* ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕ ಮೂಲದ ಉದ್ಯಮಿ ಎಲಾನ್‌ ಮಸ್ಕ್‌* ಟ್ವೀಟರ್‌ನಲ್ಲಿ ಸಮೀಕ್ಷೆ ನಡೆಸಿ 2 ದಿನದಲ್ಲಿ 4 ಲಕ್ಷ ಕೋಟಿ ಕಳೆದುಕೊಂಡ ಎಲಾನ್‌ ಮಸ್ಕ್‌

ವಾಷಿಂಗ್ಟನ್‌(ನ.11): ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕ ಮೂಲದ ಉದ್ಯಮಿ ಎಲಾನ್‌ ಮಸ್ಕ್‌ (Elon Musk), ಸುಮ್ಮನಿರಲಾಗದೇ ಮಾಡಿದ ಎಡವಟ್ಟಿನಿಂದ ಕೇವಲ 2 ದಿನದಲ್ಲಿ ಅಂದಾಜು 4 ಲಕ್ಷ ಕೋಟಿ ರು. ಸಂಪತ್ತು ಕಳೆದುಕೊಂಡಿದ್ದಾರೆ.

3 ದಿನಗಳ ಹಿಂದೆ ಟ್ವೀಟ್‌ (Tweet) ಮಾಡಿದ್ದ ಮಸ್ಕ್‌, ನಾನು ಟೆಸ್ಲಾ ಕಂಪನಿಯಲ್ಲಿ ಹೊಂದಿರುವ ಷೇರಿನ ಪೈಕಿ ಶೇ.10ರಷ್ಟನ್ನು ಮಾರಬೇಕೇ ಎಂದು ತಮ್ಮ ಹಿಂಬಾಲಕರನ್ನು ಸಲಹೆ ಕೇಳಿದ್ದರು. ಅದರ ಬೆನ್ನಲ್ಲೇ, ತಮ್ಮ ಸಾಲ ತೀರಿಸಲು ಷೇರುಗಳನ್ನು ಮಾರಾಟ ಮಾಡಲು ಮಸ್ಕ್‌ (Elon Musk) ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅವರು ಇಂಥದ್ದೊಂದು ತಂತ್ರ ಮಾಡಿದ್ದಾರೆ ಎಂದೆಲ್ಲಾ ವರದಿಯಾಗಿತ್ತು.

ಈ ಸುದ್ದಿಗಳ ಬೆನ್ನಲ್ಲೇ ಟೆಸ್ಲಾ ಕಂಪನಿಯ (Tesla Company) ಷೇರುಗಳ ಮೌಲ್ಯ ಸತತ 2 ದಿನಗಳಿಂದ ಭಾರೀ ಇಳಿಕೆ ಕಂಡಿದೆ. ಹೀಗಾಗಿ ಮಸ್ಕ್‌ ಆಸ್ತಿಯಲ್ಲಿ 36 ಶತಕೋಟಿ ಡಾಲರ್‌ (3.75 ಲಕ್ಷ ಕೋಟಿ ರು.) ನಷ್ಟುಇಳಿಕೆಯಾಗಿದೆ.

2019ರಲ್ಲಿ ಆಗಿನ ವಿಶ್ವದ ನಂ.1 ಶ್ರೀಮಂತ ಜೆಫ್‌ ಬೆಜೋಸ್‌ ತಮ್ಮ ಪತ್ನಿ ಮೆಕೆನ್ಜಿ ಜೊತೆಗಿನ ವಿವಾಹ ವಿಚ್ಛೇದನ ಸುದ್ದಿ ಘೋಷಿಸಿದ ಬಳಿಕ ಅಮೆಜಾನ್‌ ಕಂಪನಿಯ ಷೇರು ಮೌಲ್ಯ ಕುಸಿತ ಕಂಡು, ಬೆಜೋಸ್‌ ಅವರ ಆಸ್ತಿಯಲ್ಲಿ ಒಂದೇ ದಿನ 2.70 ಲಕ್ಷ ಕೋಟಿ ರು. ಇಳಿಕೆಯಾಗಿತ್ತು. ಇದು ಈವರೆಗಿನ ಯಾವುದೇ ಶ್ರೀಮಂತರ ಆಸ್ತಿಯಲ್ಲಿ ಒಂದೇ ದಿನ ಆದ ಬಹುದೊಡ್ಡ ಇಳಿಕೆಯಾಗಿತ್ತು.

ಪಾಕಿಸ್ತಾನದ ಜಿಡಿಪಿಗಿಂತ ಹೆಚ್ಚು ಎಲನ್‌ ಮಸ್ಕ್‌ ಸಂಪತ್ತು!

ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ (Elon Musk) 300 ಶತಕೋಟಿ ಡಾಲರ್‌ (22.50 ಲಕ್ಷ ಕೋಟಿ ರು.) ಆಸ್ತಿ ಹೊಂದಿರುವ ವಿಶ್ವದ ಮೊದಲ ಧನಿಕ ಎನ್ನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್‌ (BloombergBillionaire) ಇಂಡೆಕ್ಸ್‌ನಲ್ಲಿ ಮಸ್ಕ್‌ ಆಸ್ತಿ ಶನಿವಾರ 311 ಶತಕೋಟಿ ಡಾಲರ್‌ಗೆ ಏರಿದೆ. ಇದರೊಂದಿಗೆ 300 ಶತಕೋಟಿ ಡಾಲರ್‌ ಕ್ಲಬ್‌ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಸ್ಕ್‌ ಅವರು ಟೆಸ್ಲಾ (Tesla) ವಾಹನ ಉದ್ಯಮ ಸೇರಿದಂತೆ ಹಲವು ಸಮೂಹಗಳ ಉದ್ದಿಮೆದಾರರು. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟುಟೆಸ್ಲಾ ಎಲೆಕ್ಟ್ರಿಕ್‌ ವಾಹನಗಳು ಒಮ್ಮಿಂದೊಮ್ಮೆಲೇ ಮಾರಾಟ ಕಂಡಿದ್ದರಿಂದ ಅಕ್ಟೋಬರ್‌ 25ರಂದು ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್‌ಗೆ (22.50 ಲಕ್ಷ ಕೋಟಿ ರು.) ಏರಿತ್ತು. ಇದೀಗ ಐದೇ ದಿನದಲ್ಲಿ ಅವರ ಆಸ್ತಿ 1.42 ಲಕ್ಷ ಕೋಟಿ ರು.ನಷ್ಟುಹೆಚ್ಚಿದೆ.

ಬ್ಲೂಮ್‌ಬರ್ಗ್‌ ಇಂಡೆಕ್ಸ್‌ನಲ್ಲಿ ಮಸ್ಕ್‌ ನಂತರದ ಸ್ಥಾನದಲ್ಲಿ ಜೆಫ್‌ ಬೆಜೋಸ್‌ (Jeff Bwzos) (14.62 ಲಕ್ಷ ಕೋಟಿ ರು), ಬೆರ್ನಾರ್ಡ್‌ ಅರ್ನಾಲ್ಟ್‌ (12.52 ಲಕ್ಷ ಕೋಟಿ ರು) ಇದ್ದಾರೆ. ಈ ಪಟ್ಟಿಯಲ್ಲಿ ರಿಲಯನ್ಸ್‌ ಒಡೆಯ ಮುಕೇಶ್‌ ಅಂಬಾನಿ 71.2 ಲಕ್ಷ ಕೋಟಿ ರು. (11ನೇ ಸ್ಥಾನ) ಹಾಗೂ ಗೌತಮ್‌ ಅದಾನಿ 5.77 ಲಕ್ಷ ಕೋಟಿ ರು. ಆಸ್ತಿ (13ನೇ ಸ್ಥಾನ) ಹೊಂದಿದ್ದಾರೆ.

ವಿಶ್ವದ ಟಾಪ್‌ 3 ಸಿರಿವಂತರು

ಎಲಾನ್‌ ಮಸ್ಕ್‌ 23.32 ಲಕ್ಷ ಕೋಟಿ ರು.

ಜೆಫ್‌ ಬೆಜೋಸ್‌ 14.62 ಲಕ್ಷ ಕೋಟಿ ರು.

ಬೆರ್ನಾರ್ಡ್‌ ಅರ್ನಾಲ್ಟ್‌ 12.52 ಲಕ್ಷ ಕೋಟಿ ರು.