ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಕಂಪನಿ ಹೀರೋ ಮೋಟೋಕಾರ್ಪ್‌ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್‌ ಮುಂಜಾಲ್‌ ಹಾಗೂ ಇತರರಿಗೆ ಸೇರಿದ ಆಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯಕ್ಕೆ ಭಾರಿ ಮೊತ್ತದ ಹಣ ಚಿನ್ನಾಭರಣ ಸಿಕ್ಕಿದೆ.

ನವದೆಹಲಿ: ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಕಂಪನಿ ಹೀರೋ ಮೋಟೋಕಾರ್ಪ್‌ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್‌ ಮುಂಜಾಲ್‌ ಹಾಗೂ ಇತರರಿಗೆ ಸೇರಿದ ಆಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಬರೋಬ್ಬರಿ 25 ಕೋಟಿ ರು. ಮೌಲ್ಯದ ಚಿನ್ನದ ಮತ್ತು ವಜ್ರದ ಆಭರಣಗಳು, ಭಾರತೀಯ ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ಬುಧವಾರ ತಿಳಿಸಿದೆ. ಇದರೊಂದಿಗೆ ಅವರ ಅಕ್ರಮವನ್ನು ಸಾಬೀತುಪಡಿಸುವ ಹಲವು ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೆ 2014-15 ರಿಂದ 2018-19ರ ಅವಧಿಯಲ್ಲಿ ಸುಮಾರು 54 ಕೋಟಿ ರು.ಗಳಷ್ಟು ವಿದೇಶಿ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಲಾಗಿದ್ದು ಇದನ್ನು ಪವನ್‌ ತಮ್ಮ ವೈಯಕ್ತಿಕ ಖರ್ಚಿಗಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ ಎಂಬ ಆರೋಪದ ವಿರುದ್ಧ ದಾಳಿ ನಡೆದಿದೆ.

ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ ಮತ್ತು ಇತರರ ವಿರುದ್ಧ ರೇಡ್‌ ನಡೆಸಿತ್ತು. ಪ್ರಸ್ತುತ, Hero Motorcorp ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಇದು ಕಳೆದ ಎರಡು ದಶಕಗಳಲ್ಲಿ ತನ್ನ ಜಾಗತಿಕ ಅಸ್ತಿತ್ವವನ್ನು ಬಲಪಡಿಸಿದೆ. ಪ್ರಸ್ತುತ, ಇದು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಮತ್ತು ಮಧ್ಯ ಅಮೆರಿಕದ 40 ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ನಿರ್ದೇಶಕರಲ್ಲದೆ, ಪವನ್ ಮುಂಜಾಲ್ ಮುಂಜಾಲ್ ಆಕ್ಮೆ ಪ್ಯಾಕೇಜಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಪ್ಯಾನ್ ಮೈನಿಂಗ್ ಪ್ರೈವೇಟ್ ಲಿಮಿಟೆಡ್, ಬಹದ್ದೂರ್ ಚಂದ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಹೀರೋ ಇನ್ವೆಸ್ಟ್‌ಕಾರ್ಪ್ ಪ್ರೈವೇಟ್ ಲಿಮಿಟೆಡ್, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ ಹೀರೋ ಫ್ಯೂಚರ್ ಎನರ್ಜಿಸ್ ಗ್ಲೋಬಲ್ ಲಿಮಿಟೆಡ್ ಮತ್ತು ರಾಕ್‌ಮ್ಯಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯ ಭಾಗವಾಗಿದ್ದಾರೆ.

 PMLA ಎಂದರೇನು?
ತೆರಿಗೆ ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣಗಳ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ, 2002 ರಲ್ಲಿ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ (PMLA) ಜಾರಿಗೆ ತರಲಾಯಿತು. ಈ ಕಾಯ್ದೆಯು ಅಕ್ರಮವಾಗಿ ಗಳಿಸಿದ ಮೂಲಗಳಿಂದ ಗಳಿಸಿದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಅಥವಾ ಸಾರ್ವಜನಿಕ ಪ್ರಾಧಿಕಾರವನ್ನು ಶಕ್ತಗೊಳಿಸುತ್ತದೆ. ಅಕ್ರಮವಾಗಿ ಗಳಿಸಿದ ಹಣವನ್ನು ಕಾನೂನುಬದ್ಧ ಹಣವನ್ನಾಗಿ ಪರಿವರ್ತಿಸುವ ಅತಿರೇಕದ ಅಭ್ಯಾಸಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ.

ವ್ಯಕ್ತಿಯೊಬ್ಬರು ಅಕ್ರಮ ಹಣ ವರ್ಗಾವಣೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅವರು ಮೂರರಿಂದ ಏಳು ವರ್ಷಗಳವರೆಗೆ ಜೈಲು ಸೇರಬಹುದು. ತಪ್ಪಿತಸ್ಥ ವ್ಯಕ್ತಿ ದಂಡಕ್ಕೂ ಗುರಿಯಾಗುತ್ತಾರೆ.

ಅಕ್ರಮ ಹಣ ವರ್ಗಾವಣೆ ಕೇಸ್‌: ಹೀರೋ ಮೋಟಾರ್ ಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ನಿವಾಸದ ಮೇಲೆ ಇಡಿ ರೇಡ್‌