ಶಿವ ಶಿವ!: ಎಟಿಎಂನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹೀಗೂ ದುರ್ಬಳಕೆ ಆಗುತ್ತೆ: ವಿಡಿಯೋ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 4:25 PM IST
Even one can steal your money by using your credit card details: video
Highlights

ನಿಮ್ಮ ಕ್ರೆಡಿಟ್ ಕಾರ್ಡ್ ಕೂಡ ಸೇಫ್ ಅಲ್ಲ! ಕ್ರೆಡಿಟ್ ಕಾರ್ಡ್ ನಿಂದಲೂ ಹಣ ಕದಿತಾರೆ! ಖದೀಮರ ಈ ಜಾಲ ಭೇದಿಸೋದು ಹೇಗೆ?! ಹಣ ಕಳೆದುಕೊಂಡವರ ಪಾಡೇನು?

ಬೆಂಗಳೂರು(ಆ.೩): ನಮಗೆಲ್ಲಾ ಗೊತ್ತಿರುವಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇತ್ತೀಚೆಗೆ ಜನರಿಗೆ ಮೋಸ ಮಾಡುವ ಜಾಲ ಹುಟ್ಟಿಕೊಂಡಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಗಳನ್ನು ದುರ್ಬಳಕೆ ಮಾಡಿನಕೊಂಡು ಹಣ ಎಗರಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ತಮಗೆ ಗೊತ್ತಿಲ್ಲದಂತೇ ಗ್ರಾಹಕರು ಈ ಖದೀಮರ ಜಾಲದಲ್ಲಿ ಸಿಕ್ಕು ಮೋಸ ಹೋಗುತ್ತಿದ್ದಾರೆ.

ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದ್ದು ಅದನ್ನು ದುರ್ಬಳಕೆ ಮಾಡುವ ಘಟನೆಗಳಿಗೆ ಈ ದೇಶದಲ್ಲಿ ಬರವಿಲ್ಲ. ಅಂಥದ್ದೊಂದು ಘಟನೆಯ ರನ್ನಿಂಗ್ ಕಾಮೆಂಟ್ರಿಯನ್ನು ಕಾರ್ಡ್ ಬಳಸುವವರ ಹಿತದೃಷ್ಟಿಯಿಂದ ಇಲ್ಲಿ ಸಾದರಪಡಿಸಲಾಗಿದೆ. ಬೆಂಗಳೂರಿನ ನಿತೇಶ್ ಕುಂಟಾಡಿ ಎಂಬುವವರ ಕ್ರೆಡಿಟ್ ಕಾರ್ಡ್ ನಿಂದ ಬರೋಬ್ಬರಿ 40 ಸಾವಿರ ರೂ. ಎಗರಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ನಿತೇಶ್ ಕುಂಟಾಡಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಳೆದ ಭಾನುವಾರ ಅವರು Playo app ನಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಬುಕ್ ಮಾಡಿ ಮನೆಯಿಂದ ಅಣ್ಣನ ಮನೆಗೆ ಹೋಗಿ ಕುಳಿತಿದ್ದರು. ಬೆನ್ನುಬೆನ್ನಿಗೆ ಅವರ ಮೊಬೈಲ್ ಗೆ HDFC ಬ್ಯಾಂಕ್ ನಿಂದ 2 ಮೆಸೇಜ್ ಗಳು ಬಂದಿವೆ. ಏನಪ್ಪಾ ಅಂತಾ ತೆಗೆದು ನೋಡಿದರೆ, ಅವರ ಕ್ರೆಡಿಟ್ ಕಾರ್ಡ್ ನಿಂದ 2 ಬಾರಿ ಒಟ್ಟು 40 ಸಾವಿರ ರೂ. ಡ್ರಾ ಮಾಡಿರುವ ಕುರಿತು ಮೆಸೇಜ್ ಬಂದಿದೆ.

ಅಷ್ಟರಲ್ಲಾಗಲೇ HDFC ಬ್ಯಾಂಕ್ ನಿಂದ ನಿತೇಶ್ ಅವರಿಗೆ ಕರೆ ಬಂದಿದ್ದು, ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಎಟಿಎಂ ನಲ್ಲಿ 20 ಸಾವಿರ ರೂ.ಗಳ 2 ಟ್ರ್ಯಾನ್ಸ್ಯಾಕ್ಷನ್ ಆಗಿದೆ. ನೀವು ಈ ತನಕ ಕ್ರೆಡಿಟ್ ಕಾರ್ಡ್ ನಿಂದ ಕ್ಯಾಶ್ ತೆಗೆದಿಲ್ಲ. ಹೀಗಾಗಿ ಈ ಟ್ರ್ಯಾನ್ಸ್ಯಾಕ್ಷನ್ ಮಾಡಿದ್ದು ನೀವೆನಾ ಎಂದು ಕೇಳಿದ್ದಾರೆ. ಅಷ್ಟೇ ನಿತೇಶ್ ದಂಗಾಗಿ ಹೋಗಿದ್ದಾರೆ.

ನಿತೇಶ್ ಕೂಡಲೇ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಒಂದು ಕಂಪ್ಲೇಂಟ್ ಬರೆದು ನಿತೇಶ್ ಸೈಬರ್ ಕ್ರೈಂ ಪೊಲೀಸರಿಗೆ ಕೊಟ್ಟು ಬಂದಿದ್ದಾರೆ. ನಿತೇಶ್ ಅವರಿಗೆ ಪೊಲೀಸರು ಈಗಾಗಲೇ ಎಫ್‌ಐಆರ್ ಪ್ರತಿಯನ್ನೂ ನೀಡಿದ್ದಾರೆ.

ಆಮೇಲೆ ಬ್ಯಾಂಕ್ ಗೆ ಹೋಗಿ ಡಿಸ್ಪ್ಯೂಟ್ ಫಾರ್ಮ್ ತುಂಬಿ ಅಲ್ಲಿಯೂ ದೂರು ದಾಖಲಿಸಿದ್ದಾರೆ ನಿತೇಶ್. ಬ್ಯಾಂಕ್ ಸಿಬ್ಬಂದಿ ಹಣ ವಾಪಸ್ಸು ಬರುವ ಕುರಿತು ನಿತೇಶ್ ಅವರಿಗೆ ಭರವಸೆ ಕೂಡ ನೀಡಿದ್ದಾರೆ.

ಈ ಮಧ್ಯೆ ಇದು ತಮ್ಮೊಬ್ಬರ ಸಮಸ್ಯೆ, ಬಗೆಹರಿಯುತ್ತೆ ಅಂತಾ ನಿತೇಶ್ ಸುಮ್ಮನಾಗಿಲ್ಲ. ಇದೇ ರೀತಿ ಮೋಸ ಹೋಗಿರಬಹುದಾದ ಇತರರಿಗೂ ಮತ್ತು ಮುಂದೆ ಮೋಸ ಹೋಗಲಿರುವವರಿಗೂ, ಇಂತಹ ಸಂಕಷ್ಟ ಎದುರಾದಾಗ ಏನು ಮಾಡಬೇಕು ಎಂಬುದನ್ನು ಸುದೀರ್ಘವಾಗಿ ತಮ್ಮ ಫೇಸ್‌ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಾರಣ ನಿತೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಹೊದಾಗ ಅಲ್ಲಿ ಇವರ ಹಾಗೆ ಹಣ ಕಳೆದುಕೊಂಡ ಸುಮಾರು 10-15 ಜನ ದೂರು ಕೊಡಲು ಬಂದಿದ್ದರು. ಇವರನ್ನು ನೋಡಿಯೇ ನಿತೇಶ್ ಅವರಿಗೆ ಸಮಸ್ಯೆಯ ಗಂಭೀರತೆ ಅರಿವಾದದ್ದು. ಇದೇ ಕಾರಣಕ್ಕೆ ನಿತೇಶ್ ಬ್ಯಾಂಕ್ ಸಿಬ್ಬಂದಿ ಸಹಾಯದಿಂದ ವಿಡಿಯೋವೊಂದನ್ನು ಮಾಡಿದ್ದು, ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಹೇಗೆ ಮೋಸ ಮಾಡಲಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.

ನಿತೇಶ್ ಈ ಕುರಿತು ಏನು ಹೇಳುತ್ತಾರೆ?. ಫೇಸ್‌ಬುಕ್ ನಲ್ಲಿ ನಿತೇಶ್ ಹಂಚಿಕೊಂಡಿರುವ ಮಾಹಿತಿ ಏನು?. ಅವರು ಕೊಡುವ ಎಚ್ಚರಿಕೆ ನಿಮಗೆ ದಾರಿದೀಪವಾಗಬಹುದು ಎಂಬ ಆಶಯ ನಮ್ಮದು ಕೂಡ.

ತಂತ್ರಜ್ಞಾನ ಆಧರಿತ ಅರ್ಥ ವ್ಯವಸ್ಥೆ, ಮತ್ತದರ ದುರವಸ್ಥೆಯ ಕತೆ ಹೇಳುವ ಈ ವರದಿ ನಿಮಗಾಗಿ, ಎಲ್ಲರಿಗಾಗಿ. ಬೃಹದಾಕಾರವಾಗಿ ಬೆಳೆಯುತ್ತಿರುವ ಈ ಅಪರಾಧವನ್ನು ತಡೆಗಟ್ಟುವ ಬಗೆ ಹೇಗೆ?. ಐಟಿ ಯುಗದ ಚಾಣಾಕ್ಷ ಬುದ್ದಿವಂತರೇನಾದರೂ ಇದಕ್ಕೆ ಪರಿಹಾರ ಸೂಚಿಸಬಲ್ಲರೇ?. ಆ ಚಾಣಾಕ್ಷ ನೀವೂ ಕೂಡ ಆಗಿರಬಹುದು.

"

loader