ನೀವು ಪಿಎಫ್ ಖಾತೆ, ನಿಧಿ, ಹಣ ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ದೂರು ನೀಡಿದ್ದೀರಾ? ಅಥವಾ ಯಾವುದೇ ಪಿಎಫ್ ಖಾತೆ ಸಮಸ್ಯೆ ಎದುರಿಸುತ್ತಿದ್ದೀರಾ? ಇನ್ನು ನೀವು ಸಮಸ್ಯೆ ಸರಿಪಡಿಸಲು ಲೆಕ್ಕವಿಲ್ಲದಷ್ಟು ದಿನ ಕಚೇರಿಗೆ ಅಲೆದಾಡಬೇಕಿಲ್ಲ. ಹೊಸ ನೀತಿ ಜಾರಿಯಾಗುತ್ತಿದೆ.

ನವದೆಹಲಿ (ಜು.11) ಉದ್ಯೋಗಿಗಳು ಸೇರಿದಂತೆ ವೇತನ ಪಡೆಯುವ ವರ್ಗದ ಪ್ರಮುಖ ಉಳಿತಾಯ ಅಥವಾ ನಿಧಿ ಎಂದರೆ ಅದು ಉದ್ಯೋಗ ಭವಿಷ್ಯ ನಿಧಿ. ಪಿಎಫ್ ಖಾತೆ ಹೊಂದಿದ ಪ್ರತಿಯೊಬ್ಬರು ತಮ್ಮ ಖಾತೆ, ಪಾಸ್‌ಬುಕ್, ಜಮೆ ಆಗುತ್ತಿರುವ ಮೊತ್ತ, ವಿಳಾಶ, ನಾಮಿನಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸ್ಪಷ್ಟವಾಗಿದೆಯಾ ಅನ್ನೋದು ಖಚಿತಪಡಿಸಿಕೊಳ್ಳಬೇಕು. ಇದೇ ವೇಳೆ ಹಳೇ ಕಂಪನಿ ಪಿಎಫ್ ಖಾತೆಯನ್ನು ಹೊಸ ಕಂಪನಿಯ ಖಾತೆಗೆ ವರ್ಗಾವಣೆ, ಹಣ ಹಿಂಪಡೆಯಲು ಸೇರಿದಂತೆ ಪಿಎಫ್ ಖಾತೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಬಹುತೇಕರು ಎದುರಿಸುತ್ತಿರುತ್ತಾರೆ. ಈ ಕುರಿತು ದೂರು ನೀಡಿದವರು ಇದ್ದಾರೆ, ಅಲೆದಾಡಲು ಸಮಯವಿಲ್ಲ ಎಂದು ಕೈಕಟ್ಟಿ ಕುಳಿತವರೂ ಇದ್ದಾರೆ. ಆದರೆ ಇನ್ನು ಮುಂದೆ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಲು ಕಚೇರಿ ಅಲೆದಾಡಬೇಕಿಲ್ಲ. ಹೊಸ ನೀತಿ ಜಾರಿಯಾಗುತ್ತಿದೆ.

ಪಿಎಫ್ ಸಮಸ್ಯೆ ದೂರಿಗೆ 7 ಸೂತ್ರ

ಪಿಎಫ್ ಕಚೇರಿಗೆ ಪ್ರತಿ ದಿನ ಸಾವಿರಾರು ದೂರು ದುಮ್ಮಾನಗಳು ಬರುತ್ತಿದೆ. ತಮ್ಮ ಸಮಸ್ಯೆ ಸರಿಪಡಿಸಲು ಪ್ರತಿ ದಿನ ಕಚೇರಿಗೆ ಅಲೆದಾಡುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಇದೀಗ ಪಿಎಫ್ ಹೊಸ ನಿಯಮ ಜಾರಿಗೆ ತಂದಿದೆ. ನಿಮ್ಮ ಸಮಸ್ಯೆಗಳ ದೂರನ್ನು ಕೇವಲ 7 ದಿನದಲ್ಲಿ ಪರಿಹರಿಸಬೇಕು. ಅದಕ್ಕಿಂತ ಹೆಚ್ಚು ಖಾತೆಾದರರನ್ನು, ಪಿಂಚಣಿದಾರರನ್ನು ಕಾಯಿಸುವಂತಿಲ್ಲ,ಓಡಾಡಿಸುವಂತಿಲ್ಲ.

ಕನಿಷ್ಠ 7 ದಿನದಲ್ಲಿ ದೂರಿಗೆ ಪ್ರತಿಕ್ರಿಯೆ

ಕೇವಲ 7 ದಿನದಲ್ಲಿ ನೀವು ನೀಡಿದ ದೂರಿಗೆ ಪರಿಹಾರ ಸಿಗಲಿದೆ. 7 ದಿನದಲ್ಲಿ ನಿಮ್ಮ ದೂರಿಗೆ ಪಿಎಫ್ ಕಚೇರಿ ಉತ್ತರಿಸಲಿದೆ. ಸುಲಭದಲ್ಲಿ ಪರಿಹರಿಸುವ ಸಮಸ್ಯೆಯಾಗಿದ್ದರೆ ಕೇವಲ 7 ದಿನದಲ್ಲಿ ಪರಿಹಾರವಾಗಲಿದೆ. ಇನ್ನು ಸಮಸ್ಯೆ ಗಂಭೀರವಾಗಿದ್ದರೆ, ಹಲವು ದಾಖಲೆಗಳು, ವೆರಿಫಿಕೇಶನ್ ಅಗತ್ಯವಿದ್ದರೆ ಕೆಲ ದಿನಗಳು ಹೆಚ್ಚಾಗಬಹುದು. ಆದರೆ ನಿಯಮದ ಪ್ರಕಾರ 7 ದಿನದಲ್ಲಿ ಪ್ರತಿಯೊಬ್ಬರ ದೂರಿಗೆ ಪ್ರತಿಕ್ರಿಯೆ ಅಥವಾ ಸ್ಪಂದನೆ ನೀಡಬೇಕು. ಇದರ ಆಧಾರದಲ್ಲಿ ಖಾತೆದಾರರು ಮುಂದಿನ ಕ್ರಮ ಅಥವಾ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ.

2024-25ರ ಸಾಲಿನಲ್ಲಿ ಬರೋಬ್ಬರಿ 2 ಮಿಲಿಯನ್ ದೂರುಗಳು ಬಂದಿದೆ. ಇವನ್ನು ಪರಿಹರಿಸಲು ಪಿಎಫ್ ಕಚೇರಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಆದರೆ ಹಲವು ದೂರುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿದೇ ಇದ್ದರೆ ಖಾತೆದಾರರು ಪ್ರತಿ ದಿನ ಕಚೇರಿ ಅಲೆಯಬೇಕಾಗುತ್ತದೆ. ಇದನ್ನು ತಪ್ಪಿಸಲು ಪಿಎಫ್ ಕಚೇರಿ ಇದೀಗ ತನ್ನ ಕಾರ್ಯದಲ್ಲಿ ಹಾಗೂ ನೀತಿಯಲ್ಲಿ ಬದಲಾವಣೆ ಮಾಡಿಕೊಂಡಿದೆ.

ದೂರು ದುಮ್ಮಾನಗಳನ್ನು ಸಮಪರ್ಕ ರೀತಿಯಲ್ಲಿ ನಿಭಾಯಿಸಲು ಪಿಎಫ್ ಇಲಾಖೆ ಮುಂದಾಗಿದೆ. ಈ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ, ಖಾತೆದಾರರಿಗೆ ಯಾವುದೇ ಅಡೆ ತಡೆ ಇಲ್ಲದೆ ಸೇವೆ ನೀಡಲು ಸಾಧ್ಯವಾಗಲಿದೆ.