- ರುದ್ರಮೂರ್ತಿ, ಆರ್ಥಿಕ ತಜ್ಞ

ಕೋವಿಡ್‌-19 ಪರಿಣಾಮ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿರುವ ಕಾರ್ಯಕ್ರಮಗಳು ಜಾಗತಿಕ ಮಟ್ಟದಲ್ಲಿ ಭಾರತ ಪ್ರಕಾಶಿಸುವಂತೆ ಮಾಡಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ವಾಸ್ತವವಾಗಿ ನಿರೀಕ್ಷೆಗೂ ಮೀರಿದ ಪ್ಯಾಕೇಜ್‌ ಆಗಿದೆ. ಕೇಂದ್ರ ಸರ್ಕಾರವು ಕೋವಿಡ್‌-19ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಕೇವಲ 3ರಿಂದ 5 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಣೆ ಮಾಡಬಹುದು ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಅದಕ್ಕೂ ದೊಡ್ಡದಾಗಿ ಭಾರತದ ಶೇ.10ರಷ್ಟುಜಿಡಿಪಿಯನ್ನು ಪ್ಯಾಕೇಜ್‌ ಆಗಿ ಕೊಡುತ್ತಿರುವುದರಿಂದ ದೇಶದ ಎಲ್ಲಾ ವರ್ಗದವರಿಗೂ ಆರ್ಥಿಕ ನೆರವು ನೀಡಲು ಅವಕಾಶವಾಗುತ್ತದೆ.

ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ತೆರಿಗೆ ಪಾವತಿದಾರರು, ರೈತರು, ಕಾರ್ಖಾನೆ ಮಾಲೀಕರು ಸೇರಿದಂತೆ ಎಲ್ಲರಿಗೂ ಆರ್ಥಿಕ ನೆರವು ಕಲ್ಪಿಸುವ ಒಳ್ಳೆಯ ಪ್ರಯತ್ನವನ್ನು ಈ ಪ್ಯಾಕೇಜ್‌ ಮೂಲಕ ಮಾಡಲಾಗಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕಾ ಕ್ಷೇತ್ರಕ್ಕೆ ಭಾರಿ ಒತ್ತು ನೀಡಲಾಗಿದೆ. ಈ ಕ್ಷೇತ್ರದ ಉದ್ಯಮಿಗಳಿಗೆ ಯಾವುದೇ ಜಾಮೀನು ಅಥವಾ ಭದ್ರತೆಯಿಲ್ಲದೆ (ಕೋಲಾಟ್ರಲ್‌ ಫ್ರೀ) ಸಾಲ ನೀಡುವ ಯೋಜನೆ ಮಹತ್ವದ್ದು. ಇದು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿರುವಂತಹ ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತಿರುವ ಕೈಗಾರಿಕೆಗಳಿಗೆ ವರದಾನವಾಗಲಿದೆ.

ಹಾಗೆಯೇ, ಜನ ಸಾಮಾನ್ಯರ ತೆರಿಗೆ ರಿಟನ್ಸ್‌ರ್‍ ಫೈಲಿಂಗ್‌ ದಿನಾಂಕ ವಿಸ್ತರಣೆಯು ಸಹ ಪ್ರಯೋಜನಕಾರಿ. ಟಿಡಿಎಸ್‌ ದರದಲ್ಲಿ ಶೇ.25ರಷ್ಟುಕಡಿತಗೊಳಿಸಿರುವುದರಿಂದ ಜನರ ಬಳಿ ಸ್ವಲ್ಪ ಹಣ ಉಳಿದು, ಬೇಡಿಕೆ ಸೃಷ್ಟಿಯಾಗುತ್ತದೆ. ಇದು ಮಾರುಕಟ್ಟೆಪುನಶ್ಚೇತನಕ್ಕೆ ಅನುಕೂಲವಾಗುತ್ತದೆ. ಇನ್ನು ಸ್ವಾವಲಂಬಿ ಭಾರತಕ್ಕೆ ಆದ್ಯತೆ ನೀಡಿರುವುದು ತುಂಬಾ ಆಶಾದಾಯಕವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಹೆಚ್ಚು ಬಳಸಬೇಕು. ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟಕ್ಕೆ ಹೋಗಬೇಕೆಂಬ ಮಾತು ಸಹ ಮುಂದಿನ ದಿನಗಳಲ್ಲಿ ಭಾರತ ದೇಶವನ್ನು ಇಡೀ ವಿಶ್ವವೇ ನೋಡುವಂತೆ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ, ಹಣಕಾಸು ಸಚಿವರು ಮತ್ತು ಆರ್‌ಬಿಐ ಪರಿಪೂರ್ಣ ಹೋಂ ವರ್ಕ್ ಮಾಡಿಕೊಂಡು ತಯಾರಿಸಿದ ಸಮಗ್ರ ಪ್ಯಾಕೇಜ್‌ ಇದು. ಒಟ್ಟಾರೆ ಈ ಆರ್ಥಿಕ ಪ್ಯಾಕೇಜ್‌ನಿಂದ ಭಾರತವು ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುವುದನ್ನು ನಿರೀಕ್ಷಿಸಬಹುದು.