ಕೇಂದ್ರ ಸರ್ಕಾರ ಮತ್ತು ಆರ್ ಬಿಐ ನಡುವಿನ ತಿಕ್ಕಾಟ ಜೋರು! ಆರ್‌ಬಿಐ ನೀತಿಯನ್ನು ಟೀಕಿಸಿದ ಕೇಂದ್ರ ವಿತ್ತ ಸಚಿವ ಜೇಟ್ಲಿ! ಹೆಚ್ಚುವರಿ ಸಾಲ ನೀಡುವಿಕೆ ತಡೆಗಟ್ಟುವಲ್ಲಿ ಆರ್‌ಬಿಐ ವಿಫಲ! ಆರ್‌ಬಿಐ ಉಪ ಗರ್ವನರ್ ಬಂಡಾಯಕ್ಕೆ ಜೇಟ್ಲಿ ತಿರುಗೇಟು! ಆರ್‌ಬಿಐ ಅಧಿಕಾರವನ್ನು ಕೇಂದ್ರ ಕಸಿಯುತ್ತಿದೆ ಎಂದಿದ್ದ ವಿರಾಲ್ ಆಚಾರ್ಯ

ನವದೆಹಲಿ(ಅ30): ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಕಿತ್ತಾಟ ಮತ್ತಷ್ಟು ವೇಗ ಪಡೆದುಕೊಂಡಿದೆ. ರಿಸರ್ವ್ ಬ್ಯಾಂಕ್ ಮೇಲೆ ಈ ಬಾರಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹರಿಹಾಯ್ದಿದ್ದು, ಹೆಚ್ಚುವರಿ ಸಾಲ ನೀಡುವಿಕೆಯನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

2008ರಿಂದ 2014ರವರೆಗೆ ವಿವೇಚನೆಯಿಲ್ಲದೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ನೀಡುವಾಗ, ರಿಸರ್ವ್ ಬ್ಯಾಂಕ್ ಅದಕ್ಕೆ ತಡೆಯೊಡ್ಡಲಿಲ್ಲ ಎಂದು ಜೇಟ್ಲಿ ಗುಡುಗಿದ್ದಾರೆ.

ಆರ್‌ಬಿಐ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವುದು ಸಂಭಾವ್ಯ ದುರಂತ ಎಂದು ಇತ್ತೀಚಿಗಷ್ಟೇ ಉಪ ಗವರ್ನರ್ ವಿರಾಲ್ ಆಚಾರ್ಯ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಇದರಿಂದ ಆರ್‌ಬಿಐ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ.

ತನ್ನ ನೀತಿಯನ್ನು ಸಡಿಲಗೊಳಿಸಿ ತನ್ನ ಅಧಿಕಾರವನ್ನು ಕುಂಠಿತಗೊಳಿಸುವ ಕೇಂದ್ರ ಸರ್ಕಾರದ ಒತ್ತಡಕ್ಕೆ ಆರ್‌ಬಿಐಯ ವಿರೋಧವಿದೆ ಎಂಬರ್ಥದಲ್ಲಿ ವಿರಾಲ್ ಆಚಾರ್ಯ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.