ಹಾಸನ(ಆ.14): ರಾಜ್ಯ ಸರ್ಕಾರ ಆರ್ಥಿಕ ಶಿಸ್ತು ಉಲ್ಲಂಘಿಸದೆ ರೈತರ ಸಾಲಮನ್ನಾ ಮಾಡಲು ಕ್ರಮ ಕೈಗೊಂಡಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಶೀಘ್ರದಲ್ಲೇ ಆದೇಶ ನೀಡುವುದಾಗಿ ಹೇಳಿದ ಸಿಎಂ, ಈ ಘೋಷಣೆಯಿಂದ ರಾಜ್ಯದ ಆರ್ಥಿಕ ಶಿಸ್ತಿನ ಮೇಲೆ ನಕಾರಾತ್ಮಕ ಪರಿಣಾಮ ಬೀರದು ಎಂದು ಸ್ಪಷ್ಟಪಡಿಸಿದರು.

ಹಣಕಾಸಿನ ಸ್ಥಿತಿಗತಿ ಬಗ್ಗೆ ತಾವು ಅಧ್ಯಯನ ನಡೆಸುತ್ತಿದ್ದು, ಮುಂದಿನ ವರ್ಷವೇ ಬ್ಯಾಂಕ್‌ಗಳಿಗೆ ಹಣ ನೀಡಲು ತಯಾರಿ ನಡೆಸಿದ್ದಾಗಿ ಸಿಎಂ ತಿಳಿಸಿದರು. ಇದೇ ವೇಳೆ ಸೋರಿಕೆ ತಡೆಗೆ ಕ್ರಮ ಕೈಗೊಂಡಿದ್ದು, ರಾಜ್ಯದ ಆದಾಯ ಹೆಚ್ಚಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ತಾವು ಸಿಎಂ ಆಗಿ ಅಧಿಕಾರವಹಿಸಿಕೊಂಡ ಮೇಲೆ ರಾಜ್ಯದ ಆರ್ಥಿಕ ಬೆಳವಣಿಗೆ ಶೇ.32.7ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಸಂಗ್ರಹ ಕೂಡ ಹೆಚ್ಚಾಗಿದೆ ಎಂದು ಸಿಎಂ ತಿಳಿಸಿದರು.

ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿಯನ್ನು ಪರಿಚಯಿಸುವುದಕ್ಕೆ ಅಜಿಮ್ ಪ್ರೇಮ್ ಜಿ ನೇತೃತ್ವದ ಅಜಿಮ್ ಪೌಂಡೇಷನ್ ಒಪ್ಪಿಕೊಂಡಿದೆ. ಆಂಧ್ರದಲ್ಲಿ ಆರು ಲಕ್ಷ ರೈತರು ಈ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಸಿಎಂ ತಿಳಿಸಿದರು.