Asianet Suvarna News Asianet Suvarna News

6ರಿಂದ 8 ದಶಕದಲ್ಲಿ ಸರ್ವವೂ ಡಿಜಿಟಲ್‌ಮಯ: ಅರ್ಧ ಶತಮಾನದಲ್ಲಾಗಬೇಕಿದ್ದನ್ನ ಅರ್ಧ ದಶಕಕ್ಕಿಳಿಸಿದ ಮೋದಿ

ಮೋದಿಜಿಯಂಥ ಸಮರ್ಥ ನಾಯಕನಿದ್ದರೆ ಅರ್ಧ ಶತಮಾನವನ್ನೇ ಎಗರಿಸಿ ನಮ್ಮ ಬುಟ್ಟಿಗೆ ಹಾಕಿಕೊಂಡು ಬಿಡಬಹುದು ಎನ್ನಲು ಕಳೆದ ಒಂಭತ್ತು ವರ್ಷಗಳೇ ಸಾಕ್ಷಿ.

Everything is digital in 6 to 8 decades Modi reduced half a century to half a decade Girvani MH writeup akb
Author
First Published Oct 11, 2023, 10:45 AM IST

ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಎನ್ನುವ ಹೊಸ ಪದದ ಬಗ್ಗೆ ನಿಮಗೆ ಗೊತ್ತಾ? ಗೊತ್ತಿಲ್ಲದೆ ಇರಬಹುದು. ಆದರೆ ನಾವೆಲ್ಲ ಅದನ್ನು ಬಳಸುತ್ತಿದ್ದೇವೆ. ‘ಮೋದಿ ಏನ್ ಮಾಡಿದಾರೆ?’ ಎಂದು ಕೇಳುವ ಜನರಿಗೆ ಈ ವಿಷಯವನ್ನು ಹೇಳಲೇಬೇಕು. ಮೋದಿ ಅವರು 50 ವರ್ಷಗಳಲ್ಲಿ ಮಾಡಬಹುದಾದ ಒಂದು ಕೆಲಸವನ್ನು ಕೇವಲ 6 ವರ್ಷದಲ್ಲಿ ಮಾಡಿ ಮುಗಿಸಿದ್ದಾರೆ ಎಂದು ವಿಶ್ವಬ್ಯಾಂಕ್‌ ಅಭಿನಂದಿಸಿದೆ. ಜೊತೆಗೆ ಅಚ್ಚರಿಯನ್ನು ಕೂಡ ವ್ಯಕ್ತಪಡಿಸಿದೆ.

ನಮ್ಮೆಲ್ಲರ ಜೀವನ ಕಳೆದ ಆರೆಂಟು ವರ್ಷಗಳಲ್ಲಿ ಡಿಜಿಟಲೀಕರಣದಿಂದಾಗಿ ಅದೆಷ್ಟು ಬದಲಾಗಿದೆ ಅಂದರೆ ಮತ್ತೆ ಹತ್ತು ವರ್ಷ ಹಿಂದಕ್ಕೆ ವಾಪಸ್ ಹೋಗಿ ಬದುಕಿ ಅಂದರೆ ನಮ್ಮಗಳ ಪೈಕಿ ಯಾರ ಕೈಯಲ್ಲೂ ಆಗಲಿಕ್ಕಿಲ್ಲ. ಅಷ್ಟು ಅನುಕೂಲವಾಗಿದೆ ನಮ್ಮೆಲ್ಲರ ಜೀವನ. ಅದಕೆ ಮುಖ್ಯವಾದ ಕಾರಣ- ನಮ್ಮ ಕೈಯಲ್ಲಿರುವ ಮೊಬೈಲ್. ಕೇವಲ ಮೊಬೈಲ್ ಇದ್ದರೆ ಆಗಲ್ಲ. ಸೂಕ್ತ ಆ್ಯಪ್‌ಗಳು (Apps), ಇಂಟರ್ನೆಟ್ ಸೌಕರ್ಯಗಳು, ನೆಟ್‌ವರ್ಕಿಂಗ್, ಸರ್ಕಾರದ ಪ್ರೋತ್ಸಾಹ ಎಲ್ಲವೂ ಬೇಕು.

ಸರ್ವವೂ ಡಿಜಿಟಲ್‌ಮಯ

ಭಾರತೀಯರು ಈಗ ಯುಪಿಐ ಬಳಸುತ್ತಿದ್ದಾರೆ. ಜನಧನ್ ಖಾತೆ (Jandhan Account) ತೆರೆದಿದ್ದಾರೆ. ಡಿಜಿ ಲಾಕರ್ (DG Locker) ಹೊಂದಿದ್ದಾರೆ. ಕೋವಿನ್ ಆ್ಯಪ್ (Covin App) ಬಳಸಿ ವ್ಯಾಕ್ಸಿನ್ ಪಡೆದಾಗಿದೆ, ಆಧಾರ್ ಕಾರ್ಡ್ ಎಲ್ಲರ ಬಳಿ ಇದೆ. ಇದೆಲ್ಲದರ ಜೊತೆಗೆ ಭಾರತ ಸರ್ಕಾರದ ಅನೇಕ ಸೇವೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕವೇ ಪಡೆಯುತ್ತಿದ್ದಾರೆ. ಗ್ಯಾಸ್ ಬುಕ್ ಮಾಡುವುದರಿಂದ ಹಿಡಿದು, ಪಾಸ್ ಪೋರ್ಟ್ ಸೇವೆಯವರೆಗೆ ಸರ್ವವೂ ಡಿಜಿಟಲ್‌ಮಯ! ರೈತರಿಗೆ ಹವಾಮಾನ ಮಾಹಿತಿಯಿಂದ ಹಿಡಿದು ಬೆಳೆಯ ಸಬ್ಸಿಡಿ, ಜಮೀನಿನ‌ ನಕ್ಷೆಗಳು ಇವತ್ತು ಮೊಬೈಲ್‌ನಲ್ಲೇ ಲಭ್ಯ. ಏರ್‌ಪೋರ್ಟ್‌ಗೆ ಹೋಗಿ ಮೊದಲಿನಂತೆ ಕ್ಯೂನಲ್ಲಿ ನಿಂತು ಚೆಕ್ ಇನ್ ಆಗುವ ಆಗತ್ಯವೇ ಇಲ್ಲ. ನಿಮ್ಮ ಬಳಿ ಡಿಜಿ ಲಾಕರ್ ಇದ್ದರೆ ಸಾಕು. ಹೀಗೆ ರೈತರು, ಅನಕ್ಷರಸ್ಥ ಹೂ ಮಾರುವವಳಿಂದ ಹಿಡಿದು, ವಿಮಾನದಲ್ಲಿ ಬಿಸಿನೆಸ್ ಟೂರ್ ಮಾಡುವವರೆಗೆ ಎಲ್ಲರಿಗೂ ಲಭ್ಯವಿದೆ ಡಿಜಿಟಲ್ ಸೇವೆ. (Digital service) ವಿಶ್ವ ಬ್ಯಾಂಕ್‌ ಹೇಳಿರುವುದು ಇದನ್ನೇ. 50 ವರ್ಷದಲ್ಲಿ ಒಂದು ದೇಶ ಸಾಧಿಸಬಹುದಾದದ್ದನ್ನು ಮೋದಿ ಸರ್ಕಾರ ಕೇವಲ ಆರೇ ವರ್ಷದಲ್ಲಿ ಮಾಡಿದೆ ಎಂದು.

ಅರ್ಧ ಶತಮಾನ ಅರ್ಧ ದಶಕಕ್ಕೆ

ಇದು ಸಾಮಾನ್ಯ ಮಾತೇ ಅಲ್ಲ. 140 ಕೋಟಿ ಜನಸಂಖ್ಯೆ ಇರುವ ದೇಶವನ್ನು ಹೊಸ ಬದಲಾವಣೆಗೆ ಅಣಿಗೊಳಿಸುವುದು ಸಣ್ಣ ಮಾತೇ ಅಲ್ಲ. ಅರ್ಧ ಶತಮಾನವನ್ನೇ ಅರ್ಧ ದಶಕಕ್ಕೆ ಇಳಿಸಿಬಿಟ್ಟಿದ್ದಾರೆ ಮೋದಿಜಿ. ಭಾರತದಲ್ಲಿ ದಿನೇ ದಿನೇ ಡಿಜಿಟಲ್‌ ತಂತ್ರಜ್ಞಾನದ (Digital Technology) ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಇದರಿಂದ ಭ್ರಷ್ಟಾಚಾರ ಹಿಡಿತಕ್ಕೆ ಬರುತ್ತಿದೆ. ಕಡಿಮೆ ಕಾಗದ ಸಾಕಾಗುತ್ತಿದೆ. ಜೊತೆಗೆ ಸಮಯ ಕೂಡ ಉಳಿತಾಯವಾಗುತ್ತಿದೆ.

ಇ-ಕಾಮರ್ಸ್‌ನಲ್ಲಿ ನಾವು ವಿಶ್ವಕ್ಕೇ ನಂ.2

‘ಪವರ್ ಟು ಎಂಪವರ್’ ಎನ್ನುವ ಗುರಿಯೊಂದಿಗೆ 2015ರಲ್ಲಿ ಶುರುವಾಯಿತು ಡಿಜಿಟಲ್ ಇಂಡಿಯಾ. ಇವತ್ತು ಅದು ಏನು ಸಾಧಿಸಿದೆ ಎಂಬುದರ ವಿವರ ನಮ್ಮ ಅಂಗೈಲೇ ಇದೆ. 2014ರಲ್ಲಿ ದೇಶದ ಶೇ. 18 ಕೋಟಿ ಜನ ಮಾತ್ರ ಇಂಟರ್ನೆಟ್ ಬಳಸುತ್ತಿದ್ದರು. ಇವತ್ತು ಅವರ ಸಂಖ್ಯೆಶೇ. 83 ಕೋಟಿಯಾಗಿದೆ. ಅಂದ ಮೇಲೆ ದೇಶದ ಜನ ಡಿಜಿಟಲ್ ಸೇವೆಗಳನ್ನು ಅದೆಷ್ಟು ಬಳಸುತ್ತಿರಬಹುದು ನೀವೇ ಯೋಚಿಸಿ. ಇನ್ನು ಆನ್‌ಲೈನ್‌ ವ್ಯವಹಾರವೂ ಇವತ್ತು ವ್ಯಾಪಕವಾಗಿ ಬೆಳೆದ ಪರಿಣಾಮ ಇ- ಕಾಮರ್ಸ್ (E-commerce) ಬಹಳ ವೃದ್ಧಿಯಾಗಿದೆ. ಎಷ್ಟು ಅಂದರೆ ಇ- ಕಾಮರ್ಸ್‌ನಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ದೈತ್ಯ ಕಂಪನಿಗಳು ಪೈಪೋಟಿಗೆ ಬಿದ್ದು ದನದ ಸಗಣಿ, ಬೆರಣಿ, ಕೊನೆಗೆ ಇದ್ದಿಲನ್ನೂ ಆನ್‌ಲೈನ್ ಸೇವೆ (Online service) ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿವೆ.

ಇನ್ನು ಯುಪಿಐ ಅಂದರೆ ಡಿಜಿಟಲ್ ಪೇಮೆಂಟ್‌ ಭಾರತವೇ ಜಗತ್ತಿನಲ್ಲಿ ಎಲ್ಲರಿಗಿಂತ ಮುಂದು. ಜಗತ್ತಿನ ನಾಲ್ಕು ದೇಶಗಳಲ್ಲಿ ನಡೆಯುವಷ್ಟು ಯುಪಿಐ ಪೇಮೆಂಟ್ ಭಾರತವೊಂದರಲ್ಲೇ ನಡೆಯುತ್ತಿದೆ. ಈಗ ಯುಪಿಐ (UPI) ಅನ್ನು ಉಳಿದ ದೇಶಗಳೂ ಅಳವಡಿಸಿಕೊಳ್ಳತೊಡಗಿವೆ. ಸಿಂಗಾಪುರ, ಫ್ರಾನ್ಸ್, ಜರ್ಮನಿಯಂಥ ದೇಶಗಳು ನಮ್ಮ ಗೂಗಲ್ ಪೇ (google Pay) , ಪೇಟಿಎಂನಲ್ಲೇ ಪೇಮೆಂಟ್ ಮಾಡುತ್ತಿವೆ. ನಾವೀಗ ಡಿಜಿಟಲ್ ಪೇಮೆಂಟ್‌ನಲ್ಲಿ ಜಗತ್ತಿಗಿಂತ 10 ವರ್ಷ ಮುಂದಿದ್ದೇವೆ!

ಮಧ್ಯವರ್ತಿಗಳಿಗೆ ಗುಡ್‌ಬೈ

ದೇಶದ ಪ್ರತಿಯೊಬ್ಬನೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಜಾರಿಗೆ ತರಲಾದ ಜನ್ ಧನ್ ಖಾತೆಯಿಂದ ಬಡವರಿಗೆ ಸರ್ಕಾರವೇ ನೇರವಾಗಿ ಹಣ ವರ್ಗಾಯಿಸುತ್ತಿದೆ. ಮೋದಿಜಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜನ್ ಧನ್ ಖಾತೆಯ ಯೋಜನೆ ತಂದಿತು. ಆಗ ಇದರಿಂದ ಏನು ಪ್ರಯೋಜನ ಎಂದು ಮೂಗು ಮುರಿದವರೇ ಜಾಸ್ತಿ. ಆದರೆ ಕೋವಿಡ್ ಸಮಯದಲ್ಲಿ ಸರ್ಕಾರ ಬಡವರ ಅಕೌಂಟ್‌ಗೆ ನೇರವಾಗಿ ಹಣ ಜಮಾ ಮಾಡಿತು. ಅಲ್ಲದೇ ರೈತರಿಗೆ ಪ್ರತೀ ತಿಂಗಳು 6000 ರು. ಇವತ್ತಿಗೂ ಬರುತ್ತಿದೆ. ಇವತ್ತು ದೇಶದ ಬಡವ ಹಾಗೂ ರೈತ ಇಬ್ಬರೂ ಮಧ್ಯವರ್ತಿಗಳ ಕಾಟವಿಲ್ಲದೆ ಸಂಪೂರ್ಣ ಲಾಭವನ್ನು ಜನ್ ಧನ್ ಖಾತೆಯಲ್ಲಿ ಪಡೆಯುತ್ತಿದ್ದಾರೆ.

ಒಂದು ರುಪಾಯಿಗೂ ಸಿಗುತ್ತಿದೆ ಲೆಕ್ಕ

ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಜಗತ್ತು ಬಾಗಿಲು ಹಾಕಿಕೊಂಡು ಮನೆಯೊಳಗೆ ಕುಳಿತಿತ್ತು. ಇಂಥ ಸಮಯದಲ್ಲಿ ಆನ್‌ಲೈನ್ ಸೇವೆ ಇರಲಿಲ್ಲ ಎಂದರೆ ಭಾರತದ ಆರ್ಥಿಕತೆ ಸರಿಯಾಗಿ ಪೆಟ್ಟು ತಿನ್ನುತ್ತಿತ್ತು. ಆದರೆ ಯಾವ ಕೆಲಸವೂ ನಿಲ್ಲಲಿಲ್ಲ. ಜನ ವರ್ಕ್ ಫ್ರಮ್ ಹೋಂ ಮಾಡಿದರು. ಮಕ್ಕಳು ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆದರು. ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಜನ ಲಸಿಕೆ ಪಡೆದರು. ವೇಗವಾದ ಇಂಟರ್ನೆಟ್ ವ್ಯವಸ್ಥೆ ಇರಲಿಲ್ಲ ಎಂದರೆ ಇದು ಸಾಧ್ಯವಾಗುತ್ತಿತ್ತೆ? ಇವತ್ತು ಒಂದು ರುಪಾಯಿ ವ್ಯವಹಾರಕ್ಕೂ ಲೆಕ್ಕ ಸಿಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ವಿಶ್ವಬ್ಯಾಂಕ್‌ ಭಾರತ ಸರ್ಕಾರ ತನ್ನ ಬೇರೆ ಬೇರೆ 312 ಸ್ಕೀಮ್ ಗಳಿಂದ ಬಡವರ ಖಾತೆಗೆ ಇದುವರೆಗೆ ಒಟ್ಟೂ 361 ಬಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದೆ ಎಂಬುದನ್ನು ಹೇಳಿದೆ.

ಶೀಘ್ರ ಡೆಬಿಟ್‌ ಕಾರ್ಡ್‌ ಮಾಯ

ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಿಂದಾಗಿ ಐಟಿ ಕ್ಷೇತ್ರ, ಹಣಕಾಸು, ಆನ್‌ಲೈನ್ ಶಿಕ್ಷಣ (Online Education), ಇ-ಕಾಮರ್ಸ್(E-commerce), ಪ್ರವಾಸೋದ್ಯಮ ಎಲ್ಲದಕ್ಕೂ ಲಾಭವಾಗುತ್ತಿದೆ. ಹಳ್ಳಿಗಳೂ ಇವತ್ತು ದೊಡ್ಡ ಶಹರಗಳೊಂದಿಗೆ ಸುಲಭವಾಗಿ ಕನೆಕ್ಟ್ ಆಗಿವೆ. ಅದೆಷ್ಟೊ ಐಟಿ ಮಂದಿ ಇವತ್ತಿಗೂ ಹಳ್ಳಿಗಳಲ್ಲಿ ಕುಳಿತು ಕೆಲಸಗಳನ್ನು ಮಾಡುತ್ತಿದ್ದಾರೆ. ಬೇರೆ ಬೇರೆ ದೇಶಗಳೊಂದಿಗೆ ಕನೆಕ್ಟ್ ಆಗುತ್ತಿದ್ದಾರೆ. ಒಂದು ಕಾಲದಲ್ಲಿ ಕರೆಂಟ್ ಗೆ ಪರದಾಡುತ್ತಿದ್ದ ಹಳ್ಳಿಗಳೆಲ್ಲ ಇವತ್ತು ಐಟಿ ಮಂದಿಯನ್ನು ತುಂಬಿಸಿಕೊಂಡು ಬೀಗುತ್ತಿವೆ ಎಂದರೆ ಅದಕ್ಕೆ ಕಾರಣ ಮತ್ತದೇ ಡಿಜಿಟಲೈಸೇಶನ್. ಮುಂದಿನ ದಿನಗಳಲ್ಲಿ ಡೆಬಿಟ್ ಕಾರ್ಡ್ ವ್ಯವಸ್ಥೆಯೂ ಮರೆಯಾಗಲಿದ್ದು, ಜನ ತಮ್ಮ ಮೊಬೈಲ್ ಮೂಲಕವೇ ಎಟಿಎಂನಲ್ಲಿ ಸ್ಕ್ಯಾನ್ ಮಾಡಿ ಕ್ಯಾಶ್ ತೆಗೆಯಬಹುದಾಗಿದೆ.

ಭಾರತ ಹಾವಾಡಿಗರ ದೇಶವಲ್ಲ

ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಜಗತ್ತು ಬೆರಗಿನಿಂದ ನೋಡುತ್ತಿದೆ. ಇದು ಅದೇ ಭಾರತವಾ? ಎಂದು ಕೇಳುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಜರ್ಮನಿಯ ಸಚಿವರೊಬ್ಬರು ಬೆಂಗಳೂರಿನಲ್ಲಿ ಗೂಗಲ್ ಪೇ ಬಳಸಿ ಮೆಣಸಿನಕಾಯಿ ಖರೀದಿಸಿದರು. ಭಾರತದಲ್ಲಿ ಯುಪಿಐ ವ್ಯವಸ್ಥೆಯನ್ನು ಜನ ಇಷ್ಟು ಅಗಾಧವಾಗಿ, ಸುಲಭವಾಗಿ ಬಳಕೆ ಮಾಡುತ್ತಿರುವುದನ್ನು ನೋಡಿ ಶ್ಲಾಘಿಸಿದರು. ಭಾರತವೆಂದರೆ ಹಾವಾಡಿಗರ ದೇಶವಲ್ಲ. ಇಲ್ಲಿನ ರಾಜಕಾರಣಿಗಳು ಬುದ್ಧಿವಂತ ಜನರನ್ನು ಕೋತಿಯಂತೆ ಆಡಿಸುತ್ತಾರೆ. ಒಬ್ಬ ದೇಶಾಭಿಮಾನಿ ಸಮರ್ಥ ನಾಯಕ ಹಾಗೂ ಸರಿಯಾದ ವ್ಯವಸ್ಥೆ ಕೊಟ್ಟರೆ ಭಾರತೀಯರು ಮಿರ್‍ಯಾಕಲ್‌ ಮಾಡಿ ತೋರಿಸಬಲ್ಲರು. ಮೋದಿಜಿಯಂಥ ಸಮರ್ಥ ನಾಯಕನಿದ್ದರೆ ಅರ್ಧ ಶತಮಾನವನ್ನೇ ಎಗರಿಸಿ ನಮ್ಮ ಬುಟ್ಟಿಗೆ ಹಾಕಿಕೊಂಡು ಬಿಡಬಹುದು ಎನ್ನಲು ಕಳೆದ ಒಂಭತ್ತು ವರ್ಷಗಳೇ ಸಾಕ್ಷಿ.

Follow Us:
Download App:
  • android
  • ios