ಕೇವಲ 59 ನಿಮಿಷದಲ್ಲಿ ಬಜೆಟ್‌ ಓದಿ ಮುಗಿಸಿದ ಸಚಿವೆ : ಸೂಟ್‌ಕೇಸ್‌ನಿಂದ ಟ್ಯಾಬ್ಲೆಟ್‌ವರೆಗೆ ಬದಲಾದ ಬಜೆಟ್ ಪ್ರತಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ ಬಜೆಟ್ ಅನ್ನು ಮೇಕ್ ಇನ್ ಇಂಡಿಯಾದಡಿ ಉತ್ಪಾದಿಸಲಾದ ಟ್ಯಾಬ್ಲೆಟ್‌ನಲ್ಲಿ ತಂದು ಸದನದಲ್ಲಿ ಮಂಡಿಸಿದರು. ಹಾಲಿ ಟ್ಯಾಬ್ಲೆಟ್ ರೂಪಕ್ಕೆ ಬಂದಿರುವ ಈ ಬಜೆಟ್ ಪುಸ್ತಕ ಕಳೆದ ಹಲವು ದಶಕಗಳಲ್ಲಿ ನಾನಾ ಬದಲಾವಣೆ ಕಂಡಿದೆ ಎಂಬುದು ವಿಶೇಷ.

Finance Minister read Union budget within 59 minutes, budget copy transformed from suitcase to tablet akb

ನವದೆಹಲಿ:  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಮ್ಮ ಬಜೆಟ್ ಅನ್ನು ಮೇಕ್ ಇನ್ ಇಂಡಿಯಾದಡಿ ಉತ್ಪಾದಿಸಲಾದ ಟ್ಯಾಬ್ಲೆಟ್‌ನಲ್ಲಿ ತಂದು ಸದನದಲ್ಲಿ ಮಂಡಿಸಿದರು. ಹಾಲಿ ಟ್ಯಾಬ್ಲೆಟ್ ರೂಪಕ್ಕೆ ಬಂದಿರುವ ಈ ಬಜೆಟ್ ಪುಸ್ತಕ ಕಳೆದ ಹಲವು ದಶಕಗಳಲ್ಲಿ ನಾನಾ ಬದಲಾವಣೆ ಕಂಡಿದೆ ಎಂಬುದು ವಿಶೇಷ. ದೇಶದ ಮೊದಲ ಬಜೆಟ್ ಮಂಡಿಸಿದ್ದ, ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವ ಆರ್. ಕೆ. ಷಣ್ಮಖಂಚೆಟ್ಟಿ ಅವರು ಬೀಫ್ ಕೇಸ್‌ನಲ್ಲಿ ಬಜೆಟ್ ಪ್ರತಿಗಳನ್ನು ಇಟ್ಟುಕೊಂಡು ಸಂಸತ್‌ಗೆ ಆಗಮಿಸಿ ಮೊದಲ ಬಜೆಟ್ ಮಂಡಿಸಿದ್ದರು. ಇದು ಬ್ರಿಟಿಷರ ಸಂಪ್ರದಾಯದ ಮುಂದುವರೆದ ಭಾಗವಾಗಿತ್ತು. ಇನ್ನು 2019ರಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಚರ್ಮದ ಬ್ಯಾಗ್ ಬದಲು ಭಾರತೀಯರ ಜೀವನದಲ್ಲಿ ಲೆಕ್ಕಪತ್ರಗಳಿಗೆ ಹೆಸರಾದ ಬಹಿ ಖಾತಾ (ಲೆಕ್ಚರ್) ರೀತಿಯ ಬ್ಯಾಗ್ ಅನ್ನು ತರುವ ಮೂಲಕ ದಶಕಗಳ ಸಂಪ್ರದಾಯಕ್ಕೆ ತೆರೆ ಎಳೆದರು. ಜೊತೆಗೆ ಬಜೆಟ್ ಪುಸ್ತಕಕ್ಕೆ ದೇಶಿ ಸೊಗಡು ನೀಡಿದರು.

2021ರಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋದ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿ ಹೊತ್ತು ತರುವ ಬದಲು ಮೇಕ್  ಇನ್‌ ಇಂಡಿಯಾ ಯೋಜನೆಯಡಿ ನಿರ್ಮಿತ ಟ್ಯಾಬ್ಲೆಟ್ ಅನ್ನು ಕೆಂಪು ಬಣ್ಣದ ಕವರ್‌ನೊಳಗೆ ಇಟ್ಟು ತರುವ ಮೂಲಕ ಇನ್ನೊಂದು ಸಂಪ್ರದಾಯ ಆರಂಭಿಸಿದರು. ಈ ವರ್ಷವೂ ಅವರು ಅದೇ ಸಂಪ್ರದಾಯ ಮುಂದುವರೆಸಿ ಗಮನ ಸೆಳೆದರು.

59 ನಿಮಿಷ 18 ಸೆಕೆಂಡ್‌ಗಳಲ್ಲಿ ಬಜೆಟ್ ಭಾಷಣ ಪೂರ್ಣ

2024-25 ಆರ್ಥಿಕ ವರ್ಷದ ‘ಮಧ್ಯಂತರ ಬಜೆಟ್‌’ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಮಂಡಿಸಿದರು. ಸತತ 6ನೇ ಬಾರಿ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌ ಅವರು ಕೇವಲ 59 ನಿಮಿಷ 18 ಸೆಕೆಂಡ್‌ಗಳಲ್ಲಿ ತಮ್ಮ ಬಜೆಟ್‌ ಭಾಷಣವನ್ನು ಮುಗಿಸಿದರು.

ಚುನಾವಣೆ ಪೂರ್ವದಲ್ಲಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಘೋಷಿಸಬಹುದು ಎನ್ನಲಾಗಿತ್ತಾದರೂ ಜನರನ್ನು ಸೆಳೆಯುವ ಯಾವುದೇ ಆಕರ್ಷಕ ಯೋಜನೆಗಳ ಘೋಷಣೆ ಇಲ್ಲದೇ ಬಜೆಟ್‌ ಮಂಡಿಸಲಾಯಿತು. ಸುಮಾರು ಒಂದು ಗಂಟೆಗಳ ಕಾಲದ ಬಜೆಟ್‌ ಭಾಷಣದ ಸಮಯದಲ್ಲಿ ನಿರ್ಮಲಾ ಅವರು ಕೇಂದ್ರ ಸರ್ಕಾರ ಕಳೆದ 10 ವರ್ಷಗಳ ಸಾಧನೆಗಳನ್ನು ವಿವರಿಸಿದರು. ಪ್ರವಾಸೋದ್ಯಮ, ವಸತಿ ಸೌಕರ್ಯ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದರು.

ಸರ್ಕಾರದ ದೂರದೃಷ್ಟಿ ಬಗ್ಗೆ ಮಾಹಿತಿ:

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 3ನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸರ್ಕಾರದ ಆದ್ಯತೆಗಳೇನು ಎಂಬುದರ ಮುನ್ನೋಟವನ್ನು ಬಜೆಟ್‌ ಭಾಷಣದಲ್ಲಿ ನಿರ್ಮಲಾ ಅವರು, ಅಭಿವೃದ್ಧಿಯನ್ನು ಉತ್ತೇಜಿಸುವ, ಅಂತರ್ಗತವಾದ ಅಭಿವೃದ್ಧಿಗೆ ಅನುಕೂಲವಾಗುವಂತಹ ಮತ್ತು ಶಕ್ತಿ ಸಂಪನ್ಮೂಲಗಳ ಉತ್ಪಾದನೆಗೆ ಕೊಡುಗೆ ನೀಡುವ ಆರ್ಥಿಕ ನೀತಿಗಳನ್ನು ಅಳವಡಿಸಿಕೊಳ್ಳಲಾಗುವುದು. ಈ ಮೂಲಕ 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರ ಎಂಬ ತತ್ವಗಳಿಂದ ಮಾರ್ಗದರ್ಶನ ಪಡೆದಿರುವ ಸರ್ಕಾರವು ಮುಂದಿನ ಪೀಳಿಗೆ ಸುಧಾರಣೆಗಳನ್ನು ಕೈಗೊಳ್ಳುತ್ತದೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತದೆ ಎಂದು ಅವರು ಹೇಳಿದರು.

ಹಲವು ಸಬ್ಸಿಡಿಗಳ ಕಡಿತ:

ಈ ಬಾರಿಯ ಬಜೆಟ್‌ನಲ್ಲಿ ಆಹಾರ, ರಸಗೊಬ್ಬರ ಮತ್ತು ಇಂಧನದ ಮೇಲಿನ ಸಹಾಯಧನವನ್ನು ಕಡಿತ ಮಾಡುವ ಘೋಷಣೆ ಮಾಡಲಾಗಿದೆ. ಆದರೆ ಈ ಹಿಂದೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ನೀಡುತ್ತಿದ್ದ ಸಹಾಯಧನವನ್ನು ಮುಂದುವರೆಸಲಾಗುತ್ತದೆ. ಅಲ್ಲದೇ ರಸ್ತೆ, ಬಂದರು ಮತ್ತು ವಿಮಾನ ನಿಲ್ದಾಣಗಳಂತಹ ಸೌಕರ್ಯಗಳನ್ನು ನಿರ್ಮಾಣ ಮಾಡಲು 11.1 ಲಕ್ಷ ಕೋಟಿ ರು. ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.11ರಷ್ಟು ಅಧಿಕವಾಗಿದೆ. ಇದು ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.

ಇದಲ್ಲದೇ ಮುಂದಿನ 5 ವರ್ಷಗಳಲ್ಲಿ ಸರ್ಕಾರ 2 ಕೋಟಿ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಲಿದೆ. 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯುನಿಟ್‌ ಉಚಿತ ವಿದ್ಯುತ್‌ ಒದಗಿಸಲಾಗುತ್ತದೆ. ಅಲ್ಲದೇ ಭದ್ರತಾ ವಲಯವನ್ನು ಸುಭದ್ರಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios