ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ
ಇಪಿಎಫ್ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿರೋರು ಅದರಲ್ಲಿನ ತಪ್ಪುಗಳಿಗೆ ಆನ್ ಲೈನ್ ನಲ್ಲೇ ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿಇಪಿಎಫ್ ಒ ಅರ್ಜಿ ಡಿಲೀಟ್ ಮಾಡಲು ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಿದೆ.
Business Desk:ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪೋರ್ಟಲ್ ನಲ್ಲಿ ಉದ್ಯೋಗಿಗಳಿಗೆ ಅಧಿಕ ಪಿಂಚಣಿ ಅರ್ಜಿಯನ್ನು ರದ್ದುಗೊಳಿಸಲು ಡಿಲೀಟ್ ಬಟನ್ ಆಯ್ಕೆಯನ್ನು ಇತ್ತೀಚೆಗಷ್ಟೇ ನೀಡಲಾಗಿದೆ. ಈ ಕುರಿತು ಇಪಿಎಫ್ಒ ಮಾಹಿತಿ ನೀಡಿದೆ. ಇದ್ರಿಂದ ಅಧಿಕ ಪಿಂಚಣಿ ಕೋರಿ ಈಗಾಗಲೇ ಸಲ್ಲಿಸಿರುವ ಅರ್ಜಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದನ್ನು ರದ್ದುಗೊಳಿಸಿ ಹೊಸ ಅರ್ಜಿ ಸಲ್ಲಿಕೆ ಮಾಡಬಹುದು. ಅಧಿಕ ಪಿಂಚಣಿಗಾಗಿ ಸಲ್ಲಿಕೆ ಮಾಡಿರುವ ಅರ್ಜಿಗಳ ದೃಢೀಕರಣಕ್ಕೆ ಅದರಲ್ಲಿನ ತಪ್ಪುಗಳು ಅಡ್ಡಿಯಾಗುವ ಸಾಧ್ಯತೆಯಿರುವ ಕಾರಣ ತಪ್ಪುಗಳ ತಿದ್ದುಪಡಿಗೆ ಆನ್ ಲೈನ್ ನಲ್ಲಿ ಅವಕಾಶ ಕಲ್ಪಿಸುವಂತೆ ಪಿಂಚಣಿದಾರರು ಮತ್ತು ಸದಸ್ಯರು ನಿರಂತರ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಆಯ್ಕೆ ಉದ್ಯೋಗದಾತ ಸಂಸ್ಥೆಗಳು ಈ ತನಕ ಯಾವುದೇ ಕ್ರಮ ಕೈಗೊಳ್ಳದ ಅರ್ಜಿಗಳಿಗೆ ಮಾತ್ರ ಲಭ್ಯ. ಒಂದು ವೇಳೆ ಉದ್ಯೋಗದಾತ ಸಂಸ್ಥೆ ನಿಮ್ಮ ಅರ್ಜಿ ಪರಿಶೀಲಿಸಿದ್ರೆ ಡಿಲೀಟ್ ಬಟನ್ ಆಯ್ಕೆ ಸಿಗದು.
ಅರ್ಜಿ ಸಲ್ಲಿಕೆಗೆ ಜೂನ್ 26ರ ಗಡುವು
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್ ಒ ಜೂನ್ 26ರ ತನಕ ವಿಸ್ತರಿಸಿದೆ. ಈ ಮೊದಲು ಮೇ 3ರ ತನಕ ಮಾತ್ರ ಅವಕಾಶ ನೀಡಲಾಗಿತ್ತು. ಇಲ್ಲಿಯ ತನಕ ಅಧಿಕ ಪಿಂಚಣಿ ಕೋರಿ 12 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಗೋ ಫಸ್ಟ್ ವಿಮಾನ ಸೇವೆ ದಿವಾಳಿ ಎಫೆಕ್ಟ್: ದೇಶದಲ್ಲಿ ವಿಮಾನ ಟಿಕೆಟ್ ದರ 4 - 6 ಪಟ್ಟು ಹೆಚ್ಚಳ
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಯಾರು ಅರ್ಹರಾಗಿದ್ದರೋ ಅಂಥ ಉದ್ಯೋಗಿಗಳಿಗೆ ಇಪಿಎಫ್ಒ ಫೆ.20ರಂದು ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆಗೆ 2014ರಲ್ಲಿ ತಿದ್ದುಪಡಿ ತರಲಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು 2022ರ ನವೆಂಬರ್ 4ರಂದು ತೀರ್ಪು ಪ್ರಕಟಿಸಿತ್ತು.ಈ ಹಿನ್ನೆಲೆಯಲ್ಲಿ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ಇಪಿಎಫ್ ಒ ಅವಕಾಶ ನೀಡಿತ್ತು. ಎಲ್ಲ ಅರ್ಹ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಲಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಹಂತ 1: ಇ-ಸೇವಾ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ‘Pension on Higher Salary: Exercise of Joint Option under para 11(3) and para 11(4) of EPS-1995 on or before June 26, 2023’ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಜಂಟಿ ಆಯ್ಕೆಗಳಿಗೆ ಅರ್ಜಿ ನಮೂನೆಗಳ ಆಯ್ಕೆ ಆರಿಸಿ.
ಹಂತ 4: ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಯುಎಎನ್, ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಿ.
ಹಂತ 5: ಅರ್ಜಿ ಭರ್ತಿ ಮಾಡಿದ ಬಳಿಕ ‘OTP’ ಪಡೆಯಲು ಒಂದು ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ. ಅದು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ.
ಹಳೆಯ ಪಿಂಚಣಿ ಪದ್ಧತಿಯಿಂದ ಹಣಕಾಸು ಹೊರೆ ಹೆಚ್ಚಳ: 5 ರಾಜ್ಯಗಳಲ್ಲಿ ಜಾರಿ ಬೆನ್ನಲ್ಲೇ ಆರ್‌ಬಿಐ ಎಚ್ಚರಿಕೆ
ಇಪಿಎಫ್ಒ ಫೆ.21ರಂದು ಬಿಡುಗಡೆಗೊಳಿಸಿರುವ ಮಾರ್ಗಸೂಚಿ ಅನ್ವಯ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು. ಇನ್ನು ನಿವೃತ್ತಿಗೂ ಮುನ್ನ ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರು.