ರೈತರಿಗೆ ನೋಟ್ ಬ್ಯಾನ್ ಸಂಕಷ್ಟ: ಮೋದಿ ಸರ್ಕಾರದ ಸಚಿವಾಲಯ!
ನೋಟು ನಿಷೇಧದಿಂದ ರೈತರಿಗೆ ಭಾರೀ ಸಂಕಷ್ಟ ಎಂದ ಕೃಷಿ ಸಚಿವಾಲಯ! ನೋಟು ನಿಷೇಧದ ವೇಳೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಪರದಾಡಿದ ರೈತ! ಮೋದಿ ಸರ್ಕಾರಕ್ಕೆ ಮುಜುಗರ ತಂದಿತ್ತ ಕೃಷಿ ಸಚಿವಾಲಯದ ವರದಿ! ಖಾರಿಫ್ ಬೆಳೆಯ ಮಾರಾಟದ ವೇಳೆಯೇ ನೋಟು ನಿಷೇಧ ಮಾಡಿದ್ದು ಸರಿಯಲ್ಲ! ರಾಷ್ಟ್ರೀಯ ಬೀಜ ನಿಗಮದ ಮೇಲೂ ನೋಟು ನಿಷೇಧದ ದುಷ್ಪರಿಣಾಮ
ನವದೆಹಲಿ(ನ.21): ನೋಟು ನಿಷೇಧದಿಂದ ರೈತರಿಗೆ ಭಾರಿ ನಷ್ಟವಾಗಿದೆ ಎಂದು ಸ್ವತಃ ಕೇಂದ್ರ ಕೃಷಿ ಸಚಿವಾಲಯ ಹೇಳುವ ಮೂಲಕ ಅಚ್ಚರಿ ಮೂಡಿಸಿದೆ.
ಸಚಿವಾಲಯದ ವರದಿಯೊಂದರ ಅನ್ವಯ ನೋಟು ನಿಷೇಧದಿಂದಾಗಿ ಲಕ್ಷಾಂತರ ರೈತರಿಗೆ ಚಳಿಗಾಲದ ಬೆಳೆಗೆ ಬಿತ್ತನೆಯ ಬೀಜ ಹಾಗೂ ಗೊಬ್ಬರಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಇದರಿಂದ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.
ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಕೇಂದ್ರ ಕೃಷಿ ಸಚಿವಾಲಯ ಈ ವರದಿ ನೀಡಿದ್ದು, ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ನೋಟು ನಿಷೇಧದಿಂದಾಗಿರುವ ಪರಿಣಾಮದ ಬಗ್ಗೆ ಕೃಷಿ ಸಚಿವಾಲಯ, ಕಾರ್ಮಿಕ ಹಾಗೂ ಉದ್ಯೋಗ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ವಿವರ ನೀಡಿವೆ.
ರೈತ ಅನುಭವಿಸಿದ ಸಂಕಟ ಏನು?:
ಕೃಷಿ ಸಚಿವಾಲಯ ಸಲ್ಲಿಸಿರುವ ವರದಿಯಲ್ಲಿ, ರೈತರು ಖಾರಿಫ್ ಬೆಳೆಯ ಫಸಲನ್ನು ಮಾರಾಟ ಮಾಡುವಾಗ ಅಥವಾ ರಾಬಿಬೆಳೆ ಬಿತ್ತನೆಯ ವೇಳೆ ನೋಟು ನಿಷೇಧ ಮಾಡಲಾಗಿದೆ. ಈ ಎರಡು ಚಟುವಟಿಕೆಯ ವೇಳೆ ದೊಡ್ಡ ಪ್ರಮಾಣದ ನಗದು ಹಣದ ಅಗತ್ಯವಿರುತ್ತದೆ. ಭಾರತ 2.63 ಲಕ್ಷ ರೈತರು ನಗದು ವ್ಯವಹಾರವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ನೋಟು ನಿಷೇಧ ಪ್ರಕ್ರಿಯೆಯಿಂದಾಗಿ ರೈತರ ವಹಿವಾಟಿಗೆ ಹಿನ್ನಡೆಯುಂಟು ಮಾಡಿತ್ತು ಎಂದು ವರದಿ ತಿಳಿಸಿದೆ.
ಅಂತೆಯೇ ಲಕ್ಷಾಂತರ ರೈತರು ಚಳಿಗಾಲದ ಬೆಳೆಗೆ ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ಖರೀದಿಸಲು ಸಾಕಷ್ಟು ನಗದು ಹಣ ಹೊಂದಿರಲಿಲ್ಲ. ದೊಡ್ಡ ಜಮೀನ್ದಾರರು ತಮ್ಮ ಕೆಲಸದಾಳುಗಳಿಗೆ ದಿನಗೂಲಿ ನೀಡಲು ಹಾಗೂ ಬೆಳೆಯುತ್ತಿರುವ ಬೆಳೆಗೆ ಅಗತ್ಯವಿರುವ ಕೃಷಿ ವಸ್ತುಗಳನ್ನು ಖರೀದಿಸಲು ಸಮಸ್ಯೆ ಎದುರಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಬೀಜ ನಿಗಮ ನಗದು ಬಿಕ್ಕಟ್ಟಿನಿಂದಾಗಿ ಸುಮಾರು 1.38 ಲಕ್ಷ ಕ್ವಿಂಟಲ್ ಗೋಧಿ ಬೀಜಗಳನ್ನು ಮಾರಾಟ ಮಾಡಲು ವಿಫಲವಾಗಿತ್ತು. ಗೋಧಿ ಬೀಜಗಳ ಮಾರಾಟಕ್ಕೆ ಹಳೆಯ 500 ಹಾಗೂ 1000 ನೋಟುಗಳನ್ನು ಬಳಸಲು ಸರ್ಕಾರ ಅನುಮತಿ ನೀಡಿದರೂ ಬೀಜ ಮಾರಾಟದಲ್ಲಿ ಏರಿಕೆಯಾಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.