ನಿವೃತ್ತಿ ಜೀವನಕ್ಕೆ ಹೂಡಿಕೆ ಮಾಡೋರಿಗೆ VPF ಬೆಸ್ಟ್ ಆಯ್ಕೆ, ಯಾಕೆ? ಈ 5 ಕಾರಣಗಳಿಗೆ!
ನಿವೃತ್ತಿ ನಂತರದ ಬದುಕಿಗಾಗಿ ಹೂಡಿಕೆ ಮಾಡೋರಿಗೆ ವಿಪಿಎಫ್ ಅತ್ಯುತ್ತಮ ಆಯ್ಕೆ. ವಿಪಿಎಫ್ ನಲ್ಲಿ ಹೂಡಿಕೆ ಮಾಡೋದು ಹೇಗೆ? ಇದ್ಯಾಕೆ ಅತ್ಯುತ್ತಮ ಹೂಡಿಕೆ ಆಯ್ಕೆ? ಇಲ್ಲಿದೆ ಮಾಹಿತಿ.

Business Desk:ನಿವೃತ್ತಿ ಬಳಿಕದ ಬದುಕಿಗೆ ಉಳಿತಾಯ ಮಾಡೋದು ಅಗತ್ಯ. ಇದ್ರಿಂದ ನಿವೃತ್ತಿ ಜೀವನವನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯವಾಗುತ್ತದೆ. ನಿವೃತ್ತಿ ನಂತರದ ಬದುಕಿಗೆ ನೆರವಾಗುವ ಅನೇಕ ಯೋಜನೆಗಳಿವೆ. ಕೇಂದ್ರ ಸರ್ಕಾರ ಕೂಡ ದೀರ್ಘಾವಧಿಯ ಉಳಿತಾಯ ಹಾಗೂ ಹಣಕಾಸಿನ ಸುರಕ್ಷತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಲವು ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ ಸೇರಿದೆ. ಇವೆರಡನ್ನು ಹೊರತುಪಡಿಸಿ ದೀರ್ಘಾವಧಿಯ ಹೂಡಿಕೆ ಮಾಡಲು ಬಯಸೋರು ಹಾಗೂ ನಿವೃತ್ತಿ ನಂತರದ ಬದುಕಿಗೆ ಉಳಿತಾಯ ಮಾಡಲು ಇಚ್ಛಿಸೋರು ಸ್ವಯಂಪ್ರೇರಿತ ಭವಿಷ್ಯ ನಿಧಿ (ವಿಪಿಎಫ್) ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಿಪಿಎಫ್ ಹೆಚ್ಚಿನ ಆದಾಯ ಹಾಗೂ ಆಕರ್ಷಕ ತೆರಿಗೆ ಪ್ರಯೋಜನಗಳನ್ನು ಕೂಡ ಒಳಗೊಂಡಿದೆ. ವಿಪಿಎಫ್ ಅನ್ನು ಇಪಿಎಫ್ ಗೆ ಪರ್ಯಾಯವಾಗಿ ರೂಪಿಸಲಾಗಿದೆ. ನಿವೃತ್ತಿ ಬಳಿಕ ಉಳಿತಾಯ ಹೆಚ್ಚಿಸಲು ಪ್ರಯತ್ನಿಸೋರಿಗೆ ಇದು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ವಿಪಿಎಫ್ ನಲ್ಲಿ ಏಕೆ ಹೂಡಿಕೆ ಮಾಡಬೇಕು? ಇದರಿಂದ ಹೂಡಿಕೆದಾರರಿಗೆ ಏನೆಲ್ಲ ಲಾಭಗಳಿವೆ?
1.ಒಂದು ಹೂಡಿಕೆ ಮೂರು ಪ್ರಯೋಜನ:
ವಿಪಿಎಫ್ (VPF) ಉಳಿತಾಯ ಯೋಜನೆಯಾಗಿದ್ದು, ಉತ್ತಮ ರಿಟರ್ನ್ಸ್ ಹಾಗೂ ತೆರಿಗೆ ಉಳಿತಾಯದ ಪ್ರಯೋಜನಗಳನ್ನು ನೀಡುತ್ತದೆ. ಹೂಡಿಕೆ ಮೊತ್ತ, ಒಟ್ಟು ಠೇವಣಿ ಹಾಗೂ ಅದಕ್ಕೆ ಸಿಕ್ಕ ಬಡ್ಡಿ ಮೇಲೆ ವಿಪಿಎಫ್ ತೆರಿಗೆ ವಿನಾಯ್ತಿಗಳನ್ನು ನೀಡುತ್ತದೆ. ಈ ವಿಶೇಷ ಸೌಲಭ್ಯದ ಕಾರಣ ಹೂಡಿಕೆದಾರರು ತಮ್ಮ ತೆರಿಗೆ ಭಾರವನ್ನು ತಗ್ಗಿಸಿಕೊಳ್ಳುವ ಮೂಲಕ ಉಳಿತಾಯವನ್ನು ಹೆಚ್ಚಿಸಿಕೊಳ್ಳಬಹುದು. ಇನ್ನು ವಿಪಿಎಫ್ ಅಪಾಯಮುಕ್ತ ಹೂಡಿಕೆ ಆಯ್ಕೆಯಾಗಿದ್ದು, ಅದು ಯಾವುದೇ ಸಮಯದಲ್ಲಿ ವಿತ್ ಡ್ರಾ ಮಾಡಲು ಅವಕಾಶ ನೀಡುತ್ತದೆ. ಅಲ್ಲದೆ, ಉದ್ಯೋಗ ಬದಲಾಯಿಸುವ ಸಮಯದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಖಾತೆ ಬದಲಾವಣೆಗೆ ಅವಕಾಶ ನೀಡುತ್ತದೆ. ಇನ್ನು ಕೊಡುಗೆದಾರರು ತಮ್ಮ ಠೇವಣಿ ಮೊತ್ತವನ್ನು ವರ್ಷದಲ್ಲಿ ಎರಡು ಬಾರಿ ಹೊಂದಾಣಿಕೆ ಮಾಡಬಹುದು.
ಠೇವಣಿದಾರರಿಗೆ ಗುಡ್ ನ್ಯೂಸ್: ಆರ್‌ಡಿ ಖಾತೆ ಬಡ್ಡಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ
2.ಸುರಕ್ಷತೆ
ವಿಪಿಎಫ್ ಸರ್ಕಾರ ನಿರ್ವಹಿಸುವ ಯೋಜನೆಯಾಗಿದೆ. ಇದು ನೀವು ಕಷ್ಟಪಟ್ಟು ದುಡಿದ ಹಣ ವ್ಯರ್ಥವಾಗದಂತೆ ಉಳಿತಾಯ ಮಾಡುತ್ತದೆ. ಹೀಗಾಗಿ ವಿಪಿಎಫ್ ನಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ. ಇದೇ ಕಾರಣಕ್ಕೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಬಯಸೋರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಾರೆ.
3.ಇಪಿಎಫ್ ರೀತಿ ಅಧಿಕ ರಿಟರ್ನ್
ವಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ಕೂಡ ಇಪಿಎಫ್ ಮಾದರಿಯಲ್ಲೇ ಅಧಿಕ ಬಡ್ಡಿದರ ಸಿಗುತ್ತದೆ. ಪ್ರಸ್ತುತ ವಿಪಿಎಫ್ ಶೇ.8.15ರಷ್ಟು ಬಡ್ಡಿದರ ಹೊಂದಿದೆ. ಈ ಬಡ್ಡಿದರ ಇತರ ಉಳಿತಾಯ ಯೋಜನೆಗಳು ನೀಡುವ ಬಡ್ಡಿದರಕ್ಕಿಂತ ಹೆಚ್ಚಿದೆ. ಈ ಅಧಿಕ ಬಡ್ಡಿದರ ಅನೇಕರು ಇದರಲ್ಲಿ ಹೂಡಿಕೆ ಮಾಡಲು ಮುಖ್ಯಕಾರಣವಾಗಿದೆ.
4.ತೆರಿಗೆ ಪ್ರಯೋಜನ
ಹೂಡಿಕೆ ಆಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಎರಿಗೆ ಪ್ರಯೋಜನದ ಬಗ್ಗೆ ನೋಡುತ್ತಾರೆ. ವಿಪಿಎಫ್ ಹೂಡಿಕೆ ಕೂಡ ತೆರಿಗೆ ಪ್ರಯೋಜನಗಳನ್ನೊಳಗೊಂಡಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಮಾಡಿದ ಹೂಡಿಕೆಗೆ ತೆರಿಗೆದಾರರು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವಿಪಿಎಫ್ ನಲ್ಲಿ ಮಾಡಿದ ಹೂಡಿಕೆ ಮಾತ್ರವಲ್ಲ, ಅದರ ಮೇಲೆ ಗಳಿಸಿದ ಬಡ್ಡಿ ಕೂಡ ತೆರಿಗೆಮುಕ್ತವಾಗಿದೆ. ವಾರ್ಷಿಕ 1.50 ಲಕ್ಷ ರೂ. ತನಕದ ಹೂಡಿಕೆ ಮೇಲೆ ಮಾತ್ರ ತೆರಿಗೆ ವಿನಾಯ್ತಿ ಲಭ್ಯವಿದೆ.
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಘೋಷಣೆ ಗಡುವು ಜನವರಿ1ಕ್ಕೆ ವಿಸ್ತರಣೆ
5.ವಿತ್ ಡ್ರಾ ಮಾಡೋದು ಸುಲಭ
ನಿವೃತ್ತಿ ಬಳಿಕ ಹಾಗೂ ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ವಿಪಿಎಫ್ ನಲ್ಲಿ ಅವಕಾಶವಿದೆ. ಈ ಮೂಲಕ ಹೂಡಿಕೆದಾರರಿಗೆ ಸಾಕಷ್ಟು ಆರ್ಥಿಕ ಫ್ಲೆಕ್ಸಿಬಿಲಿಟಿಯನ್ನು ಈ ಯೋಜನೆ ನೀಡುತ್ತದೆ. ನಿವೃತ್ತಿ ಅಥವಾ ರಾಜೀನಾಮೆ ಬಳಿಕ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಇನ್ನು 5 ವರ್ಷದೊಳಗೆ ಹಣ ವಿತ್ ಡ್ರಾ ಮಾಡಿದ್ರೆ ಯಾವುದೇ ತೆರಿಗೆ ವಿನಾಯಿತಿ ಸಿಗೋದಿಲ್ಲ.