ನವದೆಹಲಿ(ಡಿ.21): ಕೊರೋನಾದಿಂದ ಮಲಗಿದ್ದ ಆರ್ಥಿಕತೆ ಮತ್ತೆ ಸರಿದಾರಿಗೆ ಬರುತ್ತಿದೆ ಎಂಬ ಮತ್ತಷ್ಟುಸುಳಿವು ಲಭ್ಯವಾಗಿದೆ. ಕಳೆದ ಆಕ್ಟೋಬರ್‌ ತಿಂಗಳಲ್ಲಿ ದೇಶದಲ್ಲಿ 11.55 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ಕಾರ್ಮಿಕರ ಭವಿಷ್ಯನಿಧಿ ಮಂಡಳಿಯ ವರದಿ ತಿಳಿಸಿದೆ. ಇದು ಕಳೆದ ವರ್ಷ ಇದೇ ಅವಧಿಗಿಂತ ಶೇ.56ರಷ್ಟುಅಧಿಕ ಎಂಬುದು ಇನ್ನೊಂದು ವಿಶೇಷ. ಹೀಗಾಗಿ ಉದ್ಯೋಗ ಸೃಷ್ಟಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಮೊದಲು ಮೂರು ಸ್ಥಾನದಲ್ಲಿವೆ.

ಕೇಂದ್ರ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಅನ್ವಯ, ಸೆಪ್ಟೆಂಬರ್‌ ತಿಂಗಳಿನಲ್ಲಿ 14.9 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದ್ದರೆ, ಅಕ್ಟೋಬರ್‌ನಲ್ಲಿ 11.55 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಕೊರೋನಾ ಲಾಕ್ಡೌನ್‌ ಜಾರಿಯಲ್ಲಿದ್ದ ವೇಳೆ ಉದ್ಯೋಗ ಸೃಷ್ಟಿಪ್ರಮಾಣ ಮೈನಸ್‌ 1.79 ಲಕ್ಷಕ್ಕೆ ತಲುಪಿದ್ದನ್ನು ಗಮನಿಸಿದರೆ, ಇದು ಗಣನೀಯ ಏರಿಕೆಯಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ ಸೃಷ್ಟಿಯಾದ ಹೊಸ ಉದ್ಯೋಗದಲ್ಲಿ ಶೇ.50ರಷ್ಟುಪಾಲು 18ರಿಂದ 25ರ ವಯೋಮಾನದವರದ್ದು. ದೇಶದ ಒಟ್ಟು ಉದ್ಯೋಗ ಸೃಷ್ಟಿಯಲ್ಲಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್‌ ಮತ್ತು ಹರ್ಯಾಣ ರಾಜ್ಯಗಳ ಪಾಲು ಶೇ.53ರಷ್ಟುಅಂದರೆ 39.33 ಲಕ್ಷದಷ್ಟಿದೆ ಎಂದು ವರದಿ ಹೇಳಿದೆ.