ಇಪಿಎಸ್ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ನೀಡಿದ್ದ ಅಂತಿಮ ಗಡುವನ್ನು ಜುಲೈ 11ರ ತನಕ ವಿಸ್ತರಿಸಲಾಗಿದೆ.ಈ ಹಿಂದೆ ಅರ್ಜಿ ಸಲ್ಲಿಕೆಗೆ ಜೂನ್ 26 ಅಂತಿಮ ಗಡುವು ಆಗಿತ್ತು.ಇಪಿಎಫ್ ಒ ಈ ರೀತಿ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸುತ್ತಿರೋದು ಇದು ಮೂರನೇ ಬಾರಿಯಾಗಿದೆ.ಅರ್ಜಿ ಸಲ್ಲಿಕೆಗೆ ಇದು ಕೊನೆಯ ಅವಕಾಶ ಎಂದು ಕೂಡ ಇಪಿಎಫ್ ಒ ತಿಳಿಸಿದೆ.ಹೀಗಾಗಿ ನೀವಿನ್ನೂ ಅರ್ಜಿ ಸಲ್ಲಿಕೆ ಮಾಡದಿದ್ರ ತಕ್ಷಣ ಮಾಡಿಬಿಡಿ.
ನವದೆಹಲಿ (ಜೂ.27): ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್ ಒ ಮತ್ತೊಮ್ಮೆ ವಿಸ್ತರಿಸಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ನಿನ್ನೆ (ಜೂ.26) ಕೊನೆಯ ದಿನವಾಗಿತ್ತು. ಆದರೆ, ಈ ಗಡುವನ್ನು ಜುಲೈ 11ರ ತನಕ ವಿಸ್ತರಿಸಲಾಗಿದೆ. ಇನ್ನು ಈ ಗಡುವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅದೇ ಉದ್ಯೋಗದಾತ ಸಂಸ್ಥೆಗಳು ಅಥವಾ ಕಂಪನಿಗಳಿಗೆ ಹೆಚ್ಚುವರಿ ಮೂರು ತಿಂಗಳು ಅಂದ್ರೆ ಸೆಪ್ಟೆಂಬರ್ 30ರ ತನಕ ಅವಕಾಶ ನೀಡಲಾಗಿದೆ. ಈ ಮೂಲಕ ಇಪಿಎಫ್ ಒ ಮೂರನೇ ಬಾರಿ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ. ಈ ಹಿಂದೆ 2023ರ ಮೇ 3ರ ತನಕ ಮಾತ್ರ ಅವಕಾಶ ನೀಡಿತ್ತು. ಆ ಬಳಿಕ ಅರ್ಹ ಎಲ್ಲ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಜೂನ್ 26ರ ತನಕ ವಿಸ್ತರಿಸಿತ್ತು. ಆದರೆ, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರೋದಾಗಿ ಇಪಿಎಫ್ ಒ ತಿಳಿಸಿದೆ. ಇಪಿಎಫ್ ಒ ನೀಡಿರುವ ಮಾಹಿತಿ ಪ್ರಕಾರ ಇಲ್ಲಿಯ ತನಕ ಅಧಿಕ ಪಿಂಚಣಿ ಕೋರಿ ಒಟ್ಟು 16.06 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.
ಅಂತಿಮ ಗಡುವು ವಿಸ್ತರಿಸಿದ್ದು ಏಕೆ?
ಅರ್ಜಿ ಸಲ್ಲಿಕೆ ವೇಳೆ ಅನೇಕ ಸಮಸ್ಯೆಗಳನ್ನು ಇಪಿಎಫ್ ಸದಸ್ಯರು ಎದುರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಇಪಿಎಫ್ ಒ ತಿಳಿಸಿದೆ. ಇನ್ನು ಅಧಿಕ ಪಿಂಚಣಿ ಪಡೆಯಲು ಎಷ್ಟು ಹಣ ಠೇವಣಿ ಇಡಬೇಕು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ. ಹಾಗೆಯೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಸಲು ಕೂಡ ಕೆಲವರಿಗೆ ಸಮಸ್ಯೆಗಳು ಎದುರಾಗಿದ್ದವು. ಇನ್ನು ಆಧಾರ್ ನಲ್ಲಿ ಕೆಲವು ಬದಲಾವಣೆ ಮಾಡಿದವರಿಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಆಧಾರ್ ಅವರ ಇಪಿಎಫ್ ಯುಎಎನ್ (Universal Account Number) ಜೊತೆಗೆ ಲಿಂಕ್ ಆಗಿರುವ ಕಾರಣ ಈ ಸಮಸ್ಯೆ ಎದುರಾಗಿತ್ತು. ಇನ್ನು ಉದ್ಯೋಗದಾತ ಸಂಸ್ಥೆ ಜೊತೆಗೆ ಜಂಟಿ ಅರ್ಜಿ ಸಲ್ಲಿಕೆ ಮಾಡಬೇಕಿರುವ ಉದ್ಯೋಗಿಗಳು ಕೂಡ ಸಮಸ್ಯೆ ಎದುರಿಸಿದ್ದಾರೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇಪಿಎಫ್ ಒ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ.
ಇಪಿಎಫ್ ಪಾಸ್ ಬುಕ್ ನಲ್ಲಿ ಇನ್ನೂ ಬಡ್ಡಿ ಅಪ್ಡೇಟ್ ಆಗದಿದ್ರೆ ಚಿಂತಿಸಬೇಡಿ, ಯಾವುದೇ ನಷ್ಟವಾಗದು: EPFO
ಯಾರು ಅರ್ಜಿ ಸಲ್ಲಿಸಬಹುದು?
ಇಪಿಎಫ್ಒ ಫೆಬ್ರವರಿ 21ರಂದು ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಅನ್ವಯ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು. 2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್ಒ ತಿಳಿಸಿದೆ. ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು.ಇನ್ನು 2014ರ ಸೆಪ್ಟೆಂಬರ್ 1ಕ್ಕಿಂತ ಮುನ್ನ ನಿವೃತ್ತಿ ಹೊಂದಿದ ಹಾಗೂ ಅಧಿಕ ಪಿಂಚಣಿ ಆಯ್ಕೆ ಮಾಡದ ಉದ್ಯೋಗಿಗಳು ಈ ಸೌಲಭ್ಯ ಪಡೆಯಲು ಅರ್ಹರಾಗಿಲ್ಲ.
ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ
ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: ಇ-ಸೇವಾ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ‘Pension on Higher Salary: Exercise of Joint Option under para 11(3) and para 11(4) of EPS-1995 on or before June 26, 2023’ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಜಂಟಿ ಆಯ್ಕೆಗಳಿಗೆ ಅರ್ಜಿ ನಮೂನೆಗಳ ಆಯ್ಕೆ ಆರಿಸಿ.
ಹಂತ 4: ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಯುಎಎನ್, ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
ಹಂತ 5: ಅರ್ಜಿ ಭರ್ತಿ ಮಾಡಿದ ಬಳಿಕ ‘OTP’ ಪಡೆಯಲು ಒಂದು ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ. ಅದು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ.
