ಎದುರಾಳಿ ಕಂಪನಿಗೆ ತನ್ನ ಮತ್ತೊಂದು ಅನುಭವಿ ಉದ್ಯೋಗಿಯನ್ನು ಕಳೆದುಕೊಂಡ ಇನ್ಫೋಸಿಸ್!
ಇನ್ಫೋಸಿಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಇವಿಪಿ) ಮತ್ತು ಭಾರತ ಮತ್ತು ಜಪಾನ್ ವ್ಯಾಪಾರ ಘಟಕಗಳ ಮುಖ್ಯಸ್ಥರಾಗಿದ್ದ ರಾಜೀವ್ ರಂಜನ್ ಕಂಪನಿಯನ್ನು ತೊರೆದು ಅಮೆರಿಕ ಮೂಲದ ಎಂಜಿನಿಯರಿಂಗ್ ಸಂಸ್ಥೆ ನೆಸ್ ಡಿಜಿಟಲ್ ಇಂಜಿನಿಯರಿಂಗ್ ಅನ್ನು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಒಒ) ಸೇರಿದ್ದಾರೆ.
ಬೆಂಗಳೂರು (ನ.4): ಒಂದೆಡೆ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ದೇಶದ ಯುವ ಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು ಎಂದು ಹೇಳಿದ್ದರೆ, ಇನ್ನೊಂದೆಡೆ ಇನ್ಫೋಸಿಸ್ ಕಂಪನಿ ತನ್ನ ಹಿರಿಯ ಹಾಗೂ ಅನುಭವಿ ಉದ್ಯೋಗಿಗಳನ್ನು ಎದುರಾಳಿ ಕಂಪನಿಗಳಿಗೆ ಕಳೆದುಕೊಳ್ಳುತ್ತಿದೆ. ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ಸರ್ವೀಸ್ ರಫ್ತುದಾರ ಕಂಪನಿಯಾಗಿರುವ ಇನ್ಫೋಸಿಸ್ ಸಂಸ್ಥೆಯನ್ನು ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಇವಿಪಿ) ರಾಜೀವ್ ರಂಜನ್ ತೊರೆದಿದ್ದಾರೆ. ಅಂದಾಜು 24 ವರ್ಷಗಳ ಕಾಲ ಅವರು ಇನ್ಫೋಸಿಸ್‌ನಲ್ಲಿ ಕೆಲಸ ಮಾಡಿದ್ದರು. ಕಂಪನಿಯಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಇವಿಪಿ) ಆಗಿದ್ದ ರಾಜೀವ್ ರಂಜನ್, ಭಾರತ ಹಾಗೂ ಜಪಾನ್ ವಾಣಿಜ್ಯ ಯುನಿಟ್‌ನ ಸರ್ವೀಸ್ ಆಫರಿಂಗ್ ಹೆಡ್ ಆಗಿ ಕೆಲಸ ಮಾಡಿದ್ದರು. ಈಗ ಅವರು ಅಮೆರಿಕ ಮೂಲಕ ಇಂಜಿನಿಯರಿಂಗ್ ಕಂಪನಿ ನೆಸ್ ಡಿಜಿಟಲ್ ಇಂಜಿನಿಯರಿಂಗ್‌ಗೆ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಅವರು ಸೇರಿಕೊಂಡಿದ್ದಾರೆ.
ಟಾಟಾ ಮೋಟಾರ್ಸ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ನೆಕ್ಸ್‌ಜೆನ್ ಇನ್ಫರ್ಮೇಷನ್ ಸೊಲ್ಯೂಷನ್ಸ್ (ನೆಕ್ಸ್‌ಜೆನಿಕ್ಸ್) ನಲ್ಲಿ ಒಂದು ವರ್ಷದ ಅವಧಿಯ ನಂತರ, ರಂಜನ್ ಅವರು ಆಗಸ್ಟ್ 1999 ರಲ್ಲಿ ಇನ್ಫೋಸಿಸ್‌ಗೆ ಸೇರಿದರು ಮತ್ತು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಡ್ತಿ ಪಡೆಯುವ ಮೊದಲುಇವಿಪಿ ಹಿರಿಯ ಉಪಾಧ್ಯಕ್ಷರಾಗಿದ್ದರು. ಇನ್ಫೋಸಿಸ್ ಆಗಲಿ ನೆಸ್ ಆಗಲಿ ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿಲ್ಲ.
ರಂಜನ್ ಅವರು ಆಗಸ್ಟ್‌ನಲ್ಲಿ ನಿರ್ಗಮಿಸಿದರೂ, ಅವರ ನಿರ್ಗಮನವು ಕಳೆದ 12 ತಿಂಗಳುಗಳಲ್ಲಿ ಕನಿಷ್ಠ ಎಂಟು ಹಿರಿಯ ನಿರ್ವಹಣಾ ಸಿಬ್ಬಂದಿಯನ್ನು ಕಳೆದುಕೊಂಡಿರುವ ಇನ್ಫೋಸಿಸ್‌ನಲ್ಲಿನ ಹಿರಿಯ ಮ್ಯಾನೇಜ್‌ಮೆಂಟ್ ರಾಜೀನಾಮೆಯ ಸರಣಿಯನ್ನು ಮುಂದುವರಿಸಿದೆ. ಆಗಸ್ಟ್‌ನಲ್ಲಿ, ಬೆಂಗಳೂರು ಮೂಲದ ಕಂಪನಿಯು ತನ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಿಚರ್ಡ್ ಲೋಬೋ ಅವರನ್ನು ಕಳೆದುಕೊಂಡಿತ್ತು. 23 ವರ್ಷಗಳ ಕಾಲ ಅವರು ಇಲ್ಲಿ ಕೆಲಸ ಮಾಡಿದ್ದರು. ಈ ವರ್ಷದ ಆರಂಭದಲ್ಲಿ, ಇನ್ಫೋಸಿಸ್‌ನ ಅಧ್ಯಕ್ಷರಾದ ಮೋಹಿತ್ ಜೋಶಿ ಮತ್ತು ರವಿ ಕುಮಾರ್ ಎಸ್ ಅವರನ್ನು ಟೆಕ್ ಮಹೀಂದ್ರಾ ಮತ್ತು ಕಾಗ್ನಿಜೆಂಟ್ ತಮ್ಮ ಸಿಇಒಗಳಾಗಿ ನೇಮಿಸಿಕೊಂಡಿತು.
ಹಾಗಂತ ಅನುಭವಿ ಉದ್ಯೋಗಿಗಳನ್ನು ಕಳೆದುಕೊಂಡಿರುವ ಸಂಸ್ಥೆ ಇನ್ಫೋಸಿಸ್ ಒಂದೇ ಅಲ್ಲ. ವಿಪ್ರೋ ಕೂಡ ಇಂಥ ಸ್ಥಿತಿಯನ್ನು ಎದುರಿಸಿದೆ. ವಿಪ್ರೋದ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಲ್ ಸೇರಿದಂತೆ ಇನ್ನೂ ಕೆಲವರು ಕಾಗ್ನಿಜೆಂಟ್ ಅನ್ನು ಸೇರಿಸಿದ್ದರು. ಭಾರತದ ಅತಿದೊಡ್ಡ ಭಾರತೀಯ ಐಟಿ ಸಂಸ್ಥೆಯಾಗಿರುವ ಟಿಸಿಎಸ್‌ನಲ್ಲಿ 22 ವರ್ಷಗಳ ವೃತ್ತಿಜೀವನ ಕಂಡಿದ್ದ ಸಿಇಒ ರಾಜೇಶ್ ಗೋಪಿನಾಥನ್ ಕೂಡ ಈ ವರ್ಷದ ಮಾರ್ಚ್‌ನಲ್ಲಿ ಕಂಪನಿ ತೊರೆದಿದ್ದರು.
ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿದೆ: ಇನ್ಫೋಸಿಸ್ ನಾರಾಯಣ ಮೂರ್ತಿ!
"ಇನ್ಫೋಸಿಸ್‌ಗೆ ಇದು ದೊಡ್ಡ ಸಮಸ್ಯೆಯಾಗಿ ನಾನು ಕಾಣುತ್ತಿಲ್ಲ ಏಕೆಂದರೆ ಕಂಪನಿಯು ಬದಲಾವಣೆಗಳನ್ನು ಒಗ್ಗಿಕೊಳ್ಳಲು ಸಾಕಷ್ಟು ಬ್ಯಾಂಡ್‌ವಿಡ್ತ್ ಅನ್ನು ಹೊಂದಿದೆ. ಅವರು ಈಗಾಗಲೇ ಹಿರಿಯ ಮಟ್ಟದ ನಿರ್ಗಮನಗಳನ್ನು ತಡೆದುಕೊಳ್ಳಲು ಹಲವು ವರ್ಷಗಳಿಂದ ನಿರ್ಮಿಸಲಾದ ತಂಡವನ್ನು ಹೊಂದಿದದೆ. ಇದು ಕಂಪನಿಯ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ಶೇರ್ಖಾನ್‌ನ ಸಂಶೋಧನಾ ಮುಖ್ಯಸ್ಥ ಸಂಜೀವ್ ಹೋಟಾ ತಿಳಿಸಿದ್ದಾರೆ.
ವಾರಕ್ಕೆ 70 ಗಂಟೆ ಕೆಲಸಕ್ಕೆ ಬೆಂಬಲ; ಪ್ರಧಾನಿ ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ ಎಂದ ಸಜ್ಜನ್ ಜಿಂದಾಲ್!