Electoral Bonds:ಎಸ್ ಬಿಐ ಶಾಖೆಗಳಲ್ಲಿ ಅ.4ರಿಂದ 13ರ ತನಕ ಲಭ್ಯ; ಯಾರು ಖರೀದಿಸಬಹುದು?
ಚುನಾವಣಾ ಬಾಂಡ್ ಗಳು ಅಕ್ಟೋಬರ್ ನಲ್ಲಿ ಖರೀದಿಗೆ ಲಭ್ಯವಿವೆ. ಎಸ್ ಬಿಐ ಶಾಖೆಗಳಲ್ಲಿ ಈ ಬಾಂಡ್ ಗಳು ಅ.4ರಿಂದ 13ರ ತನಕ ಖರೀದಿಸಬಹುದು.

ನವದೆಹಲಿ (ಸೆ.30): 27ನೇ ಹಂತದ ಚುನಾವಣಾ ಬಾಂಡ್ ಗಳ ಮಾರಾಟ ಅಕ್ಟೋಬರ್ 4ರಿಂದ 13ರ ತನಕ ನಡೆಯಲಿದೆ. ಈ ಬಾಂಡ್ ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕಿನ (ಎಸ್ ಬಿಐ) 29 ಶಾಖೆಗಳಲ್ಲಿ ಖರೀದಿಸಬಹುದು. ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಲು ಬಯಸುವ ವ್ಯಕ್ತಿ ಅಥವಾ ಸಂಸ್ಥೆಅಥವಾ ಕಂಪನಿಗಳು ಚುನಾವಣಾ ಬಾಂಡ್ಗಳನ್ನು ಖರೀದಿಸಬಹುದು. 1,000ರೂ., 10,000ರೂ., 1ಲಕ್ಷ ರೂ., 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಲಭಿಸುತ್ತವೆ. ಈ ಬಾಂಡ್ ಗಳನ್ನು ಡಿಜಿಟಲ್ ಪಾವತಿ ಅಥವಾ ಚೆಕ್ ಮೂಲಕ ಖರೀದಿಸಬೇಕು. ಇನ್ನು ಚುನಾವಣಾ ಬಾಂಡ್ ಖರೀದಿಗೆ ನಗದು ಬಳಸುವಂತಿಲ್ಲ. ಹೀಗೆ ಖರೀದಿಸಿದ ಚುನಾವಣಾ ಬಾಂಡ್ ಗಳನ್ನು ಖರೀದಿದಾರ ತಾನು ಇಚ್ಛಿಸುವ ರಾಜಕೀಯ ಪಕ್ಷಕ್ಕೆ ನೀಡಬೇಕು. ಹೀಗೆ ಪಡೆದ ಚುನಾವಣಾ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು 15 ದಿನಗಳೊಳಗೆ ರಿಡೀಮ್ ಮಾಡಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 29 ಅಧಿಕೃತ ಶಾಖೆಗಳಲ್ಲಿ ಅಕ್ಟೋಬರ್ 4ರಿಂದ 13ರ ತನಕ ಚುನಾವಣಾ ಬಾಂಡ್ ಗಳು ಲಭ್ಯವಿರಲಿವೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಏನಿದು ಚುನಾವಣಾ ಬಾಂಡ್?
ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಚುನಾವಣಾ ಬಾಂಡ್ ಗಳನ್ನು ಬಳಸಲಾಗುತ್ತಿದೆ. ರಾಜಕೀಯ ದೇಣಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಲಾಗಿದೆ.
ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯ ಶುದ್ಧೀಕರಣಕ್ಕೆ 2017ರಲ್ಲಿ ಬಾಂಡ್ ಗಳನ್ನು ಪರಿಚಯಿಸಲಾಗಿತ್ತು.
ನಿವೃತ್ತಿ ಜೀವನಕ್ಕೆ ಹೂಡಿಕೆ ಮಾಡೋರಿಗೆ VPF ಬೆಸ್ಟ್ ಆಯ್ಕೆ, ಯಾಕೆ? ಈ 5 ಕಾರಣಗಳಿಗೆ!
ಯಾರು ಖರೀದಿಸಬಹುದು?
ಭಾರತದ ಯಾವುದೇ ನಾಗರಿಕ ಅಥವಾ ಸಂಸ್ಥೆ ಅಥವಾ ಕಂಪನಿ ಚುನಾವಣಾ ಬಾಂಡ್ ಗಳನ್ನು ಖರೀದಿಸಬಹುದು. ಒಬ್ಬ ವ್ಯಕ್ತಿ ಚುನಾವಣಾ ಬಾಂಡ್ ಗಳನ್ನು ಏಕಾಂಗಿಯಾಗಿ ಅಥವಾ ಇನ್ನೊಬ್ಬ ವ್ಯಕ್ತಿ ಜೊತೆಗೆ ಜಂಟಿಯಾಗಿ ಖರೀದಿಸಬಹುದು. ಎಲ್ಲ ಕೆವೈಸಿ ನಿಯಮಗಳನ್ನು ಪೂರ್ಣಗೊಳಿಸಿದ ಹಾಗೂ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ ಬಳಿಕವಷ್ಟೇ ಚುನಾವಣಾ ಬಾಂಡ್ ಗಳನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ. ಇನ್ನು ಚುನಾವಣಾ ಬಾಂಡ್ ನಲ್ಲಿ ಖರೀದಿದಾರನ ಹೆಸರು ಇರೋದಿಲ್ಲ. ಈ ಬಾಂಡ್ ಗಳು ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ 10 ದಿನಗಳ ಕಾಲ ಖರೀದಿಗೆ ಲಭ್ಯವಿರುತ್ತದೆ.
ಯಾರು ಸ್ವೀಕರಿಸಬಹುದು?
ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಲು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಿಂದಿನ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಸ್ವೀಕರಿಸಲು ಅವಕಾಶವಿಲ್ಲ.
2000 ರೂ. ನೋಟು ವಾಪಸ್‌ಗೆ ಇವತ್ತೇ ಕೊನೆಯ ದಿನ: ಗಡುವು ಮುಕ್ತಾಯ ಬಳಿಕ ನೋಟು ಅಮಾನ್ಯ?
ಚುನಾವಣಾ ಬಾಂಡ್ ಗಳನ್ನು ಖರೀದಿಸೋದು ಹೇಗೆ?
ಚುನಾವಣಾ ಬಾಂಡ್ ಗಳನ್ನು ಈ ಮೇಲೆ ತಿಳಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) 29 ಶಾಖೆಗಳಿಂದ ಖರೀದಿಸಬಹುದು. ಈ ಬಾಂಡ್ ಗಳು 1,000ರೂ., 10,000ರೂ., 1ಲಕ್ಷ ರೂ., 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಲ್ಲಿ ಲಭಿಸುತ್ತವೆ. ಎಸ್ ಬಿಐ ಈ ಶಾಖೆಗಳು ಲಖನೌ, ಶಿಮ್ಲಾ, ಡೆಹ್ರಾಡೂನ್, ಕೋಲ್ಕತ್ತ, ಗುವಾಹಟಿ, ಚೆನ್ನೈ, ಪಟ್ನಾ, ನವದೆಹಲಿ, ಚಂಡೀಗಢ, ಶ್ರೀನಗರ, ಗಾಂಧಿನಗರ, ಭೋಪಾಲ್, ರಾಯ್ಪುರ ಹಾಗೂ ಮುಂಬೈನಲ್ಲಿವೆ.
ಖರೀದಿಸಿದ ಚುನಾವಣಾ ಬಾಂಡ್ ಗಳನ್ನು ಖರೀದಿದಾರ ತಾನು ಇಚ್ಛಿಸುವ ರಾಜಕೀಯ ಪಕ್ಷಕ್ಕೆ ನೀಡಬೇಕು. ಹೀಗೆ ಪಡೆದ ಚುನಾವಣಾ ಬಾಂಡ್ ಗಳನ್ನು ರಾಜಕೀಯ ಪಕ್ಷಗಳು 15 ದಿನಗಳೊಳಗೆ ರಿಡೀಮ್ ಮಾಡಬೇಕು. ಚುನಾವಣಾ ಬಾಂಡ್ ಗಳ ರಿಡೀಮ್ ಮಾಡಿದ ಮೊತ್ತವನ್ನು ಆ ರಾಜಕೀಯ ಪಕ್ಷದ ಖಾತೆಗೆ ಬ್ಯಾಂಕ್ ಗೆ ಬಾಂಡ್ ಜಮೆ ಮಾಡಿದ ದಿನವೇ ಕ್ರೆಡಿಟ್ ಮಾಡಲಾಗುತ್ತದೆ. ಚುನಾವಣಾ ಬಾಂಡ್ ಗಳನ್ನು ಅರ್ಹ ರಾಜಕೀಯ ಪಕ್ಷ ಅಧಿಕೃತ ಬ್ಯಾಂಕ್ ಖಾತೆ ಮೂಲಕ ಮಾತ್ರ ನಗದೀಕರಿಸಲು ಅವಕಾಶವಿದೆ.