Elon Musk: ಟ್ವಿಟರ್ ಆಯ್ತು, ಈಗ ಕೋಕಾ ಕೋಲಾ ಮೇಲೆ ಕಣ್ಣು; ಟ್ವೀಟ್ ಮೂಲಕ ಕಾಮಿಡಿ ಮಾಡ್ತಿದ್ದಾರಾ ಮಸ್ಕ್?
*ಕೋಕಾ ಕೋಲಾ ಖರೀದಿ ತನ್ನ ಮುಂದಿನ ಟಾರ್ಗೆಟ್ ಎಂದು ಟ್ವೀಟ್ ಮಾಡಿದ ಮಸ್ಕ್
*ಏ.26ರಂದು 3.25 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿಸಿದ್ದ ಮಸ್ಕ್
*ಕೊಕೇನ್ ಸೇರಿಸಲು ಕೋಕಾ ಕೋಲಾ ಖರೀದಿಸುತ್ತೇನೆ ಎಂದ ವಿಶ್ವದ ಶ್ರೀಮಂತ ಉದ್ಯಮಿ
ನ್ಯೂಯಾರ್ಕ್ (ಏ.28): ಜಗತ್ತಿನ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ (Twitter) ಖರೀದಿಸಿ ಸುದ್ದಿಯಲ್ಲಿರುವ ಎಲಾನ್ ಮಸ್ಕ್ (Elon Musk), ಈಗ ತಮ್ಮ ಮುಂದಿನ ಟಾರ್ಗೆಟ್ ಘೋಷಣೆ ಮಾಡುವ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ. ಕೋಕಾ ಕೋಲಾವನ್ನು (Coca Cola) ಖರೀದಿಸುವುದಾಗಿ ಗುರುವಾರ (ಏ.28) ಮಸ್ಕ್ ಟ್ವೀಟ್ (Tweet) ಮಾಡಿದ್ದಾರೆ. ಆದ್ರೆ ಮಸ್ಕ್ ಈ ಟ್ವೀಟ್ ಅನ್ನು ಗಂಭೀರವಾಗಿ ಮಾಡಿದ್ದಾರೋ ಅಥವಾ ತಮಾಷೆಯಾಗಿಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ(Tesla) ಕಂಪೆನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಏ.26ರಂದು 3.25 ಲಕ್ಷ ಕೋಟಿ ರೂಪಾಯಿಗೆ (44 ಬಿಲಿಯನ್ ಅಮೆರಿಕನ್ ಡಾಲರ್) ಟ್ವಿಟರ್ ಖರೀದಿಸಿದ್ದರು. ಈಗ ಕೋಕಾ ಕೋಲಾ ನನ್ನ ಮುಂದಿನ ಗುರಿ ಎಂದಿರುವ ಮಸ್ಕ್, ಇದಕ್ಕೇನು ಕಾರಣ ಎಂಬುದನ್ನು ಕೂಡ ವಿವರಿಸಿದ್ದಾರೆ.'ಕೊಕೇನ್ (Cocaine) ಅನ್ನು ಮತ್ತೆ ಹಾಕಲು ನಾನು ಕೋಕಾ ಕೋಲಾ (Coca Cola) ಖರೀದಿಸುತ್ತೇನೆ' ಎಂದಿದ್ದಾರೆ. ಈ ಟ್ವೀಟ್ ಮಾಡಿದ ತಕ್ಷಣ ಈ ಹಿಂದಿನ ತನ್ನ ಟ್ವೀಟ್ ವೊಂದರ ಸ್ಕ್ರೀನ್ ಶಾಟ್ ಅನ್ನು ಮಸ್ಕ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ 'ಈಗ ನಾನು ಮೆಕ್ ಡೊನಾಲ್ಡ್ಸ್ ಖರೀದಿಸಲು ಮುಂದಾಗಿದ್ದೇನೆ ಹಾಗೂ ಎಲ್ಲ ಐಸ್ ಕ್ರೀಂ ಮಷಿನ್ ಗಳನ್ನು ಸರಿಪಡಿಸುತ್ತೇನೆ' ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲ,ಈ ಟ್ವೀಟ್ ಗೆ ತನ್ನ ಕಾಲನ್ನು ತಾನೇ ಎಳೆದುಕೊಳ್ಳುವಂತಹ ಪ್ರತಿಕ್ರಿಯೆ ನೀಡಿರುವ ಮಸ್ಕ್ 'ಕೇಳಿ, ನಾನು ವಿಸ್ಮಯಗಳನ್ನು ಮಾಡಲಾರೆ' ಎಂದಿದ್ದಾರೆ.
Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
1980ರ ದಶಕದಲ್ಲಿ ಕೋಕಾ ಕೋಲಾ ಸಾಫ್ಟ್ ಡ್ರಿಂಕ್ಸ್ ನಲ್ಲಿ ಕೊಕೇನ್ ಬಳಸಲಾಗುತ್ತಿತ್ತು. ಆಗ ಅದನ್ನು ಔಷಧೀಯ ಗುಣವುಳ್ಳ ವಸ್ತುವೆಂದೇ ಪರಿಗಣಿಸಲಾಗಿತ್ತು.ಆದ್ರೆ ಯಾವಾಗ ಅಮೆರಿಕದಲ್ಲಿ ಕೊಕೋನ್ ಪದಾರ್ಥಗಳ ಬಳಕೆ ಮೇಲೆ ನಿರ್ಬಂಧ ಹೇರಲಾಯಿತೋ ಆಗ ಕೋಕೋ ಕೋಲಾದಲ್ಲಿ ಅದರ ಬಳಕೆ ನಿಲ್ಲಿಸಲಾಯಿತು.
ಕಳೆದ ಕೆಲವು ದಿನಗಳಿಂದ ಎಲಾನ್ ಮಸ್ಕ್ ಒಂದಿಲ್ಲೊಂದು ಟ್ವೀಟ್ ಮೂಲಕ ಸುದ್ದಿಯಲ್ಲಿರುವ ಜೊತೆಗೆ ಜನರಲ್ಲಿ ಕುತೂಹಲ ಮೂಡಿಸುತ್ತಿದ್ದಾರೆ ಕೂಡ. ಟ್ವಿಟರ್ ನಲ್ಲಿ ಸದಾ ಸಕ್ರಿಯವಾಗಿರುವ ಮಸ್ಕ್ 5 ವರ್ಷಗಳ ಹಿಂದೆಯೇ ದೈತ್ಯ ಮೈಕ್ರೋಬ್ಲಾಗಿಂಗ್ ಸಂಸ್ಥೆ ಖರೀದಿಗೆ ಆಸಕ್ತಿ ಹೊಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿರುವ ಹಳೆಯ ಟ್ವೀಟ್ ವೊಂದು (tweet) ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. 2017ರ ಡಿಸೆಂಬರ್ 21ರಂದು ಮಸ್ಕ್ ಹಾಗೇ ಸುಮ್ಮನೆ “I love Twitter” ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಟ್ವಿಟರ್ (Twitter) ಬಳಕೆದಾರರೊಬ್ಬರು ಆ ಸಂಸ್ಥೆಯನ್ನೇ ಖರೀದಿಸುವಂತೆ ಮಸ್ಕ್ ಗೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್ 'ಇದಕ್ಕೆ ಎಷ್ಟು? ಎಂದು ಪ್ರಶ್ನಿಸಿದ್ದರು.
Elon Musk: 2017ರಲ್ಲೇ ಟ್ವಿಟರ್ ಖರೀದಿಸುವ ಕನಸು ಕಂಡಿದ್ದಎಲಾನ್ ಮಸ್ಕ್! ವೈರಲ್ ಆಯ್ತು 5 ವರ್ಷ ಹಳೆಯ ಟ್ವೀಟ್
ಹೊಸ ಸೋಷಿಯಲ್ ಮೀಡಿಯಾ ಕಂಪೆನಿಯೊಂದನ್ನು ಸ್ಥಾಪಿಸಬೇಕಾ? ಎಂದು ಮಾರ್ಚ್ ನಲ್ಲಿ ಮಸ್ಕ್ ತನ್ನ ಟ್ವಿಟರ್ ಫಾಲೋವರ್ಸ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಮಸ್ಕ್ ಅವರ ಫಾಲೋವರ್ಸ್, 'ಟ್ವಿಟರ್ ಖರೀದಿಗೆ ಅವಕಾಶವಿರುವಾಗ ಹೊಸದನ್ನು ಪ್ರಾರಂಭಿಸುವ ಅಗತ್ಯವೇನಿದೆ?' ಎಂದು ಪ್ರಶ್ನಿಸಿದ್ದರು. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮಸ್ಕ್ , ಏಪ್ರಿಲ್ ತಿಂಗಳ ಆರಂಭದಲ್ಲಿ ಟ್ವಿಟರಿನ ಶೇ.9.2 ರಷ್ಟು ಪಾಲುದಾರಿಕೆ ಅಥವಾ 7.35 ಕೋಟಿ ಷೇರು ಖರೀದಿಸಿದರು. ಇದಾದ ಕೆಲವು ದಿನಗಳ ಬಳಿಕ ಟ್ವಿಟರ್ ನ ಶೇ.100ರಷ್ಟು ಷೇರುಗಳನ್ನು ಖರೀದಿಸಿದ್ದರು. ಹೀಗೆ ಸದಾ ಒಂದಿಲ್ಲೊಂದು ಕುತೂಹಲಕಾರಿ ಹೇಳಿಕೆ ನೀಡೋ ಮಸ್ಕ್ ಅವರ ಕೋಕೋ ಕೋಲಾ ಖರೀದಿ ಟ್ವೀಟ್ ಮುಂದೊಂದು ದಿನ ನಿಜವಾದ್ರೂ ಆಗ್ಬಹುದು. ಏಕೆಂದ್ರೆ ಎಲಾನ್ ಮಸ್ಕ್ ಅಂದ್ರೇನೆ ಹಾಗೇ. ತಮಾಷೆಯಾಗಿ ಹೇಳಿ ಗಂಭೀರವಾಗಿ ಕಾರ್ಯರೂಪಕ್ಕೆ ತರುವ ವ್ಯಕ್ತಿ!