ ಕ್ರಿಪ್ಟೊ ಕರೆನ್ಸಿ ಸೇವೆ ಲಭ್ಯವಾಗಲಿದ್ದು, ಗ್ರಾಹಕರು ಕಿಯೋಸ್ಕಿ​ ಎಟಿಎಂ ಮುಖಾಂತರ ಕರೆನ್ಸಿಯನ್ನು ಠೇವಣಿ ಇರಿಸಿ ಮತ್ತು ನಗದು ತೆಗೆದುಕೊಳ್ಳಬಹುದು ಎಂದು ಯುನೊಕಾಯಿನ್ ಸ್ಪಷ್ಟಪಡಿಸಿದೆ.

ವಿದೇಶಿ ವಿನಿಮಯ ಮತ್ತು ಹಣ ಪಾವತಿ ವ್ಯವಸ್ಥೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಗೆ ಬಿಟ್‌ ಕಾಯಿನ್ ವಹಿವಾಟು ಆಸ್ಪದವಾಗುತ್ತಿದೆ. ಬಿಟ್‌ ಕಾಯಿನ್‌ಗೆ ಯಾವುದೇ ಕೇಂದ್ರೀಯ ನಿಯಂತ್ರಣ ಅಥವಾ ಹಣಕಾಸು ಪ್ರಾಧಿಕಾರದ ನಿಯಂತ್ರಣ ಇಲ್ಲ. ಶಾಸನಾತ್ಮಕ ಅನುಮೋದನೆ, ನೋಂದಣಿಯಾಗಲಿ ಇಲ್ಲ.

ಎಟಿಎಂ ಹೀಗೆ ಕಾರ್ಯ ನಿರ್ವಹಿಸುತ್ತೆ?:

ಯುನೊಕಾಯಿನ್​, ಕಿಯೋಸ್ಕಿ ಮಾದರಿಯ ಎಟಿಎಂಗಳನ್ನು ದೆಹಲಿ ಮತ್ತು ಮುಂಬೈನಲ್ಲಿ ತೆರೆಯುವ ಯೋಜನೆ ಹಾಕಿಕೊಂಡಿದೆ. ಗ್ರಾಹಕರು ಎಟಿಎಂನಲ್ಲಿ ಕರೆನ್ಸಿಯನ್ನು ಠೇವಣಿ ಇರಿಸಿ ನಗದು ತೆಗೆದುಕೊಳ್ಳಬಹುದು. ಯಾವುದೇ ಬ್ಯಾಕ್​ಗಳ ಸೇವೆ ಇದರ ವ್ಯಾಪ್ತಿಗೆ ಒಳಪಡುವುದಿಲ್ಲ.

ಹೀಗಾಗಿ, ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​ಗಳು ಸೇವೆಗೆ ಪುರಸ್ಕೃತಗೊಳ್ಳುವುದಿಲ್ಲ. ಠೇವಣಿ ಮತ್ತು ನಗದು ಸ್ವೀಕಾರದ ಮಿತಿಯನ್ನು 1,000 ರೂ. ಗೆ ನಿಗದಿಪಡಿಸಿದ್ದು, 500 ರೂ. ಮುಖ ಬೆಲೆಯ ಎರಡು ನೋಟು ಬಳಕೆಯಲ್ಲಿರುತ್ತವೆ.

ಬಿಟ್ ಕಾಯಿನ್ ಅಂದ್ರೇನು?:

ಬಿಟ್‌ ಕಾಯಿನ್ ಎಂದರೆ ಕರೆನ್ಸಿಯ ಹಾಗೆ ಬಳಕೆಯಾಗುವ ಡಿಜಿಟಲ್ ಕರೆನ್ಸಿ ಅಥವಾ ಸಾಫ್ಟ್‌ವೇರ್. ಇಂಟರ್‌ನೆಟ್ ಮೂಲಕ ಇದರ ವರ್ಗಾವಣೆಗಳು ನಡೆಯುತ್ತದೆ. ಬಳಕೆದಾರರಿಗೆ ಪ್ರತ್ಯೇಕ ಪಾಸ್‌ವರ್ಡ್ ನೀಡಲಾಗುತ್ತದೆ. ಎಲೆಕ್ಟ್ರಾನಿಕ್ ವ್ಯಾಲೆಟ್‌ನಲ್ಲಿ ಇದನ್ನು ಸಂಗ್ರಹಿಸಿಡಬಹುದು. 

ಬಳಕೆದಾರರ ನಡುವೆ ಕೊಡು ಕೊಳ್ಳುವಿಕೆಯ ಮೂಲಕ ಬಿಟ್ ಕಾಯಿನ್ ಚಲಾವಣೆಯಲ್ಲಿದೆ. ಬಿಟ್‌ ಕಾಯಿನ್‌ನ ಮೌಲ್ಯವನ್ನು ನಿಮ್ಮ ಆಯ್ಕೆಯ ಕರೆನ್ಸಿಗಳಿಗೆ ಕೊನೆಯಲ್ಲಿ ಬದಲಾಯಿಸಿಕೊಳ್ಳಬಹುದು. ಈಗಾಗಲೇ ಬಿಟ್‌ ಕಾಯಿನ್ ಹೊಂದಿರುವವರ ಬಳಿಯಿಂದ ಇದನ್ನು ಖರೀದಿಸಬಹುದು. ಅಥವಾ ಬಿಟ್‌ ಕಾಯಿನ್ ಮೈನಿಂಗ್ ಎಂಬ ಪ್ರಕ್ರಿಯೆಯ ಮೂಲಕ ಇಂಟರ್‌ನೆಟ್‌ನಲ್ಲಿ ಸಂಪಾದಿಸಬಹುದು.